Site icon Vistara News

Rain News: ಹಾವೇರಿಯಲ್ಲಿ ಸಿಡಿಲಿಗೆ ಬಾಲಕ ಗಂಭೀರ; ಶಿವಮೊಗ್ಗ, ರಾಮನಗರ ಸೇರಿ ಹಲವೆಡೆ ಭಾರಿ ಹಾನಿ

lightning strike in Haveri

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆಯ (Rain News) ಆರ್ಭಟ ತುಸು ಜೋರಾಗಿಯೇ ಇದ್ದು, ಭಾರಿ ಪ್ರಮಾಣದ ಹಾನಿಯನ್ನುಂಟು (Heavy damage) ಮಾಡುತ್ತಿದೆ. ಅದರಲ್ಲೂ ಬಿರುಗಾಳಿ, ಸಿಡಿಲಿನ (lightning strike) ಅಬ್ಬರವು ಹೆಚ್ಚಿನ ಆತಂಕವನ್ನುಂಟು ಮಾಡಿದೆ. ಹಾವೇರಿ, ಶಿವಮೊಗ್ಗ, ರಾಮನಗರ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಕಡೆ ಬುಧವಾರ ರಾತ್ರಿ ವರುಣ ಅಬ್ಬರಿಸಿದೆ. ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಬಾಲಕನೊಬ್ಬನಿಗೆ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲದೆ, ಆರು ಕುರಿ, ಐದು ಆಡುಗಳೂ ಮೃತಪಟ್ಟಿವೆ.

ಹಾವೇರಿಯಲ್ಲಿ ಬಾಲಕನಿಗೆ ಬಡಿದ ಸಿಡಿಲು

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಬುಧವಾರ ರಾತ್ರಿ ಭರ್ಜರಿ ಮಳೆ ಸುರಿದಿದ್ದು, ಸಿಡಿಲು ಬಡಿದು ಬಾಲಕನೊಬ್ಬನಿಗೆ ಗಂಭೀರ ಗಾಯಗಳಾಗಿವೆ. ಹಾನಗಲ್ ತಾಲೂಕಿನ ಕಂಚಿನೆಗಳೂರು ಗ್ರಾಮದ ಬಾಲಕ ಮಹಾಂತೇಶ ಫಕೀರಪ್ಪ ಕರಡಿ (9) ಗಾಯಗೊಂಡಿದ್ದು, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾನಗಲ್ ತಾಲೂಕಿನ ದ್ಯಾಮನಕೊಪ್ಪ ಗ್ರಾಮದಲ್ಲಿ ಸಿಡಿಲು ಬಡಿದು ಕುರಿ, ಆಡುಗಳು ಮೃತಪಟ್ಟಿವೆ. ಸಿದ್ದಪ್ಪ ಎನ್ನುವವರಿಗೆ ಸೇರಿದ ಆಡು, ಕುರಿಗಳಾಗಿದ್ದು, ಒಟ್ಟು 6 ಕುರಿ, 5 ಆಡುಗಳು ಮೃತಪಟ್ಟರೆ, 14 ಮರಿಗಳಿಗೆ ಗಾಯಗಳಾಗಿವೆ.

ಇದನ್ನೂ ಓದಿ: ಮಹಿಳೆಯರಿಗೆ ಆಪರೇಶನ್​ ಮಾಡಲು ಬಂದು, ಬೆಡ್​ ಮೇಲೆ ಮಲಗಿದ ವೈದ್ಯ; ಸ್ಥಳೀಯರ ಆಕ್ರೋಶ

ರಾಮನಗರದ ಕನ್ನಮಂಗಲದಲ್ಲಿ ಸಿಡಿಲಿಗೆ ಮನೆಯೊಂದಕ್ಕೆ ಹಾನಿಯಾಗಿರುವುದು

ರಾಮನಗರದಲ್ಲಿ ಸಿಡಿಲಿನಿಂದ ಮನೆಗಳಿಗೆ ಹಾನಿ

ರಾಮನಗರದಲ್ಲಿ ಮಳೆ ಅವಾಂತರ, ಸಿಡಿಲ ಬಡಿತಕ್ಕೆ ಮನೆಗಳು ಜಖಂ ಆಗಿವೆ. ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ಮನೆಗಳು ಜಖಂ ಆಗಿದ್ದು, ತಡರಾತ್ರಿ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಕನ್ನಮಂಗಲ ಗ್ರಾಮದ ಕುಮಾರ್‌, ನರಸಿಂಹಯ್ಯ, ರಾಜರಯ್ಯ ಎಂಬುವವರಿಗೆ ಸೇರಿದ ಮನೆಗಳು ಹಾನಿಗೊಳಪಟ್ಟಿವೆ. ಕಟ್ಟಡ, ಮನೆ ಹಂಚುಗಳು ಪುಡಿಪುಡಿಯಾಗಿದ್ದು, ದಿನಬಳಕೆ ವಸ್ತುಗಳಿಗೂ ಹಾನಿಯಾಗಿವೆ. ಸೂಕ್ತ ಪರಿಹಾರಕ್ಕೆ ನಿವಾಸಿಗಳು ಮನವಿ ಮಾಡುತ್ತಿದ್ದಾರೆ.

ರಾಮನಗರದ ಕನ್ನಮಂಗಲದಲ್ಲಿ ಸಿಡಿಲಿಗೆ ಮನೆಯ ಹಂಚುಗಳಿಗೆ ಹಾನಿಯಾಗಿವೆ.

ಸಿಡಿಲಿಗೆ ಭತ್ತದ ಬಣವೆ ಭಸ್ಮ

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ತಿಮ್ಮಣ್ಣಕೇರಿಯಲ್ಲಿ ಸಿಡಿಲಿಗೆ 18 ಎಕರೆಯಲ್ಲಿ ಬೆಳೆದ ಸಂಗ್ರಹಿಸಿದ್ದ ಭತ್ತದ ಬಣವೆ ಸಂಪೂರ್ಣ ಭಸ್ಮ.ವಾಗಿದೆ. 50 ವೀಟರ್ ಅಂತರದಲ್ಲಿ ಎರಡು ಬಾರಿ ಸಿಡಿಲು ಬಡಿದಿದ್ದು, ಬಣವೆ ಸುಟ್ಟು ಬೂದಿಯಾಗಿದೆ. ತಿಮ್ಮಣಕೇರಿ ಕ್ಯಾಂಪಿನ ರಾಮಕೃಷ್ಣ ರಾಜು ಸೇರಿದ ತೆಂಗಿನ ಮರಕ್ಕೂ ಸಿಡಿಲು ಬಡಿದಿದೆ. ಜಾನುವಾರುಗಳಿಗೆ ಹುಲ್ಲುಗಳನ್ನು ಸಂಗ್ರಹಿಸಲಾಗಿತ್ತು. ಒಟ್ಟು 2 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕಂಪ್ಲಿ ತಾಲೂಕಿನ ತಿಮ್ಮಣ್ಣಕೇರಿಯಲ್ಲಿ ಸಿಡಿಲಿಗೆ ