Site icon Vistara News

Border Dispute | ಬೆಳಗಾವಿ ನಮ್ಮದು, ಒಂದಿಂಚೂ ಬಿಟ್ಟು ಕೊಡಲ್ಲ; ಸರ್ಕಾರ ಒಳ್ಳೇ ವಕೀಲರ ನೇಮಿಸಲಿ: ಸಿದ್ದು

assembly-session-siddaramaiah defends farmers loan waiver scheme

ಬೆಂಗಳೂರು/ಮೈಸೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Border Dispute) ಸಂಬಂಧ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಗಡಿ ವಿವಾದವನ್ನು ರಾಜಕೀಯಕ್ಕೆ ಬಳಿಸಿಕೊಳ್ಳುವುದು ಬಿಜೆಪಿ ನಾಯಕರ ಹುಟ್ಟುಗುಣ ಎಂದು ಆಕ್ರೋಶ ವ್ಯಕ್ತಪಡಿಸಿ, ಬೆಳಗಾವಿ ನಮ್ಮದು, ಒಂದಿಂಚೂ ಬಿಟ್ಟು ಕೊಡಲಾರೆವು. ಈ ನಿಟ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸಲು ಸರ್ಕಾರ ಒಳ್ಳೇ ವಕೀಲರ ನೇಮಿಸಲಿ ಎಂಬ ಕಿವಿ ಮಾತನ್ನೂ ಹೇಳಿದ್ದಾರೆ.

ಗುರುವಾರ ಬೆಳಗ್ಗೆ ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆಯೂ ಸಲಹೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಟ್ವೀಟ್‌ ಸಾರಾಂಶ ಇಲ್ಲಿದೆ.

೧. ವಿವಾದಗಳನ್ನು ಬೆಳೆಯಲು ಬಿಟ್ಟು ರಾಜಕೀಯಕ್ಕೆ ಬಳಸುವುದು ಬಿಜೆಪಿಯ ಹುಟ್ಟುಗುಣ. ಸಂಧಾನದ ಮೂಲಕ ಪರಿಹರಿಸಬೇಕಿದ್ದ ಬೆಳಗಾವಿ ಗಡಿ ವಿವಾದವನ್ನು ಬೆಳೆಯಲು ಬಿಟ್ಟು ರಾಜ್ಯ ಸರ್ಕಾರ ಚಂದ ನೋಡುತ್ತಾ ಕುಳಿತುಕೊಂಡಿದೆ.

ಇದನ್ನೂ ಓದಿ | Border Dispute | ನಮ್ಮ ತಂಟೆಗೆ ಬಂದರೆ ಕರ್ನಾಟಕದ ಗಡಿ ದಾಟಿ ಮಹಾರಾಷ್ಟ್ರದ ಒಂದೂ ವಾಹನ ಬರಲು ಬಿಡಲ್ಲ: ಕರವೇ ನಾರಾಯಣಗೌಡ

೨. ಬೆಳಗಾವಿ-ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿರುವ ಕಾರಣ ಜನ ಪರದಾಡುವಂತಾಗಿದೆ. ಎರಡೂ ಕಡೆಗಳಲ್ಲಿ ಜನ ಉದ್ರಿಕ್ತರಾಗಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಶಾಂತಿ ಕಾಪಾಡಬೇಕು.

೩. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ವಿರುದ್ಧ ಅಲ್ಲಿನ ಸರ್ಕಾರ ಅತಿರೇಕದ ಕ್ರಮಗಳಿಗೆ ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ರಾಜ್ಯದ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಮಹಾರಾಷ್ಟ್ರದ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಬೇಕು.

೪. “ಡಬಲ್ ಎಂಜಿನ್ ಸರ್ಕಾರ” ಎಂದು ಎದೆ ಬಡಿದುಕೊಂಡರೆ ಸಾಲದು. ಆ ಅವಕಾಶವನ್ನು ಬಳಸಿಕೊಂಡು ಎರಡು ರಾಜ್ಯಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಿಕೊಳ್ಳಲು ಕೇಂದ್ರ ಸರ್ಕಾರದ ನೆರವನ್ನು ಪಡೆಯಬೇಕು.

ಇದನ್ನೂ ಓದಿ | Border Dispute | ಸವದತ್ತಿಗೆ ಬಂದಿದ್ದ ಮಹಾರಾಷ್ಟ್ರದ 145 ಬಸ್‌ ಸುರಕ್ಷಿತವಾಗಿ ವಾಪಸ್‌: ಬೆಳಗಾವಿ ಪೊಲೀಸರಿಗೆ ಮಹಾ ಧನ್ಯವಾದ

ಒಳ್ಳೇ ಲಾಯರ್‌ ನೇಮಿಸಲಿ
ಮೈಸೂರು ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಅವರು ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ ಬಗ್ಗೆ ಅಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿ, ಮಹಾರಾಷ್ಟ್ರದವರಿಗೆ ಪ್ರಧಾನಿಯಿಂದ ಬುದ್ಧಿ ಹೇಳಿಸುವ ಧೈರ್ಯವೂ ಕರ್ನಾಟಕದ ಬಿಜೆಪಿಗೆ ಇಲ್ಲ. ಕರ್ನಾಟಕದ ಬಿಜೆಪಿಯವರು ಹೇಡಿಗಳು. ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದರೂ ಗಡಿಯಲ್ಲಿ ಯಾಕೆ ಗಲಾಟೆ ನಡೆಯುತ್ತಿದೆ? ಎಂದು ಪ್ರಶ್ನೆ ಮಾಡಿದರು.

ಎರಡೂ ರಾಜ್ಯದವರು ಮಾತನಾಡಿಕೊಂಡೇ ಪುಂಡಾಟಿಕೆ ನಡೆಸಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುವಂತೆ ಮಾಡುತ್ತಿದ್ದಾರಾ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ, ಗಡಿ ವಿವಾದದ ಬಗ್ಗೆ ಒಳ್ಳೇ ಲಾಯರ್ ಇಟ್ಟು ವಾದ ಮಾಡಿಸಬೇಕು. ಪ್ರಧಾನಿಗಳ ಬಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋಗಿ ನೈಜ ಸ್ಥಿತಿ ವಿವರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಗಡಿ ವಿವಾದ ಸಂಬಂಧ ಮಹಾಜನ ವರದಿಯೇ ಅಂತಿಮವಾಗಿದೆ. ಬೆಳಗಾವಿ ನಮ್ಮದಾಗಿದ್ದು, ಒಂದಿಂಚನ್ನೂ ಸಹ ಯಾರಿಗೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ | Border Dispute | ಮಹಾರಾಷ್ಟ್ರದಿಂದ ಕನ್ನಡಿಗರನ್ನು ಓಡಿಸುತ್ತೇವೆ: ಎಂಎನ್‌ಎಸ್‌ ಮುಖಂಡನ ಉದ್ಧಟತನ

Exit mobile version