ಬೆಳಗಾವಿ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ಕೆಲಸದಿಂದಾಗಿ ಏಳು ವರ್ಷದ ಪುಟ್ಟ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಾಮಸಿನಕೊಪ್ಪ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ಬಾಲಕನ ಹೆಸರು ಬಸಪ್ಪ ಕೊಲಕಾರ್.
ಏನಾಗಿದೆ?
ಬುಧವಾರ ಬೆಳಗ್ಗೆ ಈ ಬಾಲಕ ಮನೆಯ ಹೊರಗಡೆ ಶೌಚಕ್ಕೆ ಹೋದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ವಿದ್ಯುತ್ ಕಂಬದ ಬದಲು ಮರಕ್ಕೆ ತಂತಿ ಎಳೆದು ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಬಾಲಕ ಈ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದರಿಂದ ಮೃತ್ಯು ಸಂಭವಿಸಿದೆ ಎಂದು ತಿಳಿದುಬಂದಿದೆ.
ಮಗುವನ್ನು ಕಳೆದುಕೊಂಡ ಹೆತ್ತವರ ಕಣ್ಣೀರು, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕೆರಳಿ ನಿಂತಿದ್ದಾರೆ. ಇಲ್ಲಿ ವಿದ್ಯುತ್ ಸಂಪರ್ಕ ನೀಡುವಾಗ ಸರಿಯಾದ ಕ್ರಮಗಳನ್ನು ಅನುಸರಿಸದೆ ಜೀವ ಬಲಿ ಪಡೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನಲ್ಲಿ ಒಂದೇ ತಿಂಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಖಾನಾಪುರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ವಿದ್ಯುತ್ ತಂತಿ ತಗುಲಿ ಎತ್ತು ಸಾವು
ಬೀದರ್ ಜಿಲ್ಲೆಯ ಶ್ರೀಮಂಡಲ್ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶದಿಂದ ಎತ್ತೊಂದು ಪ್ರಾಣ ಕಳೆದುಕೊಂಡಿದೆ. ಅದರ ಜತೆಗಿದ್ದ ವ್ಯಕ್ತಿಗೆ ವಿದ್ಯುತ್ ತಗುಲಿದರೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಮು ಡೋಣೆ ಎಂಬಾತನಿಗೆ ಕೈ ಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಜಮಿನಿನಲ್ಲಿ ಕೈ ನಿಲುಕುವಷ್ಟು ಎತ್ತರದಲ್ಲಿ ವಿದ್ಯುತ್ ತಂತಿಗಳು ನೇತಾಡುತ್ತಿರುವ ಬಗ್ಗೆ ಹಿಂದಿನಿಂದಲೇ ದೂರುಗಳಿವೆ. ಈಗ ಸಾವೂ ಸಂಭವಿಸಿರುವುದರಿಂದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಜೋರಾಗಿದೆ. ಇಷ್ಟಾದರೂ ಘಟನಾ ಸ್ಥಳಕ್ಕೆ ಅಧಿಕಾರಿಗಳು ಬಾರದೆ ಇರುವುದು ಇನ್ನಷ್ಟು ಸಿಟ್ಟು ಹೆಚ್ಚಿಸಿದೆ.
ಇದನ್ನೂ ಓದಿ | Electric shock | ನಾಮಫಲಕ ಅಳವಡಿಸುವಾಗ ವಿದ್ಯುತ್ ಸ್ಪರ್ಶ: ಇಬ್ಬರು ಛಾಯಾಗ್ರಾಹಕರ ದುರ್ಮರಣ