ಬೆಂಗಳೂರು: ಕರ್ನಾಟಕ- ಮಹಾರಾಷ್ಟ್ರ ಗಡಿವಿವಾದಕ್ಕೆ (Border Dispute) ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ನಾವು ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಈ ಬಗ್ಗೆ ಸರ್ವಪಕ್ಷ ಸಭೆಯಲ್ಲಿಯೇ ನಿರ್ಧರಿಸಿಯಾಗಿತ್ತು. ಮತ್ತೊಮ್ಮೆ ಎಲ್ಲರನ್ನೂ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಆದರೆ, ನಮಗೆ ವಾದ ಮಾಡುವ ಉದ್ದೇಶವೇ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿರುವವರೇ ಮಹಾರಾಷ್ಟ್ರ ಸರ್ಕಾರದವರು. ಹಾಗಾಗಿ ನಾವು ನಮ್ಮ ವಾದ ಮಂಡನೆಗೆ ಸಮರ್ಥವಾಗಿ ತಯಾರಿ ಮಾಡಿಕೊಂಡಿದ್ದೇವೆ. ಈ ಮಧ್ಯೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಗಡಿ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೇಳಿದ್ದಾರೆ. ಆದರೆ, ಈ ಮೊದಲಿನ ಸರ್ವಪಕ್ಷ ಸಭೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಸದ್ಯಕ್ಕೆ ನಮ್ಮ ಮುಂದೆ ಸುಪ್ರೀಂ ಕೋರ್ಟ್ ಮುಂದೆ ವಾದ ಮಂಡಿಸುವ ಉದ್ದೇಶ ಮಾತ್ರವೇ ಇದೆ. ಆದರೆ ಮುಂದಿನ ವಾರ ಸರ್ವಪಕ್ಷ ಸಭೆ ಕರೆದು ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಗಡಿ ವಿಚಾರವೇ ಮುಗಿದು ಹೋಗಿದೆ
ಇಡೀ ಗಡಿ ವಿಚಾರವೇ ಮುಗಿದು ಹೋಗಿದೆ. ಜತ್ ತಾಲೂಕು ಕರ್ನಾಟಕಕ್ಕೆ ಸೇರುವ ಬಗ್ಗೆ ಅಲ್ಲಿನ ಗ್ರಾಮ ಪಂಚಾಯಿತಿಗಳೇ ನಿರ್ಣಯ ಮಾಡಿವೆ. ಇವೆಲ್ಲ ಸುಪ್ರೀಂ ಕೋರ್ಟ್ ಮುಂದೆ ವಾದ ಮಂಡನೆ ವೇಳೆ ಬರಲಿದೆ ಎಂದು ಸಿಎಂ ಬೊಮ್ಮಾಯಿ ಉತ್ತರಿಸಿದರು.
ಇದನ್ನೂ ಓದಿ | Border Dispute | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ; ರಾಜ್ಯದ ನಿಲುವಿಗೆ ಕನ್ನಡ ಸಾಹಿತ್ಯ ಪರಿಷತ್ ಬೆಂಬಲ
ಏಕನಾಥ ಶಿಂಧೆ ಹೇಳಿದ್ದೇನು?
ಗಡಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂಬುದು ನಮ್ಮ ನಿಲುವಾಗಿದೆ. ಈ ಕುರಿತು ನಾವು ಈಗಾಗಲೇ ಸಭೆ ನಡೆಸಿದ್ದೇವೆ. ಈ ಹಳೆಯ ವಾದವೇನಿದೆ ಅದು ನ್ಯಾಯಾಲಯದ ಮುಂದಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಆದರೆ, ಇದರ ಜತೆ ಜತೆಗೆ ಈ ವಿಷಯ ಮಾತುಕತೆ ಮೂಲಕ ಬಗೆಹರಿಯಬೇಕು. ಇದು ಮಹಾರಾಷ್ಟ್ರ ಸರ್ಕಾರದ ನಿಲುವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ.
ಈಗಾಗಲೇ ಎರಡೂ ರಾಜ್ಯಗಳ ರಾಜ್ಯಪಾಲರ ಸಭೆಯಾಗಿದೆ. ಕೇಂದ್ರ ಸರ್ಕಾರ ಸಹ ಗಡಿ ವಿವಾದದ ಬಗ್ಗೆ ಸಕಾರಾತ್ಮಕ ನಿಲುವನ್ನು ವ್ಯಕ್ತಪಡಿಸಬೇಕಿದೆ. ಸರ್ವ ಸಮ್ಮತಿ ಮೂಲಕ ಈ ವಿವಾದವು ಬಗೆಹರಿಯಬೇಕೆಂಬುದು ನಮ್ಮ ನಿಲುವು. ಈ ನಿಟ್ಟಿನಲ್ಲಿ ನಾವು ಸಭೆಯನ್ನು ಸಹ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಈ ವಿಷಯವಾಗಿ ಮತ್ಯಾರೂ ತಗಾದೆ ತೆಗೆಯದೇ, ಮತ್ತಷ್ಟು ಜಟಿಲಗೊಳ್ಳುವಂತೆ ಮಾಡಬಾರದು. ನಾವು ಸಭೆ ನಡೆಸಿದಾಗ ಸಾಕಷ್ಟು ಸಲಹೆಗಳು ಬಂದಿವೆ. ಸದ್ಯಕ್ಕೆ ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಯೋಜನೆಯ ಲಾಭ ಗಡಿಭಾಗದ ಮರಾಠಿಗರಿಗೆ ಏನು ಸಿಗುತ್ತಿತ್ತೋ ಅದನ್ನು ಹೆಚ್ಚಿಸಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಹತ್ತು ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿಗೆ ಹೆಚ್ಚಳ ಮಾಡಿದ್ದೇವೆ. ಮುಖ್ಯಮಂತ್ರಿ ಧರ್ಮಾದಾಯ ಸಹಾಯ ನಿಧಿ ಯೋಜನೆಯ ಲಾಭ ಬಂದ್ ಆಗಿತ್ತು. ಅದನ್ನು ಶುರು ಮಾಡಿದ್ದೇವೆ. ಗಡಿಭಾಗದ ಮರಾಠಿಗರಿಗೆ ಆರೋಗ್ಯ ಸೌಲಭ್ಯ ನೀಡಲು ಮಹಾತ್ಮ ಜ್ಯೋತಿಬಾ ಪುಲೆ ಯೋಜನೆ ನೀಡಲು ನಿರ್ಣಯವನ್ನು ಕೈಗೊಂಡಿದ್ದೇವೆ. ಗಡಿ ಭಾಗದ ಮರಾಠಿಗರಿಗೆ ಮಹಾರಾಷ್ಟ್ರ ಸರ್ಕಾರದಿಂದ ಸಿಗುವ ಯೋಜನೆಗಳ ಲಾಭವನ್ನು ಹೆಚ್ಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಪರೇಶ್ ಮೇಸ್ತಾ ಸಾವು ಪ್ರಕರಣ | ಕಾಂಗ್ರೆಸ್ ಬೃಹತ್ ಸಮಾವೇಶ; ಬಿಜೆಪಿ ವಿರುದ್ಧ ಮುಗಿಬಿದ್ದ ಕೈ ನಾಯಕರು