Site icon Vistara News

Bomb Threat: ಗಂಡನ ಮೇಲಿನ ಸಿಟ್ಟಿಗೆ ಫೇಕ್‌ ಬಾಂಬ್‌ ಇಟ್ಟಳು! ಇದರ ಹಿಂದಿತ್ತು Love ಕಹಾನಿ

Bomb Threat

ಆನೇಕಲ್: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಇರದೇ ಅದು ಸೇಡಾಗಿ ಮುಂದುವರಿದ ಪರಿಣಾಮ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಮೊಬೈಲ್‌ ಹೊಡೆದು ಹಾಕಿದ ಸಿಟ್ಟಿಗೆ ಪತ್ನಿಯೊಬ್ಬಳು ಪ್ರಿಯಕರನ ಮಾತು ಕೇಳಿ ಆರ್‌ಡಿಎಕ್ಸ್‌ ಬಾಂಬ್‌ ಸ್ಫೋಟಿಸುವುದಾಗಿ (Bomb Threat) ಸಂದೇಶ ರವಾನೆ ಮಾಡಿ ಜೈಲುಪಾಲಾಗಿದ್ದಾಳೆ.

ಉತ್ತರ ಕರ್ನಾಟಕ ಮೂಲದ ಕಿರಣ್ ಮತ್ತು ವಿದ್ಯಾರಾಣಿ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಆನೇಕಲ್‌ನ ಮಾರುತಿ ಬಡಾವಣೆಯಲ್ಲಿ ಕಳೆದೊಂದು ವರ್ಷದಿಂದ ವಾಸವಿದ್ದರು. ಈ ನಡುವೆ ವಿದ್ಯಾರಾಣಿ ಸೋಶಿಯಲ್‌ ಮೀಡಿಯಾಗೆ ಹೆಚ್ಚು ಪ್ರಭಾವಿತಳಾಗಿ ಹಗಲು ರಾತ್ರಿ ಎನ್ನದೇ ಮೊಬೈಲ್‌ನಲ್ಲೇ ಮುಳುಗಿ ಹೋಗುತ್ತಿದ್ದಳು. ಹೀಗಿದ್ದಾಗ ಆ್ಯಪ್‌ವೊಂದರಲ್ಲಿ ವಿದ್ಯಾರಾಣಿಗೆ ರಾಮ್‌ಪ್ರಸಾದ್‌ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಆತನೊಂದಿಗೆ ನಿರಂತರವಾಗಿ ಚಾಟಿಂಗ್‌ ಮಾಡುತ್ತಾ ಆತ್ಮೀಯತೆ ಅಗತ್ಯಕ್ಕಿಂತ ಹೆಚ್ಚಾಗಿ ಬೆಳೆಸಿಕೊಂಡಿದ್ದಳು.

ಕಳೆದ ನಾಲ್ಕೈದು ತಿಂಗಳಿಂದ ಸೀರೆ ಭುಟ್ಟ ಕಟಿಂಗ್‌ ಮಾಡುವ ಕೆಲಸ ಇದೆ ಎಂದು ನೆಪ ಹೇಳಿ, ರಾತ್ರಿ 12ಗಂಟೆವರೆಗೆ ಮೊಬೈಲ್‌ನಲ್ಲಿ ಮುಳುಗಿ ಹೋಗುತ್ತಿದ್ದಳು. ಇತ್ತ ಪತ್ನಿ ವಿದ್ಯಾರಾಣಿ ನಡವಳಿಕೆಯಲ್ಲಿ ಆಗುತ್ತಿದ್ದ ಬದಲಾವಣೆಯನ್ನು ಪತಿ ಕಿರಣ್‌ ಗಮನಿಸಿದ್ದರು. ಈ ಬಗ್ಗೆ ಕೇಳಲು ಹೋದರೆ ನನ್ನ ಮೇಲೆ ಅನುಮಾನ ಪಡುತ್ತೀಯಾ ಎಂದು ಜಗಳ ಮಾಡಿದ್ದರಿಂದ ಪತಿ ಕಿರಣ್‌ ಸುಮ್ಮನಾಗಿದ್ದ.

