Site icon Vistara News

ಹಾವು ಕಡಿತಕ್ಕೆ ಕಲಬುರಗಿಯಲ್ಲಿ ಬಾಲಕ ಸಾವು; ಕನಕಪುರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ

Boy dies of snakebite in Kalaburagi Farmer killed in wild elephant attack in Kanakapura

ಕಲಬುರಗಿ: ಹಾವು ಕಡಿದು 9 ವರ್ಷದ ಬಾಲಕ‌ ಮೃತಪಟ್ಟಿರುವ (Snake Bite) ದಾರುಣ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿತಲಿ ಗ್ರಾಮದಲ್ಲಿ ನಡೆದಿದೆ. ವಿಜಯ್ (9) ಮೃತ ದುರ್ದೈವಿ.

ತಾಯಿಯೊಂದಿಗೆ ಹೊಲಕ್ಕೆ ಹೋಗಿ ಮೇವು ತರುವಾಗ ವಿಜಯ್‌ಗೆ ಹಾವು ಕಚ್ಚಿದೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ವಿಜಯ್ ದಾರುಣವಾಗಿ ಮೃತಪಟ್ಟಿದ್ದಾನೆ. ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಡಿಸಿಎಂ ಸ್ವಕ್ಷೇತ್ರದಲ್ಲಿ ಕಾಡಾನೆ ದಾಳಿ

ಡಿಸಿಎಂ ಡಿ.ಕೆ ಶಿವಕುಮಾರ್‌ ಸ್ವಕ್ಷೇತ್ರದಲ್ಲೇ ಕಾಡಾನೆ ಹಾವಳಿ ಮುಂದುವರಿದಿದೆ. ರಾಮನಗರದ ಕನಕಪುರ ತಾಲೂಕಿನ ಮುಗ್ಗೂರು ಗ್ರಾಮದ ಬಳಿ ಕಾಡಾನೆ ದಾಳಿ ಮಾಡಿದೆ. ಕನಕಪುರದಲ್ಲಿ ಕಾಡಾನೆ ದಾಳಿಗೆ ರೈತ ಬಲಿಯಾಗಿದ್ದಾರೆ. ರಾಜು (67) ಮೃತ ದುರ್ದೈವಿ.

ರಾಜು ಅವರು ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಆನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಅಸ್ವಸ್ಥರಾಗಿದ್ದ ರೈತ ರಾಜು ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕನಕಪುರ ತಾಲೂಕಿನಲ್ಲಿ ಕಾಡಾನೆ ದಾಳಿ ಹೆಚ್ಚಾಗಿದೆ.

ಹಾಸನದಲ್ಲಿ ನೈಟ್‌ ಬೀಟ್‌ ಪೊಲೀಸರನ್ನು, ಕೊಡಗಿನಲ್ಲಿ ಅರಣ್ಯ ಸಿಬ್ಬಂದಿಯ ಅಟ್ಟಾಡಿಸಿದ ಒಂಟಿ ಸಲಗ

ಕೊಡಗು: ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷವು ಮುಂದುವರಿದಿದೆ. ಆಹಾರವನ್ನು ಅರಸಿ ಬರುವ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಸದ್ಯ ಕೊಡಗಿನಲ್ಲಿ ಕಾಡಾನೆ ಹಾವಳಿ (Elephant attack )ಹೆಚ್ಚಾಗಿದೆ. ಕಾಜೂರು ಅರಣ್ಯ ಪ್ರದೇಶದಿಂದ ಬಂದ ಮದವೇರಿದ ಕಾಡಾನೆಯು ದಾಳಿ ಮಾಡಿದೆ. ಪ್ರಾಣಪಾಯದಿಂದ ಆರ್‌ಆರ್‌ಟಿ ಸಿಬ್ಬಂದಿ (RRT), ಅರಣ್ಯ ರಕ್ಷಕ ಪಾರಾಗಿದ್ದಾರೆ.

ಬೆಳಗ್ಗೆ ಕಾಡಾನೆಯು ಕೋವರ್ ಕೊಲ್ಲಿ ಟಾಟಾ ಎಸ್ಟೇಟ್‌ನಲ್ಲಿತ್ತು. ಈ ಮಾಹಿತಿ ತಿಳಿದು ಸ್ಥಳಕ್ಕೆ ಆರ್‌ಆರ್‌ಟಿ ಮತ್ತು ಅರಣ್ಯ ಸಿಬ್ಬಂದಿ ತೆರಳಿದ್ದರು. ಈ ವೇಳೆ ಸಿಬ್ಬಂದಿಯನ್ನು ಕಂಡು ಆನೆಯು ದಾಳಿ ಮಾಡಿ, ಬೈಕ್ ಜಖಂಗೊಳಿಸಿದೆ. ನಂತರ ಎಸ್ಟೇಟ್‌ನಿಂದ ಅರಣ್ಯಕ್ಕೆ ವಾಪಸ್‌ ತೆರಳಿದೆ. ಅದೃಷ್ಟವಶಾತ್‌ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆನೆ ಮದವೇರಿದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರಿಗೆ ಆತಂಕ ಹೆಚ್ಚಾಗಿದೆ. ಹೀಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಕಾಡಾನೆಯ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version