ಹೊಸಪೇಟೆ: ಸಾರಿಗೆ ಬಸ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಚಕ್ರದಡಿ ಸಿಲುಕಿ ಮೂರೂವರೆ ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಹೊಸಪೇಟೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ಬಸ್ ಹಿಮ್ಮುಖವಾಗಿ ಚಲಿಸುವಾಗ ಪ್ಲಾಟ್ ಫಾರಂ ಬಳಿ ನಿಂತಿದ್ದ ಬಾಲಕನ ಮೇಲೆ ಹರಿದು ಬಾಲಕ ಕೊನೆಯುಸಿರೆಳೆದಿದ್ದಾನೆ.
ಹೊಸಪೇಟೆ ತಾಲೂಕಿನ ನಾಗಲಾಪುರ ಗ್ರಾಮದ ರಾಚಪ್ಪ, ಮಲ್ಲಮ್ಮ ದಂಪತಿ ಪುತ್ರ ಕೇಸರಿ ನಂದನ್ ಮೃತ ಬಾಲಕ. ಗಂಗಾವತಿಗೆ ಹೋಗುವ ಪ್ಲಾಟ್ ಫಾರಂನಲ್ಲಿ ಪೋಷಕರೊಂದಿಗೆ ಬಾಲಕ ನಿಂತಿದ್ದ. ಬಸ್ ಹಿಂದೆ ಮಗು ನಿಂತಿದ್ದನ್ನು ನೋಡದೇ ಡ್ರೈವರ್ ರಿವರ್ಸ್ ತೆಗೆದುಕೊಂಡಿದ್ದಾನೆ. ಈ ವೇಳೆ ಬಸ್ ಹರಿದಿದ್ದರಿಂದ ಕೇಸರಿ ನಂದನ್ ಮೃತಪಟ್ಟಿದ್ದಾನೆ.
ಮಲ್ಲಮ್ಮನ ತವರು ಮನೆ ಕೊಪ್ಪಳಕ್ಕೆ ಹೋಗಿ ವಾಪಸ್ ನಾಗಲಾಪುರಕ್ಕೆ ದಂಪತಿ ತೆರಳುತ್ತಿದ್ದರು. ಸದ್ಯ ಬಸ್ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹೊಸಪೇಟೆ ಡಿವೈಎಸ್ಪಿ ಶರಣಬಸವೇಶ್ವರ ಮತ್ತು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Fraud Case : 10 ಕೋಟಿ ಮೌಲ್ಯದ ವಜ್ರ ಬರೀ 3 ಕೋಟಿಗೆ ಕೊಡ್ತೀವಿ ಅಂದವರು ಅಂದರ್!
ಟ್ರ್ಯಾಕ್ಟರ್-ಬೈಕ್ ಡಿಕ್ಕಿಯಾಗಿ ಬಾಲಕ ಸಾವು
ಚಿಕ್ಕೋಡಿ: ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನ ಡಿಕ್ಕಿಯಾಗಿ ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಲ್ಲಿ ಟ್ರ್ಯಾಕ್ಟರ್-ಬೈಕ್ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಮೃತ ಬಾಲಕನನ್ನು ಆದರ್ಶ ಕುಮಾರ ಗುಪ್ತಾ (16) ಎಂದು ಗುರುತಿಸಲಾಗಿದೆ. ಸಂಕೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಿಸಿದ ಹುಡುಗಿಗೆ ಅಬಾರ್ಷನ್ ಮಾಡಿಸಿ ಕೈಕೊಟ್ಟು ಪರಾರಿಯಾದ ಪ್ರೇಮಿ
ಕೊಪ್ಪಳ: ಪ್ರೀತಿಸಿದ ಹುಡುಗಿಗೆ (Love Case) ಮದುವೆ ಆಗುವುದಾಗಿ ನಂಬಿಸಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಆಕೆ ಗರ್ಭಿಣಿಯೆಂದು ತಿಳಿದಾಕ್ಷಣ ಅಬಾರ್ಷನ್ ಮಾಡಿಸಿ ಅರ್ಧ ದಾರಿಯಲ್ಲೇ ಬಿಟ್ಟು ಹೋಗಿದ್ದಾನೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವರನಖೇಡದಲ್ಲಿ ಘಟನೆ ನಡೆದಿದೆ.
ವರನಖೇಡ ಗ್ರಾಮದ ಮಂಜುನಾಥ ಎಂಬಾತ ಆತನ ಅಣ್ಣ ಹನುಮೇಶ ನಾಯಕ ಸೇರಿ ಯುವತಿಗೆ ಗರ್ಭಪಾತ ಮಾಡಿಸಿದ್ದಾರೆ. ಅದೇ ಗ್ರಾಮದ ಯುವತಿಯನ್ನು ಮಂಜುನಾಥ ಎರಡು ವರ್ಷದಿಂದ ಪ್ರೀತಿಸುತ್ತಿದ್ದ. ಯುವತಿಯನ್ನು ಪುಸಲಾಯಿಸಿ ಕಳೆದ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಪರಾರಿಯಾಗಿದ್ದ.
ಇದನ್ನೂ ಓದಿ:Water Crisis: ಬೆಂಕಿ ನಂದಿಸಲು ಅಪಾರ್ಟ್‌ಮೆಂಟ್‌ಗಳಿಂದ ನೀರಿಗಾಗಿ ಬೇಡಿದ ಅಗ್ನಿಶಾಮಕ ದಳ ಸಿಬ್ಬಂದಿ
ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಯುವತಿಯ ತಂದೆಯಿಂದ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಈ ನಡುವೆ ಮೂರು ದಿನಗಳ ಹಿಂದೆ ಮಂಜುನಾಥ ವಾಪಸ್ ಯುವತಿಯನ್ನು ಕರೆದುಕೊಂಡು ಬಂದಿದ್ದ. ಯುವತಿಗೆ ಹಿರೇವಂಕಲಕುಂಟಿ ವೈದ್ಯರೊಬ್ಬರಿಂದ ಅಬಾರ್ಷನ್ ಮಾಡಿಸಿ ಮಾದಿನಾಳ ಕ್ರಾಸ್ ಬಳಿ ಬಿಟ್ಟು ಹೋಗಿದ್ದಾನೆ.
ಸದ್ಯ ಕನಕಗಿರಿ ಪೊಲೀಸ್ ಠಾಣೆಯಲ್ಲಿದ್ದ ಯುವತಿಗೆ ರಕ್ತಸ್ರಾವ ಹೆಚ್ಚಾದ ಹಿನ್ನೆಲೆಯಲ್ಲಿ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಅಲ್ಲಿಂದ ಆಕೆಯನ್ನು ಗಂಗಾವತಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಮಂಜುನಾಥ, ಹನುಮೇಶ ಹಾಗೂ ವೈದ್ಯರ ವಿರುದ್ಧ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.