ಬೆಳಗಾವಿ: ಮಹಾರಾಷ್ಟ್ರ ವಿಧಾನಸಭೆ ಕಲಾಪದಲ್ಲಿ ಅಲ್ಲಿನ ಶಾಸಕರು ಕರ್ನಾಟಕದ ಮುಖ್ಯಮಂತ್ರಿಗೆ ಅಪಮಾನಕರವಾಗಿ ಮಾತನಾಡಿದ ಹಾಗೂ ಕರ್ನಾಟಕದ ವಿರುದ್ಧ ಸುಳ್ಳಿನ ಸುರಿಮಳೆ ಮಾಡಿದ ಘಟನೆ ನಡೆದಿದೆ.
ಕರ್ನಾಟಕದಲ್ಲಿ ಗಡಿ ಕ್ಷೋಭೆ ಸೃಷ್ಟಿಗಾಗಿ ಆಗಮಿಸಿದ್ದ ಎನ್‌ಸಿಪಿ ಶಾಸಕರ ಮೇಲೆ ಲಾಠಿ ಬೀಸಿದ ಕರ್ನಾಟಕ ಪೊಲೀಸರ ಕ್ರಮಕ್ಕೆ ಆಕ್ರೋಶಗೊಂಡ ಎನ್‌ಸಿಪಿ ಶಾಸಕ ಜಯಂತ್ ಪಾಟೀಲ್, ಕರ್ನಾಟಕದ ಸಿಎಂ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದರು. ʼʼಕರ್ನಾಟಕ ಸಿಎಂಗೆ ಮಸ್ತಿ ಹೆಚ್ಚಾಗಿದ್ದರೆ ಅವರ ಭಾಷೆಯಲ್ಲೇ ಉತ್ತರಿಸಿʼʼ ಎಂದರು.
ಈ ಕುರಿತು ಮಹಾರಾಷ್ಟ್ರ ವಿಧಾನಸಭೆ ಕಲಾಪದಲ್ಲಿ ಜಯಂತ್ ಪಾಟೀಲ್ ನಿಲುವಳಿ ಸೂಚನೆ ಮಂಡಿಸಿದರು. ʼʼಕರ್ನಾಟಕದಲ್ಲಿ ಮರಾಠಿ ಭಾಷಿಕರು ಸಭೆಯನ್ನು ಆಯೋಜಿಸಿದ್ದರು. ಆ ಸಭೆಗೆ ಮಹಾರಾಷ್ಟ್ರ ನಾಯಕರು ತೆರಳದಂತೆ ತಡೆ ಹಿಡಿಯಲಾಗಿತ್ತು. ಮರಾಠಿ ಭಾಷಿಕರ ಸಭೆಗೆ ತೆರಳುತ್ತಿದ್ದ ಎನ್‌ಸಿಪಿ ಶಾಸಕ ಹಸನ್ ಮುಶ್ರಿಫ್ ಮೇಲೆ ಅಲ್ಲಿನ ಪೊಲೀಸರು ಲಾಠಿ ಪ್ರಹಾರ ಮಾಡಿ ಹಿಂದೆ ಕಳಿಸಿದ್ದಾರೆ. ಬೆಳಗಾವಿಯಲ್ಲಿ ಮರಾಠಿಗರು ಮನೆಯಿಂದ ಹೊರಬರದ ಸ್ಥಿತಿ ಇದೆ. ಮರಾಠಿ ಭಾಷಿಕರಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ. ಇದರ ಬಗ್ಗೆ ಚರ್ಚೆ ಆಗಬೇಕು. ಕರ್ನಾಟಕ ಸಿಎಂ ಯಾವ ಭಾಷೆಯಲ್ಲಿ ಮಾತನಾಡುತ್ತಾರೋ ಅದರಲ್ಲೇ ಉತ್ತರ ನೀಡಬೇಕು. ಅವರಿಗೆ ಮಸ್ತಿ ಏರಿದ್ದರೆ ಮಹಾರಾಷ್ಟ್ರದ ಅಣೆಕಟ್ಟುಗಳ ಎತ್ತರ ಎತ್ತರಿಸಬೇಕು. ಕೊಯ್ನಾ, ವಾರಣಾ, ಕೊಲ್ಲಾಪುರ, ಸಾತಾರಾ ಜಿಲ್ಲೆಯ ಅಣೆಕಟ್ಟುಗಳ ಎತ್ತರ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಕೈಗೊಳ್ಳಲಿ. ಅಲ್ಲಿಯವರೆಗೆ ಈ ಪರಿಸ್ಥಿತಿ ನಿಯಂತ್ರಣ ಮಾಡಲು ಸಾಧ್ಯವಿಲ್ಲʼʼ ಎಂದು ಜಯಂತ್ ಪಾಟೀಲ್ ಆಗ್ರಹಿಸಿದರು. ಶಾಸಕ ಹಸನ್ ಮುಶ್ರಿಫ್ ಜೊತೆ ಯಾವುದೇ ಅಸಭ್ಯ ವರ್ತನೆ ಆಗಿದ್ದರೆ ಮಹಾರಾಷ್ಟ್ರ ಸರ್ಕಾರ ವಿಚಾರಣೆ ನಡೆಸಲಿ ಎಂದು ಸ್ಪೀಕರ್ ಹೇಳಿದರು.
ಇದನ್ನೂ ಓದಿ | Border Dispute | ಮಹಾಮೇಳಾವ್‌ಗಾಗಿ ಬೆಳಗಾವಿಗೆ ಬರಲಿದ್ದ ಮಹಾ ಸಂಸದನಿಗೆ ಗಡಿ ಪ್ರವೇಶ ನಿಷೇಧ: ಡಿಸಿ ಖಡಕ್ ಆದೇಶ
ಈ ನಡುವೆ, ಕೇಂದ್ರ ಗೃಹಸಚಿವ ಅಮಿತ್ ಶಾ ಸೂಚನೆಗೂ ಕ್ಯಾರೇ ಎನ್ನದ ಮಹಾರಾಷ್ಟ್ರದ ಎನ್‌ಸಿಪಿ ಶಾಸಕರು ಕನ್ನಡ ನಾಡದ್ರೋಹಿ ಘೋಷವಾಕ್ಯದ ಟೋಪಿ ಧರಿಸಿ ಕಲಾಪಕ್ಕೆ ಹಾಜರಾದರು. ʼಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕುʼ ಎಂಬ ಬರಹದ ಟೋಪಿಯನ್ನು ಎನ್‌ಸಿಪಿ ಶಾಸಕ ಹಸನ್ ಮುಶ್ರಿಫ್ ಧರಿಸಿದ್ದರು. ಇದಲ್ಲದೆ, ಕರ್ನಾಟಕ ವಿರುದ್ಧ ಸುಳ್ಳು ಆರೋಪಗಳ ಸುರಿಮಳೆ ಮಾಡಿದರು.
ʼʼಕರ್ನಾಟಕ ಸಿಎಂ ಹೇಳಿಕೆ ವಿರೋಧಿಸಿ ನಾವು ಕೊಲ್ಲಾಪುರದಲ್ಲಿ ಧರಣಿ ನಡೆಸಿದ್ದೆವು. ಆಗ ಮರಾಠಿ ಭಾಷಿಕರು ನಮ್ಮ ಬಳಿ ಬಂದು ಅಳಲು ತೋಡಿಕೊಂಡು ಮಹಾಮೇಳಾವ್‌ಗೆ ಆಹ್ವಾನ ನೀಡಿದರು. ಕರ್ನಾಟಕ ಸರ್ಕಾರದಿಂದ ನಮಗೆ ಅನ್ಯಾಯ, ದೌರ್ಜನ್ಯ ಆಗುತ್ತಿದೆ. ಒಬ್ಬನೇ ಒಬ್ಬ ಮರಾಠಿ ಭಾಷಿಕರನ್ನು ಮನೆಯಿಂದ ಹೊರಬರಲು ಬಿಟ್ಟಿಲ್ಲ. 865 ಗ್ರಾಮಗಳ ಜನ ಮಹಾರಾಷ್ಟ್ರ ಸೇರಲು ಬಯಸಿ ಠರಾವು ಹೊರಡಿಸಿದ್ದಾರೆ. ನಾನು ಬೆಳಗಾವಿಗೆ ಹೊರಟರೆ ಅಲ್ಲಿ ಮಿಲಿಟರಿ ತಂದು ನಿಲ್ಲಿಸಿದರು. ಗಡಿವಿವಾದ ಇತ್ಯರ್ಥ ಆಗುವವರೆಗೂ ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಆಗಲಿʼʼ ಎಂದು ಹಸನ್ ಮುಶ್ರಿಫ್ ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಕರ್ನಾಟಕ ಮಹಾರಾಷ್ಟ್ರ ಎರಡೂ ರಾಜ್ಯಗಳು ಪರಸ್ಪರರ ಪ್ರದೇಶಗಳ ಬೇಡಿಕೆ ಇಡಬಾರದು ಎಂದು ಅಮಿತ್ ಶಾ ಹಿಂದೆ ಸೂಚಿಸಿದ್ದರು.
ಇದನ್ನೂ ಓದಿ | Border dispute | ಕರ್ನಾಟಕದ ಎಚ್ಚರಿಕೆಗೆ ಮಣಿದ ಮಹಾರಾಷ್ಟ್ರ: ಸಚಿವರ ಬೆಳಗಾವಿ ಭೇಟಿ ರದ್ದು, ಫಡ್ನವಿಸ್ ಹೇಳಿದ್ದೇನು?