ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ (Lachyan) ಗ್ರಾಮದಲ್ಲಿ ಅಜ್ಜ ಕೊರೆಸಿದ ಕೊಳವೆಬಾವಿಗೆ ಬಿದ್ದ 2 ವರ್ಷದ ಸಾತ್ವಿಕ್‌ನನ್ನು ಯಶಸ್ವಿಯಾಗಿ (Borewell Tragedy) ರಕ್ಷಿಸಲಾಗಿದೆ. ಬುಧವಾರ ಸಂಜೆ (ಏಪ್ರಿಲ್ 3) 5.30ರ ಸುಮಾರಿಗೆ ಆಟವಾಡುತ್ತ ಹೋದ ಬಾಲಕನು ಕೊಳವೆಬಾವಿಗೆ ಬಿದ್ದ ಪ್ರಕರಣವು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆದರೆ, ಎನ್‌ಡಿಆರ್‌ಎಫ್ (NDRF) ಹಾಗೂ ಎಸ್‌ಡಿಆರ್‌ಎಫ್ (SDRF) ಸಿಬ್ಬಂದಿಯು ಸತತ 20 ತಾಸು ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಹಾಗಾದರೆ, 20 ಅಡಿ ಆಳದ ಕೊಳವೆಬಾವಿಗೆ ಬಿದ್ದ ಸಾತ್ವಿಕ್‌ನನ್ನು ರಕ್ಷಿಸಿದ್ದು ಹೇಗೆ? ಕಾರ್ಯಾಚರಣೆಯ ರೀತಿ ಹೇಗಿತ್ತು ಎಂಬುದರ ಮಾಹಿತಿ ಇಲ್ಲಿದೆ.
ಮಗು ಬಿದ್ದ ತಕ್ಷಣ ಕಾರ್ಯಾಚರಣೆ
ಬುಧವಾರ ಸಂಜೆ 5.30ರ ಸುಮಾರಿಗೆ ಮಗು ಕೊಳವೆಬಾವಿಗೆ ಬಿದ್ದಿದ್ದು, ಇದಾದ ಅರ್ಧ ಗಂಟೆಯಲ್ಲಿಯೇ ಕಾರ್ಯಾಚರಣೆ ಆರಂಭಿಸಿದ್ದು ಮಗುವಿನ ರಕ್ಷಣೆಯಲ್ಲಿ ಸಿಕ್ಕ ಮೊದಲ ಮುನ್ನಡೆಯಾಗಿದೆ. ಬುಧವಾರ ಸಂಜೆ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿಯು ಸತತ ಪ್ರಯತ್ನ ಮಾಡಿತು. ರಾತ್ರಿಯೇ ಎರಡು ಹಿಟಾಚಿ, ಮೂರು ಜೆಸಿಬಿ ಯಂತ್ರಗಳ ಮೂಲಕ ಕೊಳವೆಬಾವಿಯ ಸುತ್ತ 15 ಅಡಿ ಅಗೆಯಲಾಯಿತು. ಕೆಲವೇ ಗಂಟೆಗಳಲ್ಲಿ ಇಷ್ಟೊಂದು ಪ್ರಗತಿ ಕಂಡಿದ್ದು, ರಂಧ್ರ ಕೊರೆದು ಮಗುವಿನ ರಕ್ಷಣೆ ಮಾಡಲು ಸಾಧ್ಯವಾಯಿತು.
ರಂಧ್ರ ಕೊರೆದು ಆಮ್ಲಜನಕ ರವಾನೆ
ಗುರುವಾರ ಬೆಳಗ್ಗೆ ಕೊಳವೆಬಾವಿಯ ಬಳಿ ಅಡ್ಡಲಾಗಿ 3 ಅಡಿ ರಂಧ್ರ ಕೊರೆದ ಸಿಬ್ಬಂದಿಯು ಕೃತಕ ಆಮ್ಲಜನಕವನ್ನು ರವಾನಿಸಿತು. ಅಷ್ಟೇ ಅಲ್ಲ, ಮಗು ಕಾಲು ಅಲ್ಲಾಡಿಸುತ್ತಿರುವ ದೃಶ್ಯವನ್ನು ಕ್ಯಾಮೆರಾ ಮೂಲಕ ಸೆರೆಹಿಡಿದ ದಕ್ಷ ಸಿಬ್ಬಂದಿಯು ಕುಟುಂಬಸ್ಥರು ನಿಟ್ಟುಸಿರು ಬಿಡುವಂತೆ ಮಾಡಿತು. ಕ್ಯಾಮೆರಾ ಮೂಲಕ ಮಾನಿಟರ್ ಮಾಡಿ, ಅಡ್ಡ ರಂಧ್ರದ ಮೂಲಕ ಆಮ್ಲಜನಕ ಪೂರೈಸಿದ ಸಿಬ್ಬಂದಿಯು ಕೊನೆಗೂ ಮಗುವನ್ನು ರಕ್ಷಣೆ ಮಾಡಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಬಂಡೆ ಅಡ್ಡ ಬಂದ ಕಾರಣ ರಂಧ್ರ ಕೊರೆಯುವುದು ತುಸು ವಿಳಂಬವಾದರೂ ಅಧಿಕಾರಿಗಳ ಚಾಣಾಕ್ಷತನವು ಸಫಲವಾಗಿದೆ.
ಸಿನಿಮೀಯ ರೀತಿಯಲ್ಲಿ ಕೊನೆಯ ಹಂತದ ಕಾರ್ಯಾಚರಣೆ
ಸಾತ್ವಿಕ್ ಬೋರ್‌ವೆಲ್ ಪೈಪ್ ಮಧ್ಯೆ ಸಿಲುಕಿದ್ದ. ಸಿಬ್ಬಂದಿಯು ಯಂತ್ರದ ಮೂಲಕ ರಂಧ್ರ ಕೊರೆಯಲು ಹೋದಾಗ ಅದರ ಶಬ್ದ ಕೇಳಿ ಅಳುತ್ತಿದ್ದ. ಮಗು ಅಳುತ್ತಿರುವ ಶಬ್ದ ಕೇಳಿದಾಗಲೇ ಸಿಬ್ಬಂದಿಗೆ ಧೈರ್ಯ ಬಂದಿತು. ಆದರೆ, ಹಾಗೆಯೇ ರಂಧ್ರ ಕೊರೆದರೆ ಮಗುವಿನ ಮೈಮೇಲೆ ಮಣ್ಣು, ಧೂಳು ಬೀಳುವ ಸಾಧ್ಯತೆ ಇತ್ತು. ಅಲ್ಲೂ ಚಾಣಾಕ್ಷತನ ಮೆರೆದ ಅಧಿಕಾರಿಗಳು ವ್ಯಾಕ್ಯೂಮ್ ಕ್ಲೀನರ್ ಮೂಲಕ ಧೂಳನ್ನು ಎಳೆದುಕೊಂಡರು. ಆಗ ಮಗುವನ್ನು ಇನ್ನಷ್ಟು ಸುರಕ್ಷಿತವಾಗಿ ರಕ್ಷಿಸಲು ಸಾಧ್ಯವಾಯಿತು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೊಳವೆಬಾವಿ ದುರಂತಗಳಿಗೆ ಕೊನೆಯೇ ಇಲ್ಲವೆ?
ಮುಂದಿನ ಪ್ರಕ್ರಿಯೆ ಏನು?
ಕೊಳವೆಬಾವಿಯಿಂದ ಮಗುವನ್ನು ಹೊರತೆಗೆಯಲಾಗಿದ್ದು, ಕೂಡಲೇ ಅದಕ್ಕೆ ಪ್ರಥಮ ಚಿಕಿತ್ಸೆ ನೀಡಲಾಗುತ್ತದೆ. ಕೊಳವೆಬಾವಿಯ ಪಕ್ಕದಲ್ಲಿಯೇ ಇರುವ ಆಂಬುಲೆನ್ಸ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತದೆ. ಇದಾದ ನಂತರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗುತ್ತದೆ. ಸುಮಾರು 20 ತಾಸು ಬೋರ್‌ವೆಲ್‌ನಲ್ಲೇ ಇದ್ದ ಕಾರಣ ಮಗುವಿನ ಉಸಿರಾಟ ಸೇರಿ ಹಲವು ತಪಾಸಣೆ ಮಾಡಲಾಗುತ್ತದೆ. ಮಗು ಆರೋಗ್ಯವಾಗಿದೆ ಎಂಬುದನ್ನು ವೈದ್ಯರು ದೃಢಪಡಿಸಿದ ನಂತರವೇ ಅವರ ಕುಟುಂಬಸ್ಥರಿಗೆ ನೀಡಲಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