Site icon Vistara News

Borewell Tragedy: ಸಾವು ಗೆದ್ದು ತಾಯಿ ಮಡಿಲು ಸೇರಿದ ಸಾತ್ವಿಕ್; ಈಗ ಹೇಗಿದೆ ಆರೋಗ್ಯ?

Borewell Tragedy

Borewell Tragedy In Karnataka: How Is Two Year Old Kid Now?

ವಿಜಯಪುರ: ಸತತ 20 ಗಂಟೆಗಳವರೆಗೆ ಜೀವನ್ಮರಣದ ಮಧ್ಯೆ ಹೋರಾಡಿದ ಸಾತ್ವಿಕ್‌ ಈಗ ಸಾವು ಗೆದ್ದು ಬಂದಿದ್ದಾನೆ. ವಿಜಯಪುರ ಜಿಲ್ಲೆ (Vijayapura District) ಇಂಡಿ ತಾಲೂಕಿನ ಲಚ್ಯಾಣ (Lachyan) ಗ್ರಾಮ ಮಾತ್ರವಲ್ಲ, ಇಡೀ ರಾಜ್ಯವೇ ಒಂದು ಸಲ ನಿಟ್ಟುಸಿರು ಬಿಟ್ಟಿದೆ. ಕೊಳವೆಬಾವಿಯಲ್ಲಿ ಬಿದ್ದಿದ್ದ 2 ವರ್ಷದ ಸಾತ್ವಿಕ್‌ನನ್ನು ಸತತ ಕಾರ್ಯಾಚರಣೆ (Borewell Tragedy) ಮೂಲಕ ಹೊರತೆಗೆಯಲಾಗಿದ್ದು, ಆತನೀಗ ಅಮ್ಮನ ಮಡಿಲು ಸೇರಿದ್ದಾನೆ. ಕೊಳವೆಬಾವಿಯಲ್ಲಿ ಸಿಲುಕಿದ ಕಾರಣ ಆತನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಳವೆಬಾವಿಯಿಂದ ಹೊರತೆಗೆದ ಬಳಿಕ ಸಾತ್ವಿಕ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಕೂಡಲೇ ಆತನನ್ನು ಇಂಡಿ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಯಲ್ಲಿಯೇ ಆತ ತಾಯಿ ಮಡಿಲಲ್ಲಿ ಮಲಗಿರುವ ದೃಶ್ಯಗಳು ಲಭ್ಯವಾಗಿವೆ. ತಾಯಿ ಮಡಿಲಲ್ಲಿ ನಿರುಮ್ಮಳವಾಗಿ ಮಲಗಿದ್ದು, 20 ಗಂಟೆ ಮಗನನ್ನು ಬಿಟ್ಟಿದ್ದ ತಾಯಿಯೂ ಭಾವುಕರಾಗಿದ್ದಾರೆ. ಸಾತ್ವಿಕ್‌ ಈಗ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾನೆ. ಆತನಿಗೆ ಗಂಭೀರ ಪ್ರಮಾಣದ ಗಾಯಗಳಾಗಿಲ್ಲ. ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದಾಗಿ ಸಾತ್ವಿಕ್‌ ತಂದೆ ಸತೀಶ್ ತಿಳಿಸಿದ್ದಾರೆ.

ಸತತ 20 ಗಂಟೆ ಕಾರ್ಯಾಚರಣೆ

ಬುಧವಾರ‌ (ಏಪ್ರಿಲ್‌ 3) ಸಂಜೆ 5.30ರ ಸುಮಾರಿಗೆ ಮಗು ಕೊಳವೆಬಾವಿಗೆ ಬಿದ್ದಿದ್ದು, ಇದಾದ ಅರ್ಧ ಗಂಟೆಯಲ್ಲಿಯೇ ಕಾರ್ಯಾಚರಣೆ ಆರಂಭಿಸಿದ್ದು ಮಗುವಿನ ರಕ್ಷಣೆಯಲ್ಲಿ ಸಿಕ್ಕ ಮೊದಲ ಮುನ್ನಡೆಯಾಗಿದೆ. ಬುಧವಾರ ಸಂಜೆ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿಯು ಸತತ ಪ್ರಯತ್ನ ಮಾಡಿತು. ರಾತ್ರಿಯೇ ಎರಡು ಹಿಟಾಚಿ, ಮೂರು ಜೆಸಿಬಿ ಯಂತ್ರಗಳ ಮೂಲಕ ಕೊಳವೆಬಾವಿಯ ಸುತ್ತ 15 ಅಡಿ ಅಗೆಯಲಾಯಿತು. ಕೆಲವೇ ಗಂಟೆಗಳಲ್ಲಿ ಇಷ್ಟೊಂದು ಪ್ರಗತಿ ಕಂಡಿದ್ದು, ರಂಧ್ರ ಕೊರೆದು ಮಗುವಿನ ರಕ್ಷಣೆ ಮಾಡಲು ಸಾಧ್ಯವಾಯಿತು.

ಇದನ್ನೂ ಓದಿ: Borewell Tragedy: ಕೊಳವೆಬಾವಿಗೆ ಬಿದ್ದ ಬಾಲಕ ಸಾವನ್ನು ಗೆದ್ದು ಬಂದ! ಹೀಗಿತ್ತು 20 ಗಂಟೆಗಳ ಕಾರ್ಯಾಚರಣೆ

ಗುರುವಾರ ಬೆಳಗ್ಗೆ ಕೊಳವೆಬಾವಿಯ ಬಳಿ ಅಡ್ಡಲಾಗಿ 3 ಅಡಿ ರಂಧ್ರ ಕೊರೆದ ಸಿಬ್ಬಂದಿಯು ಕೃತಕ ಆಮ್ಲಜನಕವನ್ನು ರವಾನಿಸಿತು. ಅಷ್ಟೇ ಅಲ್ಲ, ಮಗು ಕಾಲು ಅಲ್ಲಾಡಿಸುತ್ತಿರುವ ದೃಶ್ಯವನ್ನು ಕ್ಯಾಮೆರಾ ಮೂಲಕ ಸೆರೆಹಿಡಿದ ದಕ್ಷ ಸಿಬ್ಬಂದಿಯು ಕುಟುಂಬಸ್ಥರು ನಿಟ್ಟುಸಿರು ಬಿಡುವಂತೆ ಮಾಡಿತು. ಕ್ಯಾಮೆರಾ ಮೂಲಕ ಮಾನಿಟರ್‌ ಮಾಡಿ, ಅಡ್ಡ ರಂಧ್ರದ ಮೂಲಕ ಆಮ್ಲಜನಕ ಪೂರೈಸಿದ ಸಿಬ್ಬಂದಿಯು ಕೊನೆಗೂ ಮಗುವನ್ನು ರಕ್ಷಣೆ ಮಾಡಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಬಂಡೆ ಅಡ್ಡ ಬಂದ ಕಾರಣ ರಂಧ್ರ ಕೊರೆಯುವುದು ತುಸು ವಿಳಂಬವಾದರೂ ಅಧಿಕಾರಿಗಳ ಚಾಣಾಕ್ಷತನವು ಸಫಲವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version