ಆದರೆ ಜಗಳದ ನಂತರವೂ ಆಕೆ ಚಾಟಿಂಗ್‌ನಲ್ಲಿ ಮುಳುಗಿದಾಗ ಮೊಬೈಲ್‌ ಅನ್ನು ಪರಿಶೀಲಿಸಿದ್ದಾರೆ. ಈ ವೇಳೆ ಮೋನಿಷಾ 2 ಎಂದು ನಂಬರ್‌ ಸೇವ್‌ ಮಾಡಿಕೊಂಡು ಚಾಟಿಂಗ್‌ ಮಾಡುತ್ತಿರುವುದು ಕಣ್ಣಿಗೆ ಬಿದ್ದಿದೆ. ಚಾಟಿಂಗ್‌ನಲ್ಲಿ ಐ ಲವ್‌ ಯೂ ಟೂ ಎಂಬ ಮಸೇಜ್‌ ನೋಡಿದ ಕಿರಣ್‌ಗೆ ಅಘಾತವಾಗಿದೆ. ಈ ವೇಳೆ ಆ ನಂಬರ್‌ ಅನ್ನು ಟ್ರೂ ಕಾಲರ್‌ ಮೂಲಕ ಪರಿಶೀಲಿಸಿದಾಗ ಅದು ರಾಮ್‌ಬಾಬು ಹೆಸರನ್ನು ತೋರಿಸಿದೆ. ಆಗಲೂ ವಿದ್ಯಾರಾಣಿ ಬಳಿ ಏನನ್ನು ಕೇಳದೇ ಕಿರಣ್‌ ತಾನು ಬಳಸುತ್ತಿದ್ದ ನಂಬರ್‌ ಅನ್ನು ಪತ್ನಿಗೆ ಕೊಟ್ಟು, ಆಕೆ ಬಳಸುತ್ತಿದ್ದ ಸೀಮ್‌ ಅನ್ನು ತಾವು ಬಳಸಲು ಶುರು ಮಾಡಿದ್ದರು.

ಇದನ್ನೂ ಓದಿ: Physical Abuse : ವೈನ್‌ ಕೊಟ್ಟು ರೇಪ್‌ ಮಾಡಿದ್ದ ನಿವೃತ್ತ ಐಎಎಸ್‌; ದೌರ್ಜನ್ಯದ ಹಿಂದಿನ ಕಹಾನಿ ಏನು?

ಮಾರನೇ ದಿವಸ ವಿದ್ಯಾರಾಣಿ ನಂಬರ್‌ಗೆ ಫೋನ್‌ ಮಾಡಿದ ರಾಮ್‌ಬಾಬು, ವಿದ್ಯಾದೀದಿ ಎಲ್ಲಿದ್ದಾರೆ? ನೀನು ವಿದ್ಯಾಳನ್ನು ಕಿಡ್ನಾಪ್‌ ಮಾಡಿದ್ದೀಯಾ, ಅವರ ನಂಬರ್‌ ನೀನು ಯಾಕೆ ಬಳಕೆಮಾಡುತ್ತಿದ್ದೀಯಾ ಎಂದೆಲ್ಲ ಪ್ರಶ್ನೆಗಳ ಸುರಿಮಳೆಯನ್ನೇ ಸುರಿದಿದ್ದಾನೆ. ಈ ವೇಳೆ ಕಿರಣ್‌ ನೀನು ಯಾರೆಂದು ಕೇಳಿದಾಗ ನಾನು ಮೋನಿಶಾಳ ಗಂಡ, ನಾನೊಬ್ಬ ಪೊಲೀಸ್‌ ಅಧಿಕಾರಿ ಎಂದು ಹೇಳಿ ಫೋನ್‌ ಕಾಲ್‌ ಕಟ್‌ ಮಾಡಿದ್ದಾನೆ.

