ಬೆಂಗಳೂರು: ನಗರದ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದ ಪ್ರಕರಣದಲ್ಲಿ, ಬೆದರಿಕೆ ಬಂದ ಎಲ್ಲ ಶಾಲೆಗಳಿಂದ ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಕೆಲವು ಶಾಲೆಗಳು ಇಂದು ರಜೆ ಪ್ರಕಟಿಸಿದ್ದು, ಇನ್ನು ಕೆಲವೆಡೆ ಮಕ್ಕಳು ಬರಲು ಹಿಂದೇಟು ಹಾಕಿದ್ದಾರೆ.
ದುಷ್ಕರ್ಮಿಗಳು ಬೆಂಗಳೂರು ನಗರದ 48 ಹಾಗೂ ಗ್ರಾಮಾಂತರದ 22 ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಕಳಿಸಿದ್ದರು. ಖರಿಜೈಟ್ಸ್ ಎಂಬ ಮೇಲ್ ಐಡಿಯಿಂದ ಬೆದರಿಕೆ ಬಂದಿತ್ತು. 48 ಶಾಲೆಗಳ ಬೆದರಿಕೆ ಬಗ್ಗೆ 48 ಕೇಸ್ ದಾಖಲು ಮಾಡಲಾಗಿದೆ. ಆಯಾ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಕಮಿಷನರ್ ಸೂಚನೆ ನೀಡಿದ್ದಾರೆ. ನಂತರ ಎಲ್ಲಾ ಕೇಸುಗಳನು ಕ್ರೋಢೀಕರಿಸಿ ತನಿಖೆ ನಡೆಸಲಾಗುತ್ತದೆ.
ಶಾಲೆಗೆ ಬರಲು ಮಕ್ಕಳು ಹಿಂದೇಟು, ರಜೆ
ಬಾಂಬ್ ಬೆದರಿಕೆ ಬಂದ ಕೆಲವು ಶಾಲೆಗಳಿಗೆ ಇಂದು ತರಗತಿಗೆ ಬರಲು ಮಕ್ಕಳು ಹಿಂದೇಟು ಹಾಕಿದ್ದಾರೆ. ಇಂದು ರಜೆ ಬಗ್ಗೆಯೂ ಗೊಂದಲ ಮೂಡಿದೆ. ಕೆಲವು ಶಾಲೆಗಳು ರಜೆಯ ಬಗ್ಗೆ ಮೇಲ್ ಮಾಡಿವೆ. ನಿನ್ನೆ ಬಸವೇಶ್ವರ ನಗರದ ನ್ಯಾಷನಲ್ ಅಕ್ಯಾಡೆಮಿ ಫಾರ್ ಲರ್ನಿಂಗ್‌ಗೆ ಬೆದರಿಕೆ ಬಂದಿತ್ತು. ಇಂದು ಶಾಲೆಗೆ ಭಾಗಶಃ ಮಕ್ಕಳು ಗೈರಾಗಿದ್ದಾರೆ. ಪೋಷಕರಿಗೆ ಮೆಸೇಜ್ ಕಳುಹಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಪ್ರತಿ ಶನಿವಾರ ಕೆಲ ತರಗತಿಗಳಿಗೆ ರಜೆ ನೀಡಲಾಗಿರುತ್ತದೆ, ಕೆಲವು ತರಗತಿ ಮಕ್ಕಳಿಗೆ ಶನಿವಾರ ತರಗತಿಗಳು ಇರುತ್ತವೆ. ಇಂದು ತರಗತಿ ಇರುವ ಮಕ್ಕಳು ಶಾಲೆಗೆ ಬರುತ್ತಿದ್ದಾರೆ ಎಂದು ಶಾಲಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಆದರೆ ಮಕ್ಕಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡಿದ್ದು, ನಿನ್ನೆಯ ಆತಂಕದಿಂದ ಇಂದು ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸಿಲ್ಲ.
ನಿನ್ನೆ ಬಾಂಬ್ ಬೆದರಿಕೆ ಬಂದ ಶಾಲೆಗಳ ಪೈಕಿ ಕೆಲ ಶಾಲೆಗಳು ಇಂದು ರಜೆ ಘೋಷಿಸಿವೆ. ಕೆಲ ಶಾಲೆಗಳು ಪ್ರತಿ ಶನಿವಾರ ಹಾಗೂ ಭಾನುವಾರ ರಜೆ ನೀಡಿರುತ್ತವೆ. ಅದರಂತೆ ಇಂದು ಕೆಲ ಶಾಲೆಗಳು ರಜೆ ಮಾಡಿದ್ದು, ಉಳಿದ ಶಾಲೆಗಳು ಯಥಾಸ್ಥಿತಿ ಆರಂಭವಾಗಿವೆ.
ತಲೆನೋವಾದ ಪ್ರಕರಣ
ನಗರದಲ್ಲಿ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿರುವ ಪ್ರಕರಣಗಳು ಪೊಲೀಸರಿಗೆ ತಲೆನೋವಾಗಿವೆ. ಈ ಹಿಂದೆ ಕೂಡ ಹಲವು ಬಾರಿ ಇದೇ ರೀತಿ ಬಾಂಬ್ ಬೆದರಿಕೆ ಮೇಲ್ ಕೇಸ್‌ಗಳು ದಾಖಲಾಗಿದ್ದವು.
2022ರಲ್ಲಿ ಬಾಂಬ್ ಬೆದರಿಕೆ ಮೇಲ್‌ಗಳು ತಲೆ ಕೆಡಿಸಿದ್ದವು. 2022ರ ಏಪ್ರಿಲ್‌ನಲ್ಲಿ ಏಳು ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಹೆಣ್ಣೂರು, ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಏಳು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ಶಾಲಾ ಪಾರ್ಕಿಂಗ್ ಆವರಣ, ಗಾರ್ಡನ್, ಮೇಲ್ಛಾವಣಿಗಳಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಹಾಕಿದ್ದರು. ತನಿಖೆ ವೇಳೆ ಸುಳ್ಳು ಎಂದು ಬೆಳಕಿಗೆ ಬಂದಿತ್ತು.
2020ರ ಜುಲೈನಲ್ಲಿ ಡಿಕೆ ಶಿವಕುಮಾರ್ ಒಡೆತನದ ಶಾಲೆಗೂ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಆರ್‌ಆರ್ ನಗರ ಠಾಣೆ ವ್ಯಾಪ್ತಿಯಲ್ಲಿರುವ ಶಾಲೆಗೆ ಮೇಲ್ ಬಂದಿತ್ತು. ಅದೇ ಶಾಲೆಯ ವಿದ್ಯಾರ್ಥಿಯೋರ್ವನಿಂದ ಮೇಲ್ ಕಳಿಸಲಾಗಿತ್ತು. ಪೊಲೀಸರು ತನಿಖೆ ನಡೆಸಿ ಪ್ರಕರಣ ಬಗೆಹರಿಸಿದ್ದರು.
ಇದನ್ನೂ ಓದಿ: Bomb Threat : 48 ಶಾಲೆಗಳಿಗೆ ಬಂದ ಬೆದರಿಕೆ EMail ಮೂಲ ಪತ್ತೆ, ಏನಿದು ಜರ್ಮನಿ ಕನೆಕ್ಷನ್?