ಚಿಕ್ಕಬಳ್ಳಾಪುರ: ಹಸು ತೊಳೆಯಲು ನೀರಿಗಿಳಿದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ (Boy drowned) ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಪ್ಪ ಕಾಲಿನಿಂದ ಒದ್ದಿದ್ದೇ ಬಾಲಕ ನೀರುಪಾಲಾಗಲು ಕಾರಣ ಎಂದು ಆರೋಪಿಸಲಾಗಿದ್ದು, ಆಕ್ರೋಶ ಭುಗಿಲೆದ್ದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಕೆರೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಅಭಿಷೇಕ್ (14) ಎಂಬ ಬಾಲಕ ತನ್ನ ಸ್ನೇಹಿತ ಶ್ರೀನಿವಾಸ್ ಎಂಬಾತನೊಂದಿಗೆ ಹಸು ತೊಳೆಯಲು ಕೆರೆಗೆ ಹೋಗಿದ್ದ. ಅಲ್ಲಿ ಹಸು ತೊಳೆದ ಬಳಿಕ ಸ್ನೇಹಿತರ ಜತೆ ಸೇರಿ ನೀರಿನಲ್ಲಿ ಈಜಾಡುತ್ತಿದ್ದ. ಈ ಹಂತದಲ್ಲಿ ಅಲ್ಲಿಗೆ ಬಂದ ಅಭಿಷೇಕ್‌ನ ಚಿಕ್ಕಪ್ಪ ಸತೀಶ್ ಎಂಬಾತ ನೀರಿನಲ್ಲಿ ಈಜುತ್ತಿದ್ದ ಅಭಿಷೇಕ್‌ನನ್ನು ಕಾಲಿನಿಂದ ಒದ್ದ ಪರಿಣಾಮವಾಗಿ ಆತ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.
ಬಾದಗಾನಹಳ್ಳಿ ಗ್ರಾಮದ ಮಮತಾ ಮತ್ತು ಮುನೀಂದ್ರ ದಂಪತಿಗಳ ಪುತ್ರನಾಗಿರುವ ಅಭಿಷೇಕ್ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದ. ನಿಜವೆಂದರೆ, ಆತ ನೀರಿನಲ್ಲಿ ಮುಳುಗಿದ್ದಾನೆ ಎಂಬುದು ಯಾರ ಗಮನಕ್ಕೂ ಬಂದಿರಲಿಲ್ಲ.
ಅಭಿಷೇಕ್ ಕಾಣಿಸುತ್ತಿಲ್ಲ ಎಂದು ಮನೆಯವರು ಊರಿನಲ್ಲೆಲ್ಲ ಹುಡುಕಾಡಿ ಕೊನೆಗೆ ಪೊಲೀಸರಿಗೆ ದೂರು ನೀಡಿದರು. ಆದರೂ ಸತೀಶ್ ಘಟನೆಯ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಅಂತಿಮವಾಗಿ ಆತನನ್ನೇ ಕೇಳಿದಾಗ ಬಾಯಿ ಬಿಡಬೇಕಾಯಿತು. ತಾನು ಅಭಿಷೇಕ್‌ನಿಗೆ ಒದ್ದಿದ್ದರಿಂದ ಆತ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿಸಿದ. ಈ ನಡುವೆ ಅಗ್ನಿಶಾಮಕ ದಳ ಮತ್ತು ಗ್ರಾಮಸ್ಥರು ಸೇರಿ ತಿಪ್ಪೇನಹಳ್ಳಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿ ಶವವನ್ನು ಮೇಲೆತ್ತಿದ್ದಾರೆ.
ಕಾಲಿನಿಂದ ಒದ್ದು ಸಾವಿಗೆ ಕಾರಣವಾಗಿರುವ ಈ ಘಟನೆ ಕುಟುಂಬಿಕರ ನಡುವೆ ಘರ್ಷಣೆಗೆ ಕಾರಣವಾಗಿದೆ. ಅವರಲ್ಲಿ ಕೆಲವರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಚಿಕ್ಕಪ್ಪ ಸತೀಶ್‌ನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಸತೀಶ್ ಉದ್ದೇಶಪೂರ್ವಕವಾಗಿ ಕೊಲ್ಲಲೆಂದೇ ಅಭಿಷೇಕ್‌ನನ್ನು ಒದ್ದನೇ ಅಥವಾ ಆಕಸ್ಮಿಕವಾಗಿ ಈ ಘಟನೆ ನಡೆದಿದೆಯೇ ಎನ್ನುವುದು ತನಿಖೆಯಿಂದ ತಿಳಿದುಬರಬೇಕಾಗಿದೆ.
ಇದನ್ನೂ ಓದಿ : Youth drowned: ಅಪ್ಪನ ನೋಡಲೆಂದು ಜಮೀನು ಕಡೆಗೆ ಓಡುವಾಗ ಕಾಲು ಜಾರಿ ಬಿದ್ದ 13ರ ಬಾಲಕ ನೀರುಪಾಲು