ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಶಿವಾಜಿನಗರದ ಆಜಾಂ ಮಸೀದಿಯಲ್ಲಿ (Shivaji nagar Mosque) ಬಾಂಬ್ (Bomb threat) ಇಡಲಾಗಿದೆ ಎಂಬ ಸುದ್ದಿಯೊಂದು ಬುಧವಾರ ರಾತ್ರಿ ಬೆಂಗಳೂರು ಪೊಲೀಸರನ್ನು (Bangalore Police) ಅಕ್ಷರಶಃ ತಲ್ಲಣಗೊಳಿಸಿತು. ಕಳೆದ ಕೆಲವು ವರ್ಷಗಳಿಂದ ದೊಡ್ಡ ಮಟ್ಟದ ಸಾಮೂಹಿಕ ಭಯೋತ್ಪಾದಕ ಕೃತ್ಯಗಳಿಲ್ಲದೆ (Terrorist activity) ಒಂದಿಷ್ಟು ನೆಮ್ಮದಿಯಲ್ಲಿದ್ದ ಪೊಲೀಸರಿಗೆ ಒಮ್ಮಿಂದೊಮ್ಮೆಗೇ ಮಸೀದಿಯಲ್ಲಿ ಬಾಂಬ್ ಇಡಲಾಗಿದೆ ಎಂಬ ಸುದ್ದಿ ಭಾರಿ ಆತಂಕಕ್ಕೆ ಕಾರಣವಾಯಿತು. ಅವರು ಸಕಲ ವ್ಯವಸ್ಥೆಗಳನ್ನು ಮಾಡಿಕೊಂಡು ಹೋಗಿ ಎಲ್ಲ ರೀತಿಯಲ್ಲೂ ತಪಾಸಣೆ ಮಾಡಿದಾಗ ಯಾವುದೇ ಅಪಾಯಕಾರಿ ವಸ್ತುಗಳು (Dangerous materials) ಸಿಗದೆ ನಿಟ್ಟುಸಿರು ಬಿಟ್ಟರು.
ಇಷ್ಟಕ್ಕೆಲ್ಲ ಕಾರಣವಾಗಿದ್ದು ರಾತ್ರಿ 10 ಗಂಟೆಗೆ ಪೊಲೀಸ್ ನಿಯಂತ್ರಣ ಕೇಂದ್ರಕ್ಕೆ ಬಂದ ಆ ಒಂದು ಫೋನ್ ಕರೆ. 112 ನಂಬರ್‌ಗೆ ಕರೆ ಮಾಡಿದ ವ್ಯಕ್ತಿ ಶಿವಾಜಿ ನಗರದ ಮಸೀದಿಯಲ್ಲಿ ಬಾಂಬ್ ಇಡಲಾಗಿದೆ. ಇದು ಭಯೋತ್ಪಾದಕರ ಕೃತ್ಯ. ನನಗೆ ಯಾವುದೋ ಮೂಲದಿಂದ ಗೊತ್ತಾಗಿದೆ. ಅಪಾಯವನ್ನು ತಪ್ಪಿಸುವುದು ನಿಮ್ಮ ಕೈಲಿದೆ ಎಂದು ಹೇಳಿಬಿಟ್ಟಿದ್ದ.
ರಾತ್ರಿ 1೦ ಗಂಟೆ ಹೊತ್ತಿಗೆ ಕರೆ ಬಂದ ತಕ್ಷಣವೇ ಕಂಟ್ರೋಲ್ ರೂಂ ಅಲರ್ಟ್ ಆಯಿತು. ಕೂಡಲೇ ಸಂಬಂಧಿತ ಠಾಣೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಲಾಯಿತು. ಇದ್ದಕ್ಕಿದ್ದಂತೆ ವಿಧಾನಸೌಧ, ಕ್ವೀನ್ಸ್ ರೋಡ್, ಚಿನ್ನಸ್ವಾಮಿ ಸ್ಟೇಡಿಯಂ, ಶಿವಾನಂದ ಸರ್ಕಲ್, ಮಿಲ್ಲರ್ ರೋಡ್, ಎಂ.ಜಿ. ರೋಡ್ ಸೇರಿದಂತೆ ಎಲ್ಲ ಕಡೆಗಳಲ್ಲಿ ಪೊಲೀಸರ ಓಡಾಟ ಹೆಚ್ಚಾಯಿತು.
ಕಾಲ್‌ನಲ್ಲಿ ಬಂದ ಮಾಹಿತಿಯನ್ನು ಆಧರಿಸಿ ಶಿವಾಜಿನಗರ ಪೊಲೀಸರು ತಕ್ಷಣವೇ ದೌಡಾಯಿಸಿದರು. ಆಗಷ್ಟೇ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಾ ದೌಡಾಯಿಸಿದರು. ಹಾಗಂತ ನೇರವಾಗಿ ಏನೂ ಮಾಡುವಂತಿರಲಿಲ್ಲ.
