ಬೆಳಗಾವಿ: ಪದೇ ಪದೆ ಗಡಿ ಕ್ಯಾತೆಯನ್ನು (Border dispute) ತೆಗೆಯುತ್ತಿರುವ ಮಹಾರಾಷ್ಟ್ರ ಸರ್ಕಾರ ಈಗಾಗಲೇ ರಾಜ್ಯದ ಕೆಲವು ಭಾಗವು ತಮಗೆ ಸೇರಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿರುವ ಬೆನ್ನಲ್ಲೇ ಈಗ ಹೊಸ ಕ್ಯಾತೆಯೊಂದನ್ನು ತೆಗೆದಿದೆ. ಈ ವಿಚಾರವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಇದು ನಮ್ಮ ನಿಲುವು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ- ಮಹಾರಾಷ್ಟ್ರ ಗಡಿವಿವಾದಕ್ಕೆ ಸಂಬಂಧಪಟ್ಟಂತೆ ಒಂದು ಕಡೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿರುವ ಮಹಾರಾಷ್ಟ್ರ ಸರ್ಕಾರವು ಈಗ ಹೊಸ ವರಸೆ ಶುರು ಮಾಡಿದ್ದು, ಮಾತುಕತೆಯ ಪ್ರಸ್ತಾಪವನ್ನು ಇಟ್ಟು ತನ್ನ ಇಬ್ಬಗೆ ನೀತಿಯನ್ನು ವ್ಯಕ್ತಪಡಿಸಿದೆ.
ನಮ್ಮ ನಿಲುವು ಮಾತುಕತೆ ಎಂದ ಮಹಾರಾಷ್ಟ್ರ ಸಿಎಂ
ಗಡಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂಬುದು ನಮ್ಮ ನಿಲುವಾಗಿದೆ. ಈ ಕುರಿತು ನಾವು ಈಗಾಗಲೇ ಸಭೆ ನಡೆಸಿದ್ದೇವೆ. ಈ ಹಳೆಯ ವಾದವೇನಿದೆ ಅದು ನ್ಯಾಯಾಲಯದ ಮುಂದಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಆದರೆ, ಇದರ ಜತೆ ಜತೆಗೆ ಈ ವಿಷಯ ಮಾತುಕತೆ ಮೂಲಕ ಬಗೆಹರಿಯಬೇಕು. ಇದು ಮಹಾರಾಷ್ಟ್ರ ಸರ್ಕಾರದ ನಿಲುವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ.
ಇದನ್ನೂ ಓದಿ | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ | ರಾಜ್ಯದ ಒಂದಿಂಚು ಜಾಗವನ್ನೂ ಬಿಡಲ್ಲ, ಫಡ್ನವಿಸ್‌ಗೆ ಬೊಮ್ಮಾಯಿ ತಿರುಗೇಟು
ಈಗಾಗಲೇ ಎರಡೂ ರಾಜ್ಯಗಳ ರಾಜ್ಯಪಾಲರ ಸಭೆಯಾಗಿದೆ. ಕೇಂದ್ರ ಸರ್ಕಾರ ಸಹ ಗಡಿ ವಿವಾದದ ಬಗ್ಗೆ ಸಕಾರಾತ್ಮಕ ನಿಲುವನ್ನು ವ್ಯಕ್ತಪಡಿಸಬೇಕಿದೆ. ಸರ್ವ ಸಮ್ಮತಿ ಮೂಲಕ ಈ ವಿವಾದವು ಬಗೆಹರಿಯಬೇಕೆಂಬುದು ನಮ್ಮ ನಿಲುವು. ಈ ನಿಟ್ಟಿನಲ್ಲಿ ನಾವು ಸಭೆಯನ್ನು ಸಹ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಈ ವಿಷಯವಾಗಿ ಮತ್ಯಾರೂ ತಗಾದೆ ತೆಗೆಯದೇ, ಮತ್ತಷ್ಟು ಜಟಿಲಗೊಳ್ಳುವಂತೆ ಮಾಡಬಾರದು. ನಾವು ಸಭೆ ನಡೆಸಿದಾಗ ಸಾಕಷ್ಟು ಸಲಹೆಗಳು ಬಂದಿವೆ. ಸದ್ಯಕ್ಕೆ ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಯೋಜನೆಯ ಲಾಭ ಗಡಿಭಾಗದ ಮರಾಠಿಗರಿಗೆ ಏನು ಸಿಗುತ್ತಿತ್ತೋ ಅದನ್ನು ಹೆಚ್ಚಿಸಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಹತ್ತು ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿಗೆ ಹೆಚ್ಚಳ ಮಾಡಿದ್ದೇವೆ. ಮುಖ್ಯಮಂತ್ರಿ ಧರ್ಮಾದಾಯ ಸಹಾಯ ನಿಧಿ ಯೋಜನೆಯ ಲಾಭ ಬಂದ್ ಆಗಿತ್ತು. ಅದನ್ನು ಶುರು ಮಾಡಿದ್ದೇವೆ. ಗಡಿಭಾಗದ ಮರಾಠಿಗರಿಗೆ ಆರೋಗ್ಯ ಸೌಲಭ್ಯ ನೀಡಲು ಮಹಾತ್ಮ ಜ್ಯೋತಿಬಾ ಪುಲೆ ಯೋಜನೆ ನೀಡಲು ನಿರ್ಣಯವನ್ನು ಕೈಗೊಂಡಿದ್ದೇವೆ. ಗಡಿ ಭಾಗದ ಮರಾಠಿಗರಿಗೆ ಮಹಾರಾಷ್ಟ್ರ ಸರ್ಕಾರದಿಂದ ಸಿಗುವ ಯೋಜನೆಗಳ ಲಾಭವನ್ನು ಹೆಚ್ಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಹೊಣೆ ಹೊತ್ತುಕೊಂಡ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್, ಟಾರ್ಗೆಟ್ ಕದ್ರಿ ದೇವಸ್ಥಾನ?