Site icon Vistara News

Border Dispute | ಎಂಇಎಸ್ ಮಹಾಮೇಳಾವ್‌‌ಗೆ ರಾಜ್ಯ ಸರ್ಕಾರ ಬ್ರೇಕ್; ನಿಪ್ಪಾಣಿ ಗಡಿಗೆ ಬಂದಿದ್ದ ಮಹಾ ನಾಯಕರ ಹಿಮ್ಮೆಟ್ಟಿದ ಪೊಲೀಸರು

chikkodi border protest ನಿಪ್ಪಾಣಿ ಗಡಿ ಮಹಾರಾಷ್ಟ್ರ ನಾಯಕರು

ಬೆಳಗಾವಿ/ಚಿಕ್ಕೋಡಿ: ಪ್ರತಿ ಬಾರಿ ಚಳಿಗಾಲದ ಅಧಿವೇಶನದ ಸಮಯದಲ್ಲಿಯೇ ಮಹಾಮೇಳಾವ್‌ ಆಯೋಜನೆ ಮಾಡುತ್ತಾ ಬರುತ್ತಿದ್ದ ನಾಡದ್ರೋಹಿ ಎಂಇಎಸ್‌ಗೆ ಈ ಬಾರಿ ರಾಜ್ಯ ಸರ್ಕಾರ ತಿರುಗೇಟು ನೀಡಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Border Dispute) ಇರುವುದರಿಂದ ಶಾಂತಿ-ಸುವ್ಯವಸ್ಥೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕಾರ್ಯಕ್ರಮಕ್ಕೆ ತಡೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದೇ ವೇಳೆ ನಿಪ್ಪಾಣಿ ಬಳಿ ಬಂದಿದ್ದ ಮಹಾರಾಷ್ಟ್ರ ಕಾಂಗ್ರೆಸ್‌, ಎನ್‌ಸಿಪಿ, ಶಿವಸೇನೆ ಕಾರ್ಯಕರ್ತರನ್ನು ಹಿಮ್ಮೆಟ್ಟಲಾಗಿದೆ.

ಪೆಂಡಾಲ್‌ ಸೀಜ್‌
ಸೋಮವಾರ (ಡಿ.೧೯) ಎಂಇಎಸ್ ಮಹಾಮೇಳಾವ್ ನಡೆಸಲು ಉದ್ದೇಶಿಸಿದ್ದ ಟಿಳಕವಾಡಿ ವ್ಯಾಕ್ಸಿನ್‌ ಡಿಪೋ ಮೈದಾನಕ್ಕೆ ಎಡಿಜಿಪಿ ಅಲೋಕ್‌ ಕುಮಾರ್ ಭೇಟಿ ನೀಡಿದ್ದು, ಮಹಾಮೇಳಾವ್ ವೇದಿಕೆ ನಿರ್ಮಾಣ ಕಾರ್ಯಕ್ಕೆ ತಡೆಯೊಡ್ಡಿದ್ದಾರೆ. ಅಲ್ಲಿ ಕಾರ್ಯನಿರತರಾಗಿದ್ದವರಿಗೆ ವಾರ್ನಿಂಗ್‌ ಕೊಟ್ಟ ಅಲೋಕ್‌ ಕುಮಾರ್‌, “ನಿಮಗೆ ಯಾರು ಪೆಂಡಾಲ್ ಹಾಕಲು ಹೇಳಿದ್ದಾರೆ? ಯಾರು ಅನುಮತಿ ಕೊಟ್ಟರು?” ಎಂದು ಪ್ರಶ್ನಿಸಿ, ಸಾಯಂಕಾಲವರೆಗೆ ಎಲ್ಲ ವಸ್ತುಗಳನ್ನು ಜಪ್ತಿ ಮಾಡಲಾಗುತ್ತಿದ್ದು, ಟಿಳಕವಾಡಿ ಪೊಲೀಸ್ ಠಾಣೆ ಬಳಿ ಈ ವಸ್ತುಗಳನ್ನು ಇಡಲಾಗುವುದು, ಅಲ್ಲಿಗೆ ಸಂಜೆ ಬಂದು ತಗೆದುಕೊಂಡು ಹೋಗಿ” ಎಂದು ಪೆಂಡಾಲ್ ನಿರ್ಮಿಸುತ್ತಿದ್ದ ಸಿಬ್ಬಂದಿಗೆ ಸೂಚಿಸಿದ್ದಾರೆ. ಅಲ್ಲದೆ, ಸ್ಥಳದಲ್ಲಿದ್ದ ಪೊಲೀಸ್‌ ಅಧಿಕಾರಿಗಳನ್ನು ಕರೆದು, “ಯಾರು ಪೆಂಡಾಲ್ ನಿರ್ಮಿಸಲು ಹೇಳಿದ್ದರು ಎಂಬ ಬಗ್ಗೆ ಕೆಲಸ ಮಾಡುತ್ತಿದ್ದವರ ಬಳಿ ಹೇಳಿಕೆ ಪಡೆದುಕೊಳ್ಳುವಂತೆ ಸೂಚಿಸಿದರು.

ಎಂಇಎಸ್ ಮಹಾಮೇಳಾವ್ ನಡೆಸಲು ನಿರ್ಧರಿಸಿದ್ದ ವ್ಯಾಕ್ಸಿನ್ ಡಿಪೋದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕಾರ್ಯಕ್ರಮ ಸ್ಥಳದ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇರಲಿದೆ.

ಇದನ್ನೂ ಓದಿ | Mohan Bhagwat | ಭಾರತ ಯಾವುದೇ ದೇಶವನ್ನು ಅನುಕರಿಸುವುದು ಬೇಡ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

ನಾಲ್ವರು ಪುಂಡರು ವಶಕ್ಕೆ
ನಿರ್ಬಂಧ ನಡುವೆಯೂ ಮಹಾಮೇಳಾವ್ ನಡೆಸಲು ಆಗಮಿಸುತ್ತಿದ್ದ ಎಂಇಎಸ್ ಪುಂಡರನ್ನು ವ್ಯಾಕ್ಸಿನ್ ಡಿಪೋ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಂಇಎಸ್ ಮುಖಂಡ ಶಿವಾಜಿ ಸುಂಠಕರ್, ಮಾಜಿ ಜಿ.ಪಂ. ಸದಸ್ಯ ಆರ್.ಐ.ಪಾಟೀಲ್ ಸೇರಿ ೧೫ ಜನರನ್ನು ವಶಕ್ಕೆ ಪಡೆಯಲಾಗಿದೆ.

ವೇದಿಕೆ ತೆರವಿಗೆ ಡಿಸಿಪಿ ರವೀಂದ್ರ ಗಡಾದಿ ಸೂಚನೆ
ಅನುಮತಿ ಇಲ್ಲದೆ ವ್ಯಾಕ್ಸಿನ್‌ ಡಿಪೋದಲ್ಲಿ ಪೆಂಡಾಲ್ ಹಾಕಿ ವೇದಿಕೆ ನಿರ್ಮಿಸುತ್ತಿರುವ ನಾಡದ್ರೋಹಿ ಎಂಇಎಸ್ ಪುಂಡರಿಗೆ ತರಾಟೆಗೆ ತೆಗೆದುಕೊಂಡ ರವೀಂದ್ರ ಗಡಾದಿ, ವೇದಿಕೆಯನ್ನು ಕೂಡಲೇ ತೆರವು ಮಾಡಲು ಸೂಚನೆ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಮೈದಾನದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಡಿಸಿಪಿ ರವೀಂದ್ರ ಗಡಾದಿ, ಎಸಿಪಿಗಳಾದ ನಾರಾಯಣ ಭರಮಣಿ, ಚಂದ್ರಪ್ಪ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಸೋಷಿಯಲ್‌ ಮೀಡಿಯಾ ಪೋಸ್ಟ್‌
ಇದೇ ಮೊದಲ ಬಾರಿ ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ್‌ಗೆ ಬ್ರೇಕ್ ಹಾಕಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎಂಇಎಸ್ ಪುಂಡರು ಪೋಸ್ಟ್‌ಗಳನ್ನು ಹಾಕಿ ಉದ್ದಟತನ ಮೆರೆದಿದ್ದಾರೆ. ಕರ್ನಾಟಕ ಸರ್ಕಾರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ಕರ್ನಾಟಕ ಇಂದು ಪ್ರಜಾಪ್ರಭುತ್ವದ ಹತ್ಯೆ ಮಾಡಿದೆ, ಎಂಇಎಸ್ ಎಲ್ಲ ನಾಯಕರನ್ನು ಬಂಧಿಸಿದ್ದಾರೆ ಎಂದೆಲ್ಲ ಬರೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Actor Prabhas | ಸಲ್ಮಾನ್‌ ಖಾನ್‌ ಮದುವೆ ಆದ ನಂತರ ನನ್ನ ಮದುವೆ ಎಂದ ನಟ ಪ್ರಭಾಸ್‌!

ಗಡಿಯಲ್ಲಿ ಮಹಾ ರಾಜಕಾರಣಿಗಳ ಕಿರಿಕ್
ಬೆಳಗಾವಿಯಲ್ಲಿ ಅಧಿವೇಶನ ‌ನಡೆಯುತ್ತಿದೆ ಎಂದು ಗೊತ್ತಿದ್ದರೂ ನಿಪ್ಪಾಣಿಯ ಗಡಿ ಭಾಗಕ್ಕೆ ಬಂದಿರುವ ಎನ್‌ಸಿಪಿ, ಶಿವಸೇನಾ, ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. ಸುಮಾರು ೩೦೦ಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಿದ್ದಾರೆ. ನಿಪ್ಪಾಣಿಯ ಕುಗನೊಳ್ಳಿಗೆ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಹಾಗೂ ಶಿವಸೇನೆ ಅಧ್ಯಕ್ಷ ವಿಜಯ್ ದೇವಣೆ, ಮಹಾರಾಷ್ಟ್ರದ ಮಾಜಿ ಸಚಿವ ಹಸನ್ ಮುಶ್ರಫ್‌ ಹಾಗೂ ಹಿಂಬಾಲಕರು ಆಗಮಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗಡಿಭಾಗದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಈ ವೇಳೆ ಕರ್ನಾಟಕ ಪೊಲೀಸರು ಮತ್ತು ಶಿವಸೇನೆ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆದಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಯ ಕೊಗನೊಳ್ಳಿಯಲ್ಲಿ ಪುಂಡರಿಗೆ ಬ್ರೇಕ್ ಹಾಕಲಾಗಿದೆ. ಆದರೆ, ಮಹಾರಾಷ್ಟ್ರದ ಪೊಲೀಸರು, ಇದನ್ನು ಮೂಕ ಪ್ರೇಕ್ಷಕರಂತೆ ನಿಂತು ನೋಡುತ್ತಿದ್ದರು.

ಸೇತುವೆ ಮೇಲೆ ಭಾಷಣ
ಮಹಾರಾಷ್ಟ್ರ ಎನ್‌ಸಿಪಿ, ಕಾಂಗ್ರೆಸ್‌, ಶಿವಸೇನೆ ನಾಯಕರು, ಕಾರ್ಯಕರ್ತರನ್ನು ಪೊಲೀಸರು ತಡೆಯುತ್ತಿದ್ದಂತೆ ಗಡಿಯ ದೂಧ್‌ಗಂಗಾ ನದಿ ಸೇತುವೆ ಮೇಲೆ ನಿಂತು ಭಾಷಣ‌ ಮಾಡಿದ್ದಾರೆ, ಬೆಳಗಾವಿ, ನಿಪ್ಪಾಣಿ, ಬೀದರ್‌ನ ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಅಲ್ಲಿಂದ ವಾಪಸ್‌ ಹೋಗಿದ್ದಾರೆ.

ಇದನ್ನೂ ಓದಿ | Rashmika Mandanna | ಕನ್ನಡದ ನಟಿಮಣಿಯರಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡ ರಶ್ಮಿಕಾ ಮಂದಣ್ಣ!

Exit mobile version