ಬೆಂಗಳೂರು: ತನ್ನನ್ನು ಬಾಯ್ ಫ್ರೆಂಡ್ ಬಿಟ್ಟು ಹೋಗಬಾರದು ಎಂದು ಯುವತಿಯೊಬ್ಬಳು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ (hoax bomb threat call) ಕರೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹುಸಿ ಬಾಂಬ್ ಕರೆ (Bomb Threat) ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಯುವತಿ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾಳೆ.
ಪುಣೆ ಮೂಲದ ಇಂದ್ರ ರಾಜ್ವಾರ್ (29) ಆರೋಪಿ ಯುವತಿ. ಈಕೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಈಕೆಯ ಗೆಳೆಯ ಮೀರ್ ರಾಜಾ ಮೆಹ್ದಿ ಎಂಬಾತ ಬೆಂಗಳೂರಿನಿಂದ ಮುಂಬೈಗೆ ತೆರಳಲು ಏರ್‌ಪೋರ್ಟ್‌ಗೆ ಹೋಗಿದ್ದ. ಆದರೆ, ಆತ ತನ್ನನ್ನು ಬಿಟ್ಟು ಹೋಗಬಾರದು ಎಂದು ಯುವತಿ ಏರ್‌ಪೋರ್ಟ್‌ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಳು. ಗೆಳೆಯನನ್ನು ತಡೆಯುವ ಉದ್ದೇಶದಿಂದ ಯುವತಿ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಳು, ಆದರೆ, ಇದೀಗ ಆಕೆಗೆ ಸಂಕಷ್ಟ ಎದುರಾಗಿದೆ.
ವ್ಯಕ್ತಿಯೊಬ್ಬರ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದರಿಂದ ಸಿಬ್ಬಂದಿ ತಕ್ಷಣವೇ ಅಲರ್ಟ್ ಆಗಿ, ಮೀರ್ ರಾಜಾ ಮೆಹ್ದಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಆದರೆ ಯಾವುದೇ ಸ್ಫೋಟಕಗಳು ಕಂಡುಬರದ ಹಿನ್ನೆಲೆಯಲ್ಲಿ ಹುಸಿ ಬಾಂಬ್ ಬೆದರಿಕೆ ಬಂದಿದೆ ಎನ್ನುವುದು ತಿಳಿದುಬಂದಿದೆ.
ತನ್ನ ಗೆಳೆಯ ಮುಂಬೈ ವಿಮಾನ ಹತ್ತುವುದನ್ನು ತಡೆಯುವುದು ಆಕೆಯ ಉದ್ದೇಶವಾಗಿತ್ತು. ಆದರೆ, ಅದು ಉಲ್ಟಾ ಹೊಡೆದಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಜೂನ್ 26 ರಂದು ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏರ್‌ಪೋರ್ಟ್‌ನಲ್ಲಿ ಪರಿಶೀಲನೆ ನಡೆಸಿದಾಗ ಹುಸಿ ಬಾಂಬ್ ಕರೆ ಮಾಡಿದ್ದ ಯುವತಿ ಇಂದ್ರ ರಾಜ್ವಾರ್ ಕೂಡ ಅಲ್ಲೇ ಇದ್ದದ್ದು ಕಂಡುಬಂದಿದೆ. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಯುವತಿ ಮತ್ತು ಯುವಕ ಇಬ್ಬರೂ ಮುಂಬೈಗೆ ಪ್ರಯಾಣಿಸಲು ಆಗಮಿಸಿದ್ದರು ಎಂದು ತಿಳಿದುಬಂದಿದೆ. ಇಬ್ಬರೂ ಪ್ರತ್ಯೇಕವಾಗಿ ಟಿಕೆಟ್ ಕೂಡ ಬುಕ್ ಮಾಡಿದ್ದರು.
ಇದನ್ನೂ ಓದಿ | Viral News: ಶಾಕಿಂಗ್ ಘಟನೆ! ಬುದ್ದಿ ಹೇಳಿದ ಗುರುವನ್ನೇ ಚುಚ್ಚಿ ಕೊಂದ ವಿದ್ಯಾರ್ಥಿ
ಯುವತಿ ಮತ್ತು ಮೆಹ್ದಿ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದವು. ಹೀಗಾಗಿ ಮುಂಬೈಗೆ ಹೋಗುತ್ತಿದ್ದ ಯುವಕನನ್ನು ತಡೆಯಲು ಯುವತಿ ಏರ್‌ಪೋರ್ಟ್ ಸಹಾಯವಾಣಿಗೆ ಹುಸಿ ಬಾಂಬ್ ಕರೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.