ಬೆಳಗಾವಿ: ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿಯುವ ಮೂಲಕ ಶಿವಸೇನೆ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ. ಈ ನಡುವೆ, ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲೂ (Border dispute) ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಇದರಿಂದಾಗಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಮಂಗಳವಾರ ಮುಂಜಾನೆ ಬೆಳಗಾವಿ ಹೊರವಲಯದ ಹಿರೇಬಾಗೇವಾಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ರಕ್ಷಣಾ ವೇದಿಕೆ ಆಯೋಜಿಸಿದ್ದ ಬಹಿರಂಗ ಸಭೆಗೆ ಅವಕಾಶ ನಿರಾಕರಿಸಿದ್ದ ಆಡಳಿತ, ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಬೆಳಗಾವಿ ಪ್ರವೇಶಿಸಲು ಬಿಟ್ಟಿರಲಿಲ್ಲ. ಈ ಹಂತದಲ್ಲಿ ಸಿಟ್ಟಿಗೆದ್ದ ಕರವೇ ಕಾರ್ಯಕರ್ತರು ರೊಚ್ಚಿಗೆದ್ದು ೧೦ಕ್ಕೂ ಅಧಿಕ ಮಹಾರಾಷ್ಟ್ರ ನೋಂದಣಿಯ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಮಹಾರಾಷ್ಟ್ರದ ಲಾರಿಗಳಿಗೆ ಕನ್ನಡ ಬಾವುಟವನ್ನು ಹಾಕಿ ಬೆದರಿಕೆ ಹಾಕಿದ್ದರು.
ಇದಾಗಿ ಸ್ವಲ್ಪ ಹೊತ್ತಿನಲ್ಲೇ ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತು. ಅತ್ತ ಪುಣೆಯಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ಕರ್ನಾಟಕದ ಬಸ್ಸಿಗೆ ಮಸಿ ಬಳಿದು ಪುಂಡಾಟ ನಡೆಸಿದರು.
ಪುಣೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್‌ಗಳಿಗೆ ಕಪ್ಪು ಮಸಿ ಹಚ್ಚಿ ವಿಕೃತಿ ಮೆರೆಯಲಾಯಿತು. ಹತ್ತಕ್ಕೂ ಅಧಿಕ ಶಿವಸೇನೆ ಪುಂಡರು ಮಸಿ ಬಳಿಯುವ ಕೆಲಸ ಮಾಡಿದರು.
ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಮಹಾರಾಷ್ಟ್ರ ಕ್ಕೆ ಹೋಗುವ ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ. ಬೆಳಗಾವಿ ಜಿಲ್ಲಾ ಗಡಿಯಿಂದ ಆಚೆಗೆ ಬಸ್ ಸಂಚಾರ ಸದ್ಯಕ್ಕೆ ಬೇಡ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್ ಉದ್ಧಟತನ
ಈ ನಡುವೆ, ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡರು ಮಂಗಳವಾರ ಮತ್ತೆ ಕನ್ನಡ ನೆಲದಲ್ಲಿ ನಾಡದ್ರೋಹಿ ಘೋಷಣೆ ಕೂಗುವ ಮೂಲಕ ಉದ್ಧಟತನ ಮೆರೆದಿದ್ದಾರೆ.
ಡಿಸೆಂಬರ್ ೬ರಂದು ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಬರುವ ಕಾರ್ಯಕ್ರಮ ಫಿಕ್ಸ್ ಆಗಿತ್ತು. ಆದರೆ, ರಾಜ್ಯ ಸರಕಾರ ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿತ್ತು. ಜತೆಗೆ ಒಂದೊಮ್ಮೆ ಬಂದರೆ ಗಡಿಯಲ್ಲೇ ತಡೆಯುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಇದರಿಂದ ಬೆದರಿದ ಸಚಿವರು ಭೇಟಿಯನ್ನು ಮುಂದೂಡಿದ್ದರು. ಇದು ಎಂಇಎಸ್ ನಾಯಕರನ್ನು ಕೆರಳಿಸಿತ್ತು.
ಹೀಗಾಗಿ ಹೇಗಾದರೂ ಮಾಡಿ ಬೆಳಗಾವಿಯಲ್ಲಿ ಉದ್ವಿಗ್ನತೆ ಸೃಷ್ಟಿಸಬೇಕು ಎಂಬ ಉದ್ದೇಶದಿಂದ ಅವರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು ಮತ್ತು ನಾಡದ್ರೋಹಿ ಘೋಷಣೆಗಳನ್ನು ಕೂಗಿದರು.
ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಬಂದಿದ್ದ ಎಂಇಎಸ್ ಮುಖಂಡರು, ಬೆಳಗಾವಿ, ಕಾರವಾರ, ನಿಪ್ಪಾಣಿ ಬಾಲ್ಕಿ ಸಂಯಕ್ತ ಮಹಾರಾಷ್ಟ್ರದ ಭಾಗ ಎಂದು ಘೋಷಣೆಗಳನ್ನು ಕೂಗಿದರು.
ನಾಡದ್ರೋಹಿ ಘೋಷಣೆ ಕೂಗಿ ಉದ್ಧಟತನ ಮೆರೆಯಲು ಮುಂದಾದ ಎಂಇಎಸ್ ಪುಂಡರನ್ನು ಪೊಲೀಸರು ವಶಕ್ಕೆ ಪಡೆದರು. ಮಾರ್ಕೆಟ್ ಠಾಣೆ ಪೊಲೀಸರು ಅವರನ್ನು ಬಸ್ಸಿಗೆ ತುಂಬಿ ಕರೆದುಕೊಂಡು ಹೋದರು.
ಇದನ್ನೂ ಓದಿ | Border dispute | ಕರವೇ ನಾರಾಯಣ ಗೌಡ ಬಂಧನ: ಬೆಳಗಾವಿ ಪ್ರವೇಶ ತಡೆಗೆ ರೊಚ್ಚಿಗೆದ್ದ ಕಾರ್ಯಕರ್ತರು, ಮಹಾರಾಷ್ಟ್ರದ ಲಾರಿಗಳ ಮೇಲೆ ದಾಳಿ