ಬೆಂಗಳೂರು: ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಎಸ್. ಎಂ. ಕೃಷ್ಣ ಅವರಿಗೆ ಶನಿವಾರ ರಾತ್ರಿ ಜ್ವರ ಕಾಣಿಸಿಕೊಂಡ ಕಾರಣ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋವಿಡ್ ಹಾಗೂ ಜ್ವರಕ್ಕೆ ಸಂಬಂಧಿಸಿದ ಕೆಲವು ಪರೀಕ್ಷೆಗಳನ್ನು ಮಾಡಿ ಯಾವುದೇ ತೊಂದರೆ ಇಲ್ಲವೆಂಬ ಮಾಹಿತಿಯನ್ನು ವೈದ್ಯರು ತಿಳಿಸಿದ್ದಾರೆ ಎಂದು ಎಸ್.ಎಂ. ಕೃಷ್ಣ ಅವರ ಆಪ್ತ ಕಚೇರಿಯಿಂದ ಮಾಹಿತಿ ನೀಡಲಾಗಿತ್ತು. ಯಾವುದೇ ಊಹಾಪೊಹದ ಮಾಹಿತಿಗಳನ್ನು ಪ್ರಸಾರ ಮಾಡಬಾರದೆಂದು ಎಂದು ಕೋರಿದ್ದರು.
ಕೃಷ್ಣ ಅವರನ್ನು ಭೇಟಿ ಮಾಡಿದ ನಂತರ ಟ್ವೀಟ್ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಎಂ. ಕೃಷ್ಣ ಅವರು ಶೀಘ್ರ ಗುಣಮುಖರಾಗಲಿ, ಅವರ ಮಾರ್ಗದರ್ಶನ ಹಾಗೂ ಜನಸೇವೆಯ ಭಾಗ್ಯ ಮತ್ತೆ ದೊರಕುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಹ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಎಸ್. ಎಂ. ಕೃಷ್ಣ ಶೀಘ್ರ ಗುಣಮುಖರಾಗಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಹಾರೈಸಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ ಕೃಷ್ಣ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ | ಕೆಂಪೇಗೌಡರು ಯಾರೊಬ್ಬರ ಸ್ವತ್ತಲ್ಲ: ಮಾಜಿ ಸಿಎಂ ಎಸ್.ಎಂ. ಕೃಷ್ಣ