ಬಾಂಬ್ ನಿಷ್ಕ್ರಿಯ ದಳಗಳು, ಶ್ವಾನ ಪಡೆ, ನುರಿತ ತಜ್ಞರನ್ನು ಕರೆಸಲಾಯಿತು. ಮಸೀದಿಯಲ್ಲಿ ಯಾರಾದರೂ ಇದ್ದರೆ ಹೊರಗೆ ಬನ್ನಿ ಎಂದು ಸೂಚಿಸಿ ಹೊರಗೆ ತರಲಾಯಿತು. ಮಸೀದಿಯ ಒಳಗೆ ಯಾರೂ ಇಲ್ಲ ಎನ್ನುವುದನ್ನು ದೃಢೀಕರಿಸಲಾಯಿತಾದರೂ ಬಾಂಬ್ ಗಾಗಿ ಹುಡುಕಾಟ ನಡೆಯಿತು.
ಕರೆ ಮಾಡಿದವನು ಬೇರೆ ಇದು ಭಯೋತ್ಪಾದಕರು ಬಾಂಬ್ ಇಟ್ಟಿದ್ದಾರೆ ಎಂದು ಬಿಟ್ಟಿದ್ದ. ಮೊದಲೇ ಮಸೀದಿ ಬೇರೆ. ಸಿಡಿದರೆ ಏನೇನೋ ಪರಿಣಾಮಗಳಾಗಬಹುದು ಎಂದು ಪೊಲೀಸರು ಯೋಚಿಸಿದರು.
ಅಂತೂ ಕೊನೆಗೆ ಧೈರ್ಯ ಮಾಡಿ ಸಕಲ ರೀತಿಯಲ್ಲೂ ಸಜ್ಜಾಗಿ ಪೊಲೀಸರು ಶಿವಾಜಿ ನಗರದ ಆಜಾಂ ಮಸೀದಿ ಪ್ರವೇಶ ಮಾಡಿದರು. ಮಸೀದಿಯ ಇಂಚಿಂಚು ಭಾಗಗಳನ್ನು ಹುಡುಕಾಡಿದರು. ಆದರೆ ಅವರಿಗೆ ಅಪಾಯಕಾರಿ ಎನಿಸುವ ಯಾವ ವಸ್ತುಗಳೂ ಸಿಗಲಿಲ್ಲ. ಇದರಿಂದಾಗಿ ಅವರೆಲ್ಲರೂ ನಿಟ್ಟುಸಿರು ಬಿಟ್ಟರು. ಶಿವಾಜಿ ನಗರದ ಜನರೂ ನಿಟ್ಟುಸಿರು ಬಿಟ್ಟರು.
ಎಲ್ಲ ಮುಗಿದ ಮೇಲೆ ಅವರೆಲ್ಲರ ಸಿಟ್ಟು ತಿರುಗಿದ್ದು ಹುಸಿ ಕರೆಯನ್ನು ಮಾಡಿದ ಆ ವ್ಯಕ್ತಿಯ ಕಡೆಗೆ. ಆತ ಸುಳ್ಳು ಕರೆ ಮಾಡಿ ನಿದ್ದೆಗೆಡಿಸಿದ ಎನ್ನುವುದೊಂದೇ ಅವರ ಸಿಟ್ಟಿನ ಕಾರಣವಾಗಿರಲಿಲ್ಲ. ಶಿವಾಜಿ ನಗರದಂಥ ಸೂಕ್ಷ್ಮ ಪ್ರದೇಶದ ಬಗ್ಗೆ ಹೀಗೆಲ್ಲ ಸುಳ್ಳು ಸುದ್ದಿ ಹರಡಿದರೆ ಅದು ಯಾವ್ಯಾವುದೋ ತಿರುವುಗಳನ್ನು ಪಡೆದುಕೊಂಡು ಅಪಾಯಕ್ಕೆ ಆಹ್ವಾನ ನೀಡಬಹುದು ಎನ್ನುವುದು ಸಿಟ್ಟಿನ ಮೂಲ.
ಇದೀಗ ಕರೆ ಮಾಡಿದಾತನಿಗಾಗಿ ಶಿವಾಜಿನಗರ ಪೊಲೀಸರು ಹುಡುಕಾಡುತ್ತಿದ್ದಾರೆ. ಆತ ಬೆಂಗಳೂರಿನ ಹೊರಭಾಗದಿಂದ ಕರೆ ಮಾಡಿ ಈ ಕೀಟಲೆ ಮಾಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಇದನ್ನೂ ಓದಿ: Rain News: ಕರಾವಳಿ, ಮಲೆನಾಡಿನಲ್ಲಿ ಮುಂದುವರಿದ ಮಳೆ ಆರ್ಭಟ, ಶಾಲೆಗಳಿಗೆ ಇಂದೂ ರಜೆ