ಇತ್ತ ಮನೆಯಲ್ಲಿ ನಡೆದಿದ್ದ ಎಲ್ಲವನ್ನೂ ವಿದ್ಯಾರಾಣಿ ಬೇರೆ ನಂಬರ್ ಮೂಲಕ ರಾಮ್‌ ಪ್ರಸಾದ್‌ಗೆ ತಿಳಿಸುತ್ತಿದ್ದಾಗ, ಕಿರಣ್‌ ಸಿಟ್ಟಿಗೆದ್ದು ಮೊಬೈಲ್‌ ಕಿತ್ತುಕೊಂಡಿದ್ದಾರೆ. ಇಷ್ಟೊತ್ತಲ್ಲಿ ನನ್ನ ಹೆಂಡತಿ ಜತೆಗೆ ಮಾತನಾಡುತ್ತಿದ್ದೀಯಾ ಯಾರೋ ನೀನು ಎಂದು ಬೈದು ಫೋನ್‌ ಕಾಲ್‌ ಮಾಡಿದ್ದಾರೆ. ಪತ್ನಿ ವಿದ್ಯಾಗೆ ಈ ಬಗ್ಗೆ ವಿಚಾರಿಸಿದಾಗ ನನ್ನ ಫ್ರೆಂಡ್‌ ಮೋನಿಷಾಳ ಗಂಡನನೊಂದಿಗೆ ಮಾತನಾಡುತ್ತಿದ್ದೆ ಎಂದು ಹೇಳಿದ್ದಾಳೆ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಆಕೆ ಮಾತು ಕೇಳದೇ ಇದ್ದಾಗ ಸಿಟ್ಟಿನಿಂದ ಕಿರಣ್‌ ವಿದ್ಯಾರಾಣಿಯ ಮೊಬೈಲ್ ಅನ್ನು ಹೊಡೆದು ಹಾಕಿದ್ದರು.

ಕೊಲೆ ಬೆದರಿಕೆ ಹಾಕಿದ ಪ್ರಿಯಕರ!

ಇತ್ತ ಕಿರಣ್‌ ಪತ್ನಿ ವಿದ್ಯಾರಾಣಿಗೆ ಬಲವಂತ ಮಾಡಿ ಆತ ಯಾರೆಂದು ಕೇಳಿದಾಗ ಅಪ್ನಾ ಆ್ಯಪ್‌ನಿಂದ ರಾಮ್‌ ಪ್ರಸಾದ್‌ ಎಂಬಾತ ಪರಿಚಯವಾಗಿದ್ದಾನೆ. ನಾವಿಬ್ಬರು ಪ್ರೀತಿಸುತ್ತಿದ್ದೇವೆ, ನಿನಗೆ ತಿಳಿಯದಂತೆ ಆತನೊಂದಿಗೆ ಚಾಟಿಂಗ್‌ ಮಾಡುತ್ತಿದ್ದೆ. ಆದರೆ ಈ ವಿಚಾರ ನಿನಗೆ ತಿಳಿದರೆ ಗಲಾಟೆ ಮಾಡುವೆ ಎಂದು ರಾಮ್‌ ಪ್ರಸಾದ್‌ನನ್ನು ಅವಾರ್ಡ್‌ ಮಾಡಲು ಶುರು ಮಾಡಿದ್ದೇ ಎಂದು ಹೇಳಿದ್ದಾಳೆ.

ಆದರೆ ಈ ನಡುವೆ ಅಜಿತ್‌ ಎಂಬಾತ ರಾಮ್‌ ಪ್ರಸಾದ್‌ ನಂಬರ್‌ನಿಂದ ವಿದ್ಯಾರಾಣಿಗೆ ಮಸೇಜ್‌ ಮಾಡಿ ಬೆದರಿಕೆ ಹಾಕಿದ್ದನಂತೆ. ರಾಮ್‌ನೊಟ್ಟಿಗೆ ಮಸೇಜ್‌ ಮಾಡಿ ಮಾತಾಡು ಇಲ್ಲದಿದ್ದರೆ, ನಿನ್ನ ಗಂಡನನ್ನು ಕೊಲ್ಲುತ್ತೇವೆ. ಬಳಿಕ ನೀನೆ ಕೊಲ್ಲುವಂತೆ ಹೇಳಿದ್ದಾಗಿ ಪೊಲೀಸರಿಗೆ ಸರೆಂಡರ್‌ ಆಗುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ಹೀಗಾಗಿ ರಾಮ್‌ ಪ್ರಸಾದ್‌ನೊಟ್ಟಿಗೆ ಚಾಟಿಂಗ್‌ ಮುಂದುವರಿಸಿದ್ದೇನೆ ಎಂದು ವಿದ್ಯಾರಾಣಿ ಪತಿ ಕಿರಣ್‌ನೊಟ್ಟಿಗೆ ಹೇಳಿದ್ದಾಳೆ.

ಗಂಡನ ಮೇಲೆ ಸಿಟ್ಟು ಸಿಡುಕು

ಇದಕ್ಕೂ ಮೊದಲು ಪತಿ ಕಿರಣ್‌ ಹೊಡೆದು ಗಲಾಟೆ ಮಾಡಿದ್ದ ವಿಚಾರವನ್ನೆಲ್ಲ ವಿದ್ಯಾರಾಣಿ ಅಜಿತ್‌ನೊಟ್ಟಿಗೆ ಹೇಳಿದ್ದಾಳೆ. ಈ ವೇಳೆ ಕಿರಣ್‌ಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಅಜಿತ್‌ ಪ್ಲ್ಯಾನ್‌ವೊಂದನ್ನು ಮಾಡಿದ್ದ. ನಾನು ಕಳುಹಿಸುವ ಮೆಸೇಜ್‌ ಅನ್ನು ನಿನ್ನ ಪತಿಯ ನಂಬರ್‌ನಿಂದ ಫಾರ್ವಡ್ ಮಾಡು ಎಂದು ವಿದ್ಯಾರಾಣಿಗೆ ಸೂಚನೆ ನೀಡಿದ್ದ. ಹೀಗೆ ಮಸೇಜ್‌ ಮಾಡಿದರೆ ಪೊಲೀಸರು ನಿನ್ನ ಗಂಡನನ್ನು ಅರೆಸ್ಟ್‌ ಮಾಡುತ್ತಾರೆ ಎಂದಿದ್ದ.

ಅದರಂತೆ ವಿದ್ಯಾರಾಣಿ ಪತಿ ಕಿರಣ್‌ನ ಮೇಲಿನ ಸಿಟ್ಟಿಗೆ ಮೊಬೈಲ್‌ನಿಂದ ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗೆ ಆರ್‌ಡಿಎಕ್ಸ್‌ (RDX) ಬಾಂಬ್ ಹಾಕುವುದಾಗಿ ಕಳೆದ ಡಿಸೆಂಬರ್ 5ರಂದು ಮೆಸೇಜ್‌ ಕಳುಹಿಸಿದ್ದಳು. ಬಳಿಕ ತನಗೆ ಏನು ತಿಳಿಯದಂತೆ ಪತಿಯ ಮೊಬೈಲ್‌ನಿಂದ ಮೆಸೇಜ್ ಡಿಲೀಟ್ ಮಾಡಿ ಸುಮ್ಮನಾಗಿದ್ದಳು.

ಇತ್ತ ಬಾಂಬ್‌ ಬೆದರಿಕೆ ಸಂದೇಶ ಬಂದಾಗ ತನಿಖಾ ಸಂಸ್ಥೆಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ, ಸಂದೇಶ ಬಂದ ನಂಬರ್‌ನ ಮೂಲ ಹುಡುಕಿ ಹೊರಟಿದ್ದರು. ನೇರ ಕಿರಣ್‌ ಮನೆಯನ್ನು ತಲುಪಿ ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಿಗೆ ಬಂದಿದೆ. ಪತಿ ಮೇಲಿನ ಸಿಟ್ಟಿಗೆ ಈ ರೀತಿ ಸೇಡು ತೀರಿಸಿಕೊಂಡಿದ್ದಾಗಿ ಪತ್ನಿ ವಿದ್ಯಾರಾಣಿ ಬಾಯ್ಬಿಟ್ಟಿದ್ದಾಳೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಪತಿ ಕಿರಣ್‌ ದೂರಿನ್ವಯ ಎಫ್‌ಐಆರ್ ದಾಖಲಾಗಿದ್ದು, ವಿದ್ಯಾರಾಣಿಗೆ ಈ ರೀತಿ ಐಡಿಯಾ ಕೊಟ್ಟ ಗೆಳಯನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version