ಮುಂಬೈ/ಬೆಂಗಳೂರು: ಬೆಳಗಾವಿ ಗಡಿ ವಿಚಾರದಲ್ಲಿ ಆಗಾಗ ಮೂಗು (Border Dispue) ತೂರಿಸುವ, ಹುರುಳಿಲ್ಲದ ವಾದ ಮಾಡುವ, ಬೆಳಗಾವಿಯಲ್ಲಿ (Belagavi) ಹಿಂಸಾಚಾರಕ್ಕೆ ಪ್ರಚೋದಿಸುವ ಮಹಾರಾಷ್ಟ್ರಕ್ಕೆ ಭಾರಿ ಮುಖಭಂಗವಾಗಿದೆ. ಮಹಾರಾಷ್ಟ್ರದ ಮತ್ತಷ್ಟು ಹಳ್ಳಿ ಹಾಗೂ ಪಟ್ಟಣಗಳನ್ನು ಕರ್ನಾಟಕದ ಜತೆ ವಿಲೀನಗೊಳಿಸಬೇಕು ಎಂದು ಅಲ್ಲಿನ ಜನರೇ ಒತ್ತಾಯಿಸಿರುವುದು ಮಹಾರಾಷ್ಟ್ರಕ್ಕೆ ನುಂಗಲಾರದ ತುತ್ತಾಗಿದೆ.
ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ 10 ಗ್ರಾಮ ಪಂಚಾಯಿತಿಗಳು ತಮ್ಮ ಗ್ರಾಮಗಳನ್ನು ಕರ್ನಾಟಕದ ಜತೆ ವಿಲೀನಗೊಳಿಸಬೇಕು ಎಂಬುದಾಗಿ ಕೆಲ ದಿನಗಳ ಹಿಂದಷ್ಟೇ ನಿರ್ಣಯ ತೆಗೆದುಕೊಂಡಿವೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಸಾಂಗ್ಲಿ ಜಿಲ್ಲೆಯ ಜಾಟ್, ಸೋಲಾಪುರ ಜಿಲ್ಲೆಯ ಅಕ್ಕಲಕೋಟೆ, ಲಾತೂರ್ ಜಿಲ್ಲೆಯ 10 ಗ್ರಾಮಗಳು ಕೂಡ ಕರ್ನಾಟಕದ ಜತೆ ವಿಲೀನಗೊಳಿಸಬೇಕು ಎಂದು ಪಟ್ಟು ಹಿಡಿದಿವೆ. ಇದು ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಭಾರಿ ಹಿನ್ನಡೆ ತಂದಿದೆ.
ಏಕೆ ಈ ನಿರ್ಣಯ?
ಕರ್ನಾಟಕದ ಜತೆ ವಿಲೀನಗೊಳಿಸಬೇಕು ಎಂದು ನಿರ್ಣಯಿಸುವ ಗ್ರಾಮಗಳಲ್ಲಿ ಮರಾಠಿ ಮಾತನಾಡುವವರ ಜತೆಗೆ ಕನ್ನಡ ಮಾತನಾಡುವವರ ಸಂಖ್ಯೆಯೂ ಜಾಸ್ತಿ ಇದೆ. ಹಾಗೆಯೇ, ಕರ್ನಾಟಕದ ಆಚಾರ-ವಿಚಾರಗಳನ್ನು ಅವರು ಪಾಲಿಸುತ್ತಾರೆ. ಇನ್ನು, ಕನ್ನಡ ಮಾತನಾಡುವವರ ಸಂಖ್ಯೆ ಜಾಸ್ತಿ ಇರುವ ಕಡೆ ಮಹಾರಾಷ್ಟ್ರ ಸರ್ಕಾರವು ಮೂಲ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಇಂತಹ ಪ್ರದೇಶಗಳ ಅಭಿವೃದ್ಧಿಗೆ ಆಸಕ್ತಿ ತೋರಿಸುತ್ತಿಲ್ಲ.
ಮಳೆಗಾಲ ಆರಂಭವಾಗಿದ್ದರೂ ಕಾಗಲ್ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆದರೆ, ಕನಿಷ್ಠ ಕುಡಿಯುವ ನೀರಿನ ಪೂರೈಕೆಯನ್ನೂ ಸರ್ಕಾರ ಮಾಡುತ್ತಿಲ್ಲ. ಸರ್ಕಾರದ ಹಲವು ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಹಾಗಾಗಿ, ಈ ಭಾಗಗಳ ಜನರು ಕರ್ನಾಟಕದ ಜತೆ ತಮ್ಮ ಗ್ರಾಮಗಳು ವಿಲೀನಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: Border Dispute : ಒಂದು ದಿನದ ವಿಚಾರಣೆಗೆ ₹60 ಲಕ್ಷ !: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಲಕ್ಷ ಲಕ್ಷ ಹಣ ವೆಚ್ಚ
ಕರ್ನಾಟಕದ ಹಲವು ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಿವೆ, ಬೆಳಗಾವಿಯೂ ನಮ್ಮದೇ ಎಂದು ಎಂಎನ್‌ಎಸ್ ಪುಂಡರು ಬೆಳಗಾವಿಯಲ್ಲಿ ಆಗಾಗ ಗಲಾಟೆ ಮಾಡುತ್ತಾರೆ. ಮಹಾರಾಷ್ಟ್ರ ಸರ್ಕಾರವು ಇಂಥಾದ್ದೇ ಉದ್ಧಟತನ ಪ್ರದರ್ಶಿಸುತ್ತದೆ. ಪ್ರಕರಣ ನ್ಯಾಯಾಲಯದಲ್ಲಿದ್ದರೂ ಉಪಟಳ ಮಾಡುತ್ತದೆ. ಆದರೀಗ, ಅವರದ್ದೇ ರಾಜ್ಯದಲ್ಲಿರುವ ಗ್ರಾಮಗಳು ಕರ್ನಾಟಕಕ್ಕೆ ಸೇರಲು ಬಯಸುತ್ತಿರುವುದು ಮಹಾರಾಷ್ಟ್ರಕ್ಕೆ ಮುಖಭಂಗವಾಗಿದೆ.