Site icon Vistara News

Border Dispute | ಬೆಳಗಾವಿಗೆ ಬರದೇ ಇರಲ್ಲ: ಚಂದ್ರಕಾಂತ ಪಾಟೀಲ; ಬರಲು ಬಿಡೋಲ್ಲ: ಲಕ್ಷ್ಮಣ ಸವದಿ

laxman savadi chandrakant patil

ಬೆಳಗಾವಿ: ಡಿಸೆಂಬರ್ 6ರಂದು ನಾವು ಬೆಳಗಾವಿಗೆ ಹೋಗಿಯೇ ತೀರುತ್ತೇವೆ ಎಂದು ಮುಂಬಯಿಯಲ್ಲಿ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರ ಸಚಿವರನ್ನು ಬೆಳಗಾವಿಗೆ ಬರಲಿಕ್ಕೆ ನಾವು ಬಿಡುವುದಿಲ್ಲ ಎಂದು ಬಿಜೆಪಿ ನಾಯಕ ಲಕ್ಷ್ಮಣ ಸವದಿ ಪ್ರತ್ಯುತ್ತರ ನೀಡಿದ್ದಾರೆ.

ಡಿ.6ರಂದು ಬೆಳಗಾವಿಗೆ ಮಹಾರಾಷ್ಟ್ರದ ಸಚಿವದ್ವಯರ ಭೇಟಿ ವಿಚಾರದಲ್ಲಿ ಈಗ ತಗಾದೆ ಎದ್ದಿದ್ದು, ಉಭಯ ರಾಜ್ಯಗಳ ನಾಯಕರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ಕರ್ನಾಟಕಕ್ಕೆ ಭೇಟಿ ನೀಡದಂತೆ ಸಂದೇಶ ರವಾನಿಸಿದ್ದೇವೆ ಎಂಬ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ವಿಚಾರದಲ್ಲಿ ಚಂದ್ರಕಾಂತ ಪಾಟೀಲ ಇದೀಗ ಪ್ರತಿಹೇಳಿಕೆ ನೀಡಿದ್ದಾರೆ.

ನನಗೆ ಬೊಮ್ಮಾಯಿಯವರ ಯಾವುದೇ ಪತ್ರ ತಲುಪಿಲ್ಲ. ನಾನು ಡಿಸೆಂಬರ್ 3ರಂದು ಹೋಗಬೇಕಿತ್ತು. ಆದರೆ ಡಿಸೆಂಬರ್ 6ರಂದು ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಹಣ ದಿನ ಇದ್ದು, ಅಂದು ಬೆಳಗಾವಿಯಲ್ಲಿ ಹಲವು ಕಾರ್ಯಕ್ರಮಗಳು ಇವೆ. ಎಲ್ಲರೂ ನನಗೆ ಡಿ.6ರಂದು ಆಗಮಿಸುವಂತೆ ವಿನಂತಿಸಿದ್ದು, ನಾನು ಡಿ.6ರಂದು ಬೆಳಗಾವಿಗೆ ಭೇಟಿ ನೀಡುತ್ತೇನೆ. ಇದಲ್ಲದೇ ಡಿ.6ರಂದು ಹಲವು ಕಾರ್ಯಕ್ರಮಗಳಿದ್ದು, ಗಡಿ ಭಾಗದ ಜನ, ಗಡಿ ಹೋರಾಟದಲ್ಲಿ ಮೃತಪಟ್ಟ ಹುತಾತ್ಮರ ನಿವಾಸಕ್ಕೆ ಭೇಟಿ ನೀಡುವುದಿದೆ. ಅಂಬೇಡ್ಕರ್ ಉದ್ಯಾನವನದಲ್ಲಿರುವ ಬೃಹತ್ ಅಂಬೇಡ್ಕರ್ ಪ್ರತಿಮೆಗೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದೇನೆ. ನಾವು ಯಾವುದೇ ಸಂಘರ್ಷ ಮಾಡಲು ಬರುತ್ತಿಲ್ಲ. 865 ಮರಾಠಿ ಭಾಷಿಕ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ಏನು ಸೌಲಭ್ಯ ನೀಡಬಹುದು ಎಂಬ ಬಗ್ಗೆ ಚರ್ಚಿಸಲು ತೆರಳುತ್ತಿದ್ದೇನೆ. ಕರ್ನಾಟಕದ ನಾಗರಿಕರಿಗೆ ನೀವು ಸೌಲಭ್ಯ ನೀಡಿ, 865 ಮರಾಠಿ ಭಾಷಿಕ ಗ್ರಾಮಗಳ ಜನರಿಗೆ ನಾವು ಸೌಲಭ್ಯ ನೀಡುತ್ತೇವೆ ಎಂದು ಚಂದ್ರಕಾಂತ ಪಾಟೀಲ್ ಹೇಳಿದ್ದಾರೆ.

ಯಾವುದೇ ನಿಷೇಧ ಹೇರಿದರೂ ನಾನು ನಿಲ್ಲುವ ಮನುಷ್ಯನಲ್ಲ. ನನಗೆ ನೀವು ಧಮಕಿ ಹಾಕಬೇಡಿ. ನಾವು ಸಮನ್ವಯದಿಂದ ಜನರ ಮನಸ್ಥಿತಿ ತಿಳಿದು ಅವರಿಗೆ ಮಹಾರಾಷ್ಟ್ರ ಸರ್ಕಾರದ ನಿಲುವು ತಿಳಿಸಲು ತೆರಳುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ | Border dispute | ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿಗೆ ಸಿಎಂ ಆಕ್ಷೇಪ, ನೆರೆ ರಾಜ್ಯಕ್ಕೂ ಸಂದೇಶ ರವಾನೆ

ಇತ್ತ, ಮಹಾರಾಷ್ಟ್ರ ಸಚಿವರನ್ನು ಬೆಳಗಾವಿಗೆ ಬರಲಿಕ್ಕೆ ನಾವು ಬಿಡುವುದಿಲ್ಲ ಎಂದು ಚಂದ್ರಕಾಂತ ಪಾಟೀಲ ಹೇಳಿಕೆಗೆ ಲಕ್ಷ್ಮಣ್ ಸವದಿ ತಿರುಗೇಟು ನೀಡಿದ್ದಾರೆ. ಸುಮ್ಮನೆ ಬೆಳಗಾವಿಗೆ ಬರ್ತಿನಿ, ಬರ್ತಿನಿ ಅಂತಾರೆ, ಆದ್ರೆ ಅವರು ಬರುವುದಿಲ್ಲ. ಮಹಾರಾಷ್ಟ್ರ ಹಾಗೂ ಎಂಇಎಸ್‌ ನಾಯಕರಿಗೆ ಬೇರೆ ಯಾವುದೇ ವಿಷಯಗಳು ಇಲ್ಲ. ಎಂಇಎಸ್ ಸಂಪೂರ್ಣ ಸತ್ತು ಹೋಗಿದೆ. ಅದಕ್ಕೆ ಜೀವ ತುಂಬಲು, ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ. ಬೆಳಗಾವಿ ನಮ್ಮ ರಾಜ್ಯದ ಅವಿಭಾಜ್ಯ ಅಂಗ, ಇದನ್ನು ಅವರು ಕೇಳಲು ಆಗುವುದಿಲ್ಲ. ಅನವಶ್ಯಕವಾಗಿ ಗೊಂದಲ ಸೃಷ್ಟಿಸಿ ಸಾಮರಸ್ಯ ಹಾಳು ಮಾಡುವ ಹುನ್ನಾರವಿದು. ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಸೇರಿ ನಾವೆಲ್ಲರೂ ನೆಮ್ಮದಿಯಿಂದ ಇದ್ದೇವೆ, ಮರಾಠ ಸಮಾಜ ಮತ್ತು ನಾವು ಸೌಹಾರ್ದಯುತವಾಗಿದ್ದೇವೆ ಎಂದು ಸವದಿ ಹೇಳಿದ್ದಾರೆ.

ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಎಂಇಎಸ್ ಹುಟ್ಟುಹಾಕಿದ್ದಾರೆ. ಶಾಸಕರಾಗಬೇಕು ಎಂಬ ಆಸೆ ಅವರಿಗಿದೆ. ಶಾಸಕರಾಗಬೇಕಾದರೆ ಮಹಾರಾಷ್ಟ್ರಕ್ಕೆ ಹೋಗಿ ಶಾಸಕರಾಗಲಿ. ಕರ್ನಾಟಕದ ಅನ್ನ ತಿಂದು, ನೀರು ಕುಡಿದು, ಆ ಮೇಲೆ ಮಹಾರಾಷ್ಟ್ರಕ್ಕೆ ಸೇರಿಸಿ ಅಂದರೆ ಸಾಧ್ಯವಿಲ್ಲ. ಜತ್ತ ತಾಲ್ಲೂಕಿನ 44 ಗ್ರಾಮಗಳ ಜನರು ಕರ್ನಾಟಕ ಸೇರಲು ಮುಂದಾಗಿದ್ದಾರೆ. ನಮ್ಮನ್ನು ಕಳುಹಿಸಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೂ ಮನವಿ ಮಾಡಿದ್ದಾರೆ. ಕರ್ನಾಟಕಕ್ಕೆ ಕರೆದುಕೊಳ್ಳುವಂತೆ ನಮಗೂ ಮಾಡಿದ್ದಾರೆ. ಅಲ್ಲಿನ ಕನ್ನಡ ಭಾಷಿಕರಿಗೆ ಸರ್ಕಾರದ ಸೌಲಭ್ಯ ಸಿಗದಿರುವುದರಿಂದ ಈ ಬೇಡಿಕೆ ಇಟ್ಟಿದ್ದಾರೆ. ಮೊದಲು ಮಹಾರಾಷ್ಟ್ರದ ಎಲ್ಲ ಜನರಿಗೆ ಅಲ್ಲಿನ ಶಾಸಕರು ಸವಲತ್ತು ಕೊಡಲಿ. ಆ ಬಳಿಕವೇ ಅವರು ಕರ್ನಾಟಕಕ್ಕೆ ಬರುವ ಪ್ರಯತ್ನ ಮಾಡಲಿ. ಮಹಾರಾಷ್ಟ್ರ ನಾಯಕರಿಗೆ ಇಲ್ಲಿ ಏನು ಕೆಲಸ? ಮೊದಲು ತಮ್ಮ ರಾಜ್ಯದ ಜನರನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಲಿ, ಆ ಮೇಲೆ ಬೆಳಗಾವಿಗೆ ಬರುವ ಬಗ್ಗೆ ಆಲೋಚನೆ ಮಾಡಲಿ. ನೀವು ಸ್ನೇಹಪರವಾಗಿ ಬಂದರೆ ನಾವು ಸ್ವಾಗತ ಮಾಡುತ್ತೇವೆ. ರಾಜಕೀಯ ವಿಷಯ ಇಟ್ಟುಕೊಂಡು ಬಂದರೆ ಗಡಿಯೀಚೆಗೆ ನಿಮ್ಮನ್ನು ಬಿಡುವುದಿಲ್ಲ ಎಂದು ಸವದಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ | Border Dispute | ಮರಾಠಿ ಶಾಲೆಗಳಿಗೆ ಕನ್ನಡಿಗ ಮಕ್ಕಳನ್ನು ಸೇರಿಸುವ ಹುನ್ನಾರ ನಡೆದಿತ್ತು: ಡಾ. ಸಿ. ಸೋಮಶೇಖರ್‌ ಹೇಳಿಕೆ

Exit mobile version