ಚಿಕ್ಕೋಡಿ: ಮತ್ತೆ ಎದ್ದು ಬಂದಿರುವ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಕ್ಕೆ ಕೆಲವು ಮರಾಠಿ ಪುಂಡರು ಬೆಂಕಿ ಹಚ್ಚುತ್ತಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಮರಾಠ ಮಹಾ ಸಂಘದಿಂದ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರತಿಭಟನೆ ನಡೆದಿದೆ, ಜತೆಗೆ ಕರ್ನಾಟಕದ ಬಸ್‌ಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆಯಲಾಗಿದೆ.
ಕರ್ನಾಟಕದ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಕಟಕಟೆ ಹತ್ತಿದ ಮಹಾರಾಷ್ಟ್ರ ಸರಕಾರ, ಅದರ ಬೆನ್ನಿಗೇ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೇಳಿದೆ. ಈ ನಡುವೆ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವುದೇ ಕಾರಣಕ್ಕೂ ಕರ್ನಾಟಕದ ಒಂದಿಂಚೂ ನೆಲವನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇದೀಗ ಕೈಲಾಗದವನು ಮೈಪರಚಿಕೊಂಡ ಎಂಬಂತೆ ಕೆಲವು ಮರಾಠಿ ಪುಂಡರು ಬೀದಿ ರಂಪಕ್ಕೆ ಇಳಿದಿದ್ದಾರೆ. ಜತ್ತ ತಾಲೂಕಿನ 40 ಗ್ರಾಮ ಕರ್ನಾಟಕಕ್ಕೆ ಸೇರಬೇಕೆಂದು ಠರಾವು ಹೊರಡಿಸಿದ್ದರು ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಳಗಾವಿ, ನಿಪ್ಪಾಣಿ, ಖಾನಾಪುರ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ನೆರೆ ರಾಜ್ಯ ಹೇಳುತ್ತಿದೆ.
ಔರಂಗಾಬಾದ್‌ನಲ್ಲಿ ಪುಂಡಾಟ
ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿ ಕರ್ನಾಟಕದ ಬಸ್ ತಡೆದ ಪುಂಡರು ಕಪ್ಪು ಬಸಿ ಬಳಿದಿದ್ದಾರೆ.
ನಿಪ್ಪಾಣಿ – ಔರಂಗಾಬಾದ್ ಮಧ್ಯೆ ಸಂಚರಿಸುವ ನಿಪ್ಪಾಣಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ಗೆ ಅಖಿಲ ಭಾರತೀಯ ಮರಾಠಾ ಸಂಘದ ಕಾರ್ಯಕರ್ತರು ಮಸಿ ಬಳಿದರು. ಬಸ್ಸಿನ ಮೇಲೆ ಜೈ ಮರಾಠ ಎಂದು ಬರೆದುಕೊಂಡಿದೆ.
ಇದನ್ನೂ ಓದಿ | Border Dispute | ಗಡಿ ವಿವಾದದ ವಾದಕ್ಕೇ ನಾವು ಬದ್ಧ, ಮತ್ತೊಮ್ಮೆ ಸರ್ವಪಕ್ಷ ಸಭೆಯಲ್ಲಿ ತೀರ್ಮಾನ; ಶಿಂಧೆಗೆ ಸಿಎಂ ಬೊಮ್ಮಾಯಿ ತಿರುಗೇಟು