ನವ ದೆಹಲಿ: ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರವೀಣ್ ನೆಟ್ಟಾರು ಅವರ ಹತ್ಯೆ ಬಳಿಕ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಿಷೇಧಕ್ಕೆ ಎಲ್ಲ ಕಡೆ ಆಗ್ರಹ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೂಡಾ ಗಂಭೀರ ಚಿಂತನೆ ನಡೆಸುತ್ತಿವೆ ಎಂದು ಹೇಳಲಾಗಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಈ ಸಂಬಂಧ ಗುರುವಾರ ಸುಳಿವನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಹಲವು ದುಷ್ಕರ್ಮಿ ಕೃತ್ಯಗಳ ಹಿಂದೆ ಪಿಎಫ್‌ಐ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಷೇಧಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಗೃಹ ಇಲಾಖೆಯ ಜತೆ ಚರ್ಚೆ ಮಾಡಲಿದ್ದಾರೆ ಎಂದು ಪ್ರಲ್ಹಾದ ಜೋಶಿ ಅವರು ತಿಳಿಸಿದ್ದಾರೆ.
ಬಸವರಾಜ್ ಬೊಮ್ಮಾಯಿ ಅವರು ನನ್ನ ಜತೆ ಮಾತನಾಡುವ ವೇಳೆ ಪ್ರವೀಣ್ ನೆಟ್ಟಾರು ಅವರ ಹತ್ಯೆ ಹಿಂದೆ ಪಿಎಫ್‌ಐ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಇಂಥ ಸಂಘಟನೆಗಳನ್ನು ರಾಷ್ಟ್ರೀಯ ಮಟ್ಟದಲ್ಲೇ ಬ್ಯಾನ್ ಮಾಡಬೇಕಾಗಿದೆ ಎಂಬ ಅಭಿಪ್ರಾಯ ಬೊಮ್ಮಾಯಿ ಅವರದ್ದು. ಹೀಗಾಗಿ ಕೇಂದ್ರ ಗೃಹ ಇಲಾಖೆಯ ಜತೆ ಚರ್ಚೆ ನಡೆಸುವುದಾಗಿ ಬೊಮ್ಮಾಯಿ ಅವರು ತನಗೆ ತಿಳಿಸಿದ್ದಾಗಿ ಜೋಶಿ ಹೇಳಿದರು.
ಪಿಎಫ್‌ಐ ಸಂಘಟನೆಯ ದುಷ್ಕ್ಕರ್ಮಿಗಳು ದೇಶದ ಹಲವು ಕಡೆ ದುಷ್ಕೃತ್ಯಗಳನ್ನು ನಡೆಸುತ್ತಿದ್ದಾರೆ. ಪ್ರವೀಣ್ ಹಂತಕರಿಗೆ ಕೇರಳದಲ್ಲಿ ರಕ್ಷಣೆ ನೀಡಲಾಗುತ್ತಿದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರವ್ಯಾಪಿ ಬ್ಯಾನ್ ಮಾಡಬೇಕು ಎನ್ನುವುದು ಎಲ್ಲರ ವಾದವಾಗಿದೆ. ಇತ್ತೀಚೆಗೆ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೂ ಈ ದುಷ್ಟರ ಗುಂಪು ಸ್ಕೆಚ್ ಹಾಕಿತ್ತು.
ಹೊಸ ರೂಪ ಪಡೆಯದಂತೆ ಕ್ರಮ
ಈ ನಡುವೆ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ಪಿಎಫ್‌ಐ, ಎಸ್‌ಡಿಪಿಐ ಮೊದಲಾದ ಸಂಘಟನೆಗಳನ್ನು ಕೇವಲ ಬ್ಯಾನ್ ಮಾಡುವುದಲ್ಲ. ಅವುಗಳು ಮುಂದೆಂದೂ ಬೇರೆ ರೂಪುಗಳಲ್ಲಿ ಮರು ಹುಟ್ಟು ಪಡೆಯದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಹಿಂದೆ ಸಿಮಿ ಸಂಘಟನೆಯನ್ನು ಬ್ಯಾನ್ ಮಾಡಿದಾಗ ಅದು ಪಿಎಫ್‌ಐ, ಎಸ್‌ಡಿಪಿಐ ಮೊದಲಾದ ಗುಂಪುಗಳ ಮೂಲಕ ಹರಡಿಕೊಂಡಿದೆ. ಹೀಗಾಗಿ ಈ ಬಾರಿ ಈ ದುಷ್ಟಶಕ್ತಿಗಳು ಬೇರೆ ರೂಪದಲ್ಲಿ ಮೇಲೆದ್ದು ಬರದಂತೆ ನೋಡಿಕೊಳ್ಳಲಾಗುವುದು ಎಂದರು.
ಇಸ್ಲಾಂ ಭಯೋತ್ಪಾದನೆಯನ್ನು ಸಮಾಜ ಒಗ್ಗಟ್ಟಾಗಿ ಎದುರಿಸಬೇಕು. ಇಸ್ಲಾಂ ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದೆ. ಹೀಗಾಗಿ ಇವುಗಳನ್ನು ಉಗ್ರವಾಗಿ ಶಿಕ್ಷಿಸಬೇಕಾಗಿದೆ. ಈ ಕೆಲಸವನ್ನು ಸರಕಾರ ಮಾಡಲಿದೆ ಎಂದು ಸಿ.ಟಿ. ರವಿ ಹೇಳಿದರು.
ಇದನ್ನೂ ಓದಿ Explainer: ಏನಿದು ಪಿಎಫ್‌ಐ? ಯಾಕೆ ಬ್ಯಾನ್ ಒತ್ತಾಯ?