Site icon Vistara News

Border Dispute | ʼಮಹಾʼ ಗಡಿ ದಾವೆಗೆ ಮಾನ್ಯತೆ ಇಲ್ಲ; ಕಾನೂನು ಹೋರಾಟಕ್ಕೆ ಸಿದ್ಧತೆ, ರಾಜ್ಯದಿಂದ ಸಮರ್ಥ ವಾದ: ಸಿಎಂ ಬೊಮ್ಮಾಯಿ

cm basavaraja bommai ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಎಂಇಎಸ್‌ ಪುಂಡರಿಗೆ ಎಚ್ಚರಿಕೆ

ದಾವಣಗೆರೆ: ರಾಜ್ಯ ಪುನರ್ವಿಂಗಡಣಾ ಕಾಯ್ದೆ ಮತ್ತು ಸಂವಿಧಾನದ 3ನೇ ವಿಧಿ ಅನುಸಾರ ಮಹಾರಾಷ್ಟ್ರ ಗಡಿಗೆ ಸಂಬಂಧಿಸಿದ (Border Dispute) 2004ರಲ್ಲಿ ಹೂಡಿದ್ದ ದಾವೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಈ ವಾದಕ್ಕೆ ಹೆಚ್ಚಿನ ಒತ್ತು ನೀಡಿ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಥವಾದ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಾಸಕ ಎಸ್.ವಿ.ರವೀಂದ್ರನಾಥ್ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗವಹಿಸಲು ದಾವಣಗೆರೆಗೆ ಆಗಮಿಸಿದ್ದ ಅವರು, ಮಾಧ್ಯಮದವರೊಂದಿಗೆ ಮಾತನಾಡಿ, ಹಿರಿಯ ನ್ಯಾಯವಾದಿಗಳಾದ ಮುಕುಲ್ ರೊಹಟಗಿ, ಉದಯಹೊಳ್ಳ ನೇತೃತ್ವದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಗಂಭೀರವಾಗಿ ವಾದ ಮಂಡಿಸಲಿದ್ದೇವೆ. ಕಾನೂನು ಹೋರಾಟಕ್ಕೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರನ್ನು ಸಹ ಸರ್ಕಾರ ನೇಮಿಸಿದೆ. ನಾವು ಸಂವಿಧಾನ ಹಾಗೂ ಕಾನೂನು ಬದ್ಧವಾಗಿ ಇದ್ದೇವೆ. ಕರ್ನಾಟಕದ ರಾಜ್ಯದ ಭೂ ಪ್ರದೇಶದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಬೇಡಿಕೆ ಹಾಗೂ ನಿಲುವುಗಳನ್ನು ವಿಚಾರಣೆ ಸಂದರ್ಭದಲ್ಲಿ ಮಂಡಿಸಲಾಗುವುದು. ಈ ಸಂಬಂಧವಾಗಿ ಮುಂದಿನ ವಾರ ಸರ್ವಪಕ್ಷ ಹಾಗೂ ಕಾನೂನು ತಜ್ಞರ ಸಭೆ ಕರೆದಿದ್ದೇನೆ. ಯಾವ ವಿಚಾರವನ್ನು ಮಂಡಿಸಬೇಕು ಎಂಬುದರ ಕುರಿತು ಕೂಲಂಕಷವಾಗಿ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ | Border Dispute | ಮಹಾರಾಷ್ಟ್ರದ ಜತ್‌ನಲ್ಲಿ ಹಾರಿತು ಕನ್ನಡ ಧ್ವಜ; ಕರ್ನಾಟಕ, ಸಿಎಂ ಬೊಮ್ಮಾಯಿ ಪರ ಘೋಷಣೆ

ಮಹಾರಾಷ್ಟ್ರ ಹಿರಿಯ ರಾಜಕಾರಣಿ ಶರದ್ ಪವಾರ್ ಬೆಳಗಾವಿ ಗಡಿ ವಿವಾದ ಇಟ್ಟುಕೊಂಡು ಇದುವರೆಗೂ ರಾಜಕೀಯ ಮಾಡಿದ್ದಾರೆ. ಬೆಳಗಾವಿ ಬಗೆಗಿನ ಅವರ ಕನಸು ನನಸಾಗಿಲ್ಲ. ಮುಂದೆಯೂ ನನಸಾಗುವುದಿಲ್ಲ. ಮಹಾರಾಷ್ಟ್ರದ ಜತ್ತ ಭಾಗದ ಜನರು ಕರ್ನಾಟಕದಲ್ಲಿ ವಿಲೀನವಾಗಲು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು‌.

ಮಾತುಕತೆ ಇಲ್ಲ?
ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಒಂದು ಕಡೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿರುವ ಮಹಾರಾಷ್ಟ್ರ ಮತ್ತೊಂದು ಕಡೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಪ್ರಸ್ತಾಪವನ್ನೂ ಇಟ್ಟಿತ್ತು. ಈ ಬಗ್ಗೆ ಮಾತನಾಡಿದ್ದ ಮಹಾರಾಷ್ಟ್ರ ಸಿಎಂ, ಗಡಿ ವಿವಾದ ಸಂಬಂಧ ಮಾತುಕತೆಗೆ ಬದ್ಧರಿರುವುದಾಗಿ ಹೇಳಿದ್ದರು. ಅಲ್ಲದೆ, ಗಡಿ ಭಾಗದ ಮರಾಠಿಗರಿಗೆ ಹೆಚ್ಚಿನ ಅನುದಾನವನ್ನು ನೀಡಿದ್ದಾಗಿಯೂ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಮತ್ತೊಮ್ಮೆ ಸರ್ವಪಕ್ಷ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ, ಈಗ ವಾದ ಮಾಡಲು ಸರ್ಕಾರ ಸಿದ್ಧತೆ ಕೈಗೊಂಡಿದೆ ಎಂದು ಹೇಳಿದ್ದರಿಂದ ಮಾತುಕತೆಗಿಂತ ಕಾನೂನು ಹೋರಾಟಕ್ಕೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದೆ ಎಂಬ ಚರ್ಚೆಗಳು ಹರಿದಾಡುತ್ತಿವೆ.

ಇದನ್ನೂ ಓದಿ | Border Dispute | ಹೇಗೂ ಏಕರೂಪ ನಾಗರಿಕ ಸಂಹಿತೆ ಎನ್ನುತ್ತಿದ್ದೀರಿ; ಬೆಳಗಾವಿ ಇಲ್ಲಿದ್ದರೇನು? ಮಹಾರಾಷ್ಟ್ರದಲ್ಲಿ ಇದ್ದರೇನು?: ಎಚ್‌ಡಿಕೆ

Exit mobile version