ಹುಬ್ಬಳ್ಳಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದಲ್ಲಿ (Border Dispute) ಅನಾವಶ್ಯಕವಾಗಿ ಮೂಗು ತೂರಿಸಿಕೊಂಡು ಬರುತ್ತಿರುವ, ಕರ್ನಾಟಕದಲ್ಲೇ ಇದ್ದುಕೊಂಡು ಕ್ಯಾತೆ ತೆಗೆಯುತ್ತಿರುವ ಎಂಇಎಸ್ ಮುಖಂಡರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಎಂಇಎಸ್ ಪುಂಡರನ್ನು ಹದ್ದುಬಸ್ತಿನಲ್ಲಿಡುವುದು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಇಎಸ್ ಪುಂಡಾಟ ಇದೇ ಮೊದಲಲ್ಲ. ಕಳೆದ 50 ವರ್ಷದಿಂದ ಎಂಇಎಸ್ ಪುಂಡಾಟವನ್ನು ಮಾಡುತ್ತಲೇ ಬಂದಿದೆ. ಅವರನ್ನು ಯಾವ ರೀತಿ ಹದ್ದುಬಸ್ತಿನಲ್ಲಿ ಇಡಬೇಕು ಎಂಬುದು ನಮಗೆ ಗೊತ್ತಿದೆ. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಎಂಇಎಸ್ ಮಹಾಮೇಳಾವ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಕುಕ್ಕರ್ ಬಾಂಬ್ ವಿಚಾರವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್ ವಾದ ಸರಿಯಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಅವರು ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಗಮನಿಸಿ ಮಾತನಾಡಬೇಕು. ಅದೊಂದು ಆಕಸ್ಮಿಕ ಘಟನೆ, ಪ್ರೆಶರ್ ಕುಕ್ಕರ್‌ನಿಂದ ಆಗಿದ್ದು ಎಂದು ಡಿಕೆಶಿ ಹೇಳಿದ್ದಾರೆ. ಇಂತಹ ಹೇಳಿಕೆಯನ್ನು ಸಮರ್ಥಿಸಿಕೊಂಡರೆ ಹೇಗೆ ಎಂದು ಸಿದ್ದರಾಮಯ್ಯ ಅವರಿಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಈ ಬೆಳಗಾವಿ ಅಧಿವೇಶನದಲ್ಲಿ ಪ್ರಮುಖವಾಗಿ ಎಸ್‌ಸಿ, ಎಸ್‌ಟಿ ಮೀಸಲಾತಿ ಜಾರಿ ಬಿಲ್ ಚರ್ಚೆಗೆ ಬರಲಿದೆ. ಅಲ್ಲದೆ, ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಚಾರಗಳು ಚರ್ಚೆಗೆ ಬರಲಿದ್ದು, ಅದಕ್ಕೆ ಸರ್ಕಾರ ಉತ್ತರ ನೀಡಲಿದೆ ಎಂದು ತಿಳಿಸಿದರು.
ಇದನ್ನೂ ಓದಿ | ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ರದ್ದು, ರೈತರಿಗೆ ಆಘಾತ