Site icon Vistara News

Borewell Tragedy: ಸಾವು ಗೆದ್ದ ಸಾತ್ವಿಕ್;‌ ಕೊಳವೆಬಾವಿಯಿಂದ ರಕ್ಷಣೆ, ಮೇಲೆತ್ತುವುದಷ್ಟೇ ಬಾಕಿ

Borewell Tragedy

Borewell Tragedy: Rescue Operation Success In Vijaypur; Satvik Wins The Battle Of Death

ವಿಜಯಪುರ: ತಂದೆ-ತಾಯಿ ಸೇರಿ ಲಕ್ಷಾಂತರ ಜನರು ಸಲ್ಲಿಸಿದ ಪ್ರಾರ್ಥನೆ ಫಲಿಸಿದೆ. ಸುಮಾರು 15 ಗಂಟೆಗೂ ಹೆಚ್ಚು ಕಾಲ ಎನ್‌ಡಿಆರ್‌ಎಫ್‌ (NDRF) ಹಾಗೂ ಎಸ್‌ಡಿಆರ್‌ಎಫ್‌ (SDRF) ತಂಡಗಳು ನಡೆಸಿದ ರಕ್ಷಣಾ ಕಾರ್ಯಾಚರಣೆಯು ಫಲಿಸಿದೆ. ಹೌದು, ವಿಜಯಪುರ (Vijayapura) ಜಿಲ್ಲೆ ಇಂಡಿ ತಾಲೂಕು ಲಚ್ಯಾಣ (Lachyan) ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ 2 ವರ್ಷದ ಸಾತ್ವಿಕ್‌ ಸಾವು ಗೆದ್ದು (Borewell Tragedy) ಬಂದಿದ್ದಾನೆ. ಸುಮಾರು 20 ಅಡಿಯ ಕೊಳವೆಬಾವಿಯಿಂದ ಬಾಲಕನನ್ನು ಯಶಸ್ವಿಯಾಗಿ (Rescue Operation) ರಕ್ಷಿಸಲಾಗಿದೆ. ಕೊನೆಯ ಹಂತದ ಕಾರ್ಯಾಚರಣೆ ವೇಳೆ ಬಾಲಕ ಅಳುತ್ತಿರುವ ಧ್ವನಿಯು ಸಿಬ್ಬಂದಿಗೆ ಕೇಳಿಸಿದೆ. ಈ ಕುರಿತು ಅಧಿಕಾರಿಗಳೇ ಮಾಹಿತಿ ನೀಡಿದರು. ಇನ್ನೇನು ಮೇಲಕ್ಕೆತ್ತುವ ಪ್ರಕ್ರಿಯೆಯೊಂದೇ ಬಾಕಿ ಉಳಿದಿದೆ.

ಹೇಗೆ ನಡೆಯಿತು ಕಾರ್ಯಾಚರಣೆ?

ಮಗು ಬಿದ್ದ ಅರ್ಧ ಗಂಟೆಯಲ್ಲಿಯೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಕಾರಣ ಮಗುವನ್ನು ರಕ್ಷಿಸಲು ಸಾಧ್ಯವಾಯಿತು. ಬುಧವಾರ ರಾತ್ರಿಯೇ ಹಿಟಾಚಿ ಮೂಲಕ ಕೊಳವೆಬಾವಿ ಪಕ್ಕದಲ್ಲಿ ಅಡ್ಡವಾಗಿ 3 ಅಡಿ ರಂಧ್ರ ಕೊರೆಯಲಾಯಿತು. ಆ ರಂಧ್ರದ ಮೂಲಕವೇ ಬಾಲಕ ಬಿದ್ದಿರುವ ಜಾಗಕ್ಕೆ ಹಗ್ಗದ ಮೂಲಕ ಒಂದು ಕ್ಯಾಮೆರಾ ಇಳಿಸಲಾಯಿತು. ಬಾಲಕನ ಚಲನವಲನದ ಮೇಲೆ ಕ್ಯಾಮೆರಾ ಮೂಲಕ ನಿಗಾ ಇರಿಸಿ, ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡಲಾಯಿತು. ಬಾಲಕನ ಕಾಲು ಅಲುಗಾಡುತ್ತಿರುವುದನ್ನು ಕ್ಯಾಮೆರಾ ಮೂಲಕ ಸೆರೆಹಿಡಿದ ಸಿಬ್ಬಂದಿಯು, ಕಾರ್ಯಾಚರಣೆಯನ್ನು ಇನ್ನಷ್ಟು ಕ್ಷಿಪ್ರಗೊಳಿಸಿ, ಕೊನೆಗೆ ಮಗುವನ್ನು ರಕ್ಷಣೆ ಮಾಡಿದ್ದಾರೆ.

ಸತೀಶ್ ಮತ್ತು ಪೂಜಾ ದಂಪತಿಯ ಪುತ್ರ ಸಾತ್ವಿಕ್ ಮುಜಗೊಂಡ (2) ಎಂಬ ಬಾಲಕನು ಬುಧವಾರ (ಏಪ್ರಿಲ್‌ 3) ಆಟವಾಡಲು ಹೋಗಿದ್ದ ವೇಳೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದ. ಸಂಜೆ 5.30ರ ಸುಮಾರಿಗೆ ಆತನು ಕೊಳವೆಬಾವಿಗೆ ಬಿದ್ದಿದ್ದ. ಇದಾದ ಕೆಲವೇ ಹೊತ್ತಿನಲ್ಲಿ ಅಂದರೆ, ಸಂಜೆ 6 ಗಂಟೆಯಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿತ್ತು. ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳು ಸತತವಾಗಿ ಕಾರ್ಯಾಚರಣೆ ನಡೆಸಿ ಕೊನೆಗೂ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಫಲಿಸಿದ ಪ್ರಾರ್ಥನೆ

ಸಾತ್ವಿಕ್ ಬದುಕಿ ಬರಲಿ ಎಂದು ಗ್ರಾಮದಲ್ಲಿ ಹಾಗೂ ಸುತ್ತಮುತ್ತ ಜನ ದೇವಾಲಯಗಳಲ್ಲಿ ವಿಶೇಷ ಪೂಜೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದರು. ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಗೆ ಗ್ರಾಮದ ಯುವಕರಿಂದ ವಿಶೇಷ ಪೂಜೆ ನಡೆದಿತ್ತು. ಬಾಲಕ ಬದುಕಿ ಬರಲಿ ಎಂದು ಪೂಜೆ ಸಲ್ಲಿಸಿ ಯುವಕರು ಪ್ರಾರ್ಥನೆ ಸಲ್ಲಿಸಿದ್ದರು. ಬಾಲಕನ ತಂದೆ-ತಾಯಿಯಂತೂ ರಾತ್ರಿಯಿಡೀ ಕೊಳವೆಬಾವಿ ಪಕ್ಕದಲ್ಲೇ ಇದ್ದು ದೇವರಲ್ಲಿ ಪ್ರಾರ್ಥನೆ ಮಾಡಿದ್ದರು. ಈಗ ಪ್ರಾರ್ಥನೆ ಫಲಿಸಿದ್ದು, ಬಾಲಕ ಆರೋಗ್ಯವಾಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೊಳವೆಬಾವಿ ದುರಂತಗಳಿಗೆ ಕೊನೆಯೇ ಇಲ್ಲವೆ?

ಆರೋಗ್ಯ ತಪಾಸಣೆ

ಕೊಳವೆಬಾವಿಯ ಪಕ್ಕದಲ್ಲಿಯೇ ಆಂಬುಲೆನ್ಸ್‌ ನಿಂತಿದ್ದು, ವೈದ್ಯರು ವೈದ್ಯರು ಬಾಲಕನ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಸುಮಾರು 18 ಗಂಟೆಗೂ ಹೆಚ್ಚು ಕಾಲ ಮಗು ಕೊಳವೆಬಾವಿಯಲ್ಲಿಯೇ ಇದ್ದ ಕಾರಣ ಆತನ ಉಸಿರಾಟ ಸೇರಿ ಹಲವು ರೀತಿಯ ತಪಾಸಣೆ ಮಾಡಲಾಗುತ್ತದೆ. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಮಗುವಿನ ಆರೋಗ್ಯ ತಪಾಸಣೆ ನಡೆದು, ಆರೋಗ್ಯ ದೃಢಪಡಿಸಿಕೊಂಡ ಬಳಿಕವೇ ಮಗುವನ್ನು ಕುಟುಂಬಸ್ಥರಿಗೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version