Site icon Vistara News

Border dispute | ಶಿವಸೇನೆ ಬಣಗಳ ದ್ವೇಷ ಸಾಧನೆಗೆ ಅಖಾಡವಾದ ಗಡಿ ಗಲಾಟೆ: ಮಹಾಸಚಿವರಿಗೆ ದಮ್ಮಿಲ್ಲ ಎಂದ ಪ್ರತಿಭಟನಾಕಾರರು

Belagavi border issue shivasena protest

ಬೆಳಗಾವಿ: ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಗಡಿ ಗಲಾಟೆ (Border dispute) ಈಗ ಶಿವಸೇನೆಯ ಎರಡು ಬಣಗಳ ನಡುವಿನ ದ್ವೇಷ ಸಾಧನೆಯ ಅಖಾಡವಾಗಿಯೂ ಬದಲಾಗಿದೆ.

ಮಂಗಳವಾರ ಮಧ್ಯಾಹ್ನದ ಹೊತ್ತು ಮಹಾರಾಷ್ಟ್ರದ ಶಿವಸೇನೆಯ ಉದ್ಧವ್‌ ಠಾಕ್ರೆ ಬಣದ ೨೦ಕ್ಕೂ ಅಧಿಕ ಕಾರ್ಯಕರ್ತರು ಗಡಿ ಭಾಗಕ್ಕೆ ಬಂದು ಕರ್ನಾಟಕದೊಳಗೆ ನುಗ್ಗಲು ಯತ್ನಿಸಿದರು. ಪೊಲೀಸರು ಅವರನ್ನು ತಡೆದು ಹಿಂದಕ್ಕೆ ಕಳುಹಿಸಿದರು. ನಿಜವೆಂದರೆ, ಅವರ ಉದ್ದೇಶ ಕರ್ನಾಟಕದೊಳಗೆ ನುಗ್ಗುವುದೇನೂ ಅಗಿರಲಿಲ್ಲ. ಅವರಿಗೆ ಬೇಕಾಗಿದ್ದು ಮಹಾರಾಷ್ಟ್ರದ ಇಬ್ಬರು ಸಚಿವರನ್ನು ಅಪಮಾನಿಸುವುದು.

ಹೌದು… ಮಹಾರಾಷ್ಟ್ರದಲ್ಲಿ ಈಗ ಶಿವಸೇನೆಯ ಉದ್ಧವ್‌ ಠಾಕ್ರೆ ಬಣ ಸಾಕಷ್ಟು ಕಳಾಹೀನವಾಗಿದೆ. ಇನ್ನೊಂದು ಬಣವಾದ ಶಿಂಧೆ ಗ್ರೂಪ್‌ ಬಿಜೆಪಿ ಜತೆ ಸೇರಿ ಅಧಿಕಾರವನ್ನು ಅನುಭವಿಸಿದೆ. ಈಗ ಶಿವಸೇನೆ ಮತ್ತು ಬಿಜೆಪಿ ಸರ್ಕಾರದ ಇಬ್ಬರು ಮಂತ್ರಿಗಳು ಕರ್ನಾಟಕದ ಮುಂದೆ ತಲೆ ಬಾಗಿದ್ದಾರೆ. ಅವರಿಗೆ ತಾಕತ್ತಿಲ್ಲ ಎಂಬುದನ್ನು ಬಿಂಬಿಸುವ ಸಲುವಾಗಿ ಪ್ರದರ್ಶನವೊಂದನ್ನು ನಡೆಸಲಾಯಿತು.

ಮಹಾರಾಷ್ಟ್ರದ ಇಬ್ಬರು ಸಚಿವರಾದ ಚಂದ್ರಕಾಂತ ಪಾಟೀಲ್ ಮತ್ತು ಶಂಭು ರಾವ್ ದೇಸಾಯಿ ಅವರು ಡಿಸೆಂಬರ್‌ ೬ರಂದು ಬೆಳಗಾವಿಗೆ ಬರುವುದಾಗಿ ಪ್ರಕಟಿಸಿದ್ದರು. ಇಲ್ಲಿ ನಡೆಯುವ ಪರಿ ನಿರ್ವಾಣ ದಿನಾಚರಣೆಯಲ್ಲಿ ಪಾಲ್ಗೊಳ್ಳುವುದು ಅವರ ಉದ್ದೇಶವಾಗಿದ್ದರೂ ಈ ಪರಿಸ್ಥಿತಿಯಲ್ಲಿ ಮರಾಠಿಗರಿಗೆ ಕುಮ್ಮಕ್ಕು ನೀಡುವ ಉದ್ದೇಶವನ್ನೂ ಹೊಂದಿದ್ದರು ಎಂದು ಹೇಳಲಾಗಿತ್ತು. ಇದನ್ನು ಮನಗಂಡ ಕರ್ನಾಟಕ ಸರ್ಕಾರ ಅಲ್ಲಿನ ಸರ್ಕಾರಕ್ಕೆ ಪತ್ರ ಬರೆದು ಮಂತ್ರಿಗಳು ಬರುವುದು ಬೇಡ ಎಂದು ತಿಳಿಸಿತ್ತು. ಜತೆಗೆ ಒಂದೊಮ್ಮೆ ಬಂದರೂ ಗಡಿಯಲ್ಲೇ ತಡೆಯುವುದಾಗಿ ಹೇಳಲಾಗಿತ್ತು. ಅಂತಿಮವಾಗಿ ಮಹಾರಾಷ್ಟ್ರದ ಸಚಿವರು ತಮ್ಮ ಭೇಟಿಯನ್ನು ರದ್ದುಪಡಿಸಿದರು.

ಇದನ್ನೇ ಮುಂದಿಟ್ಟುಕೊಂಡು ಶಿವಸೇನೆಯ ಉದ್ಧವ್‌ ಠಾಕ್ರೆ ಬಣದ ಕೆಲವು ಮಂದಿ ಗಡಿ ಭಾಗಕ್ಕೆ ಆಗಮಿಸಿದ್ದರು. ಶಿವಸೇನೆಯ ಕೊಲ್ಹಾಪುರ ಘಟಕದ ಅಧ್ಯಕ್ಷ ವಿಜಯ್ ದೇವಣೆ ನೇತೃತ್ವದಲ್ಲಿ ಕೈಯಲ್ಲಿ ಕೇಸರಿ ಧ್ವಜ ಹಿಡಿದು ಆಗಮಿಸಿದ ಅವರು ಮಹಾರಾಷ್ಟ್ರದ ಪರ ಘೋಷಣೆ ಕೂಗಿದರು. ಕರ್ನಾಟಕದ ಒಳಗೆ ನುಗ್ಗಲು ಯತ್ನಿಸಿದರು.

ಈ ನಡುವೆ, ಅವರು ಕರ್ನಾಟಕದ ವಿರುದ್ಧ ಏನೂ ಮಾತನಾಡಿಲ್ಲ. ಬದಲಾಗಿ ಮಾತನಾಡಿದ್ದು ತಮ್ಮದೇ ರಾಜ್ಯದ ಸಚಿವರ ವಿರುದ್ಧ. ಚಂದ್ರಕಾಂತ ಪಾಟೀಲ್ ಮತ್ತು ಶಂಭು ರಾವ್ ದೇಸಾಯಿ ಅವರು ಕರ್ನಾಟಕ ಪ್ರವೇಶ ಮಾಡ್ತೀವಿ ಅಂತ ಬಂದು ಎರಡು ಸಲ ಮಾತು ತಪ್ಪಿದ್ದಾರೆ ಎಂದು ಆರೋಪಿಸಿದರು. ಕರ್ನಾಟಕ ಪ್ರವೇಶ ಮಾಡಲಾಗದ ನೀವು ಕೈಯಲ್ಲಿ ಬಳೆ ತೊಟ್ಟುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೈಯಲ್ಲಿ ಹಿಡಿದ ಗೆರಸೆಯಲ್ಲಿ ಅರಶಿನ ಕುಂಕುಮ ಮತ್ತು ಬಳೆ ಹಿಡಿದುಕೊಂಡು ಮಹಿಳಾ ಕಾರ್ಯಕರ್ತರು ಆಗಮಿಸಿದ್ದರು. ಜತೆಗೆ ಸಚಿವರ ಚಿತ್ರವಿರುವ ಬ್ಯಾನರನ್ನೂ ಹಿಡಿದಿದ್ದರು.

ನೂಕಾಟ, ತಳ್ಳಾಟ
ಶಿವಸೇನೆಯ ಟೀಮ್‌ ಗಡಿ ಪ್ರವೇಶ ಮಾಡಲು ಮುಂದಾಗುತ್ತಿದ್ದಂತೆಯೇ ಶಿವಸೇನೆ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ನೂಕಾಟ, ತಳ್ಳಾಟ ಉಂಟಾಯಿತು. ವಿಜಯ್‌ ದೇವಣೆ ಸೇರಿದಂತೆ ೨೦ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಯಿತು.

ಇದನ್ನೂ ಓದಿ | Border dispute | ಪುಣೆಯಲ್ಲಿ ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿಕ ಶಿವಸೇನೆ ಪುಂಡರು, ಬಸ್‌ ಸಂಚಾರ ಬಂದ್‌

Exit mobile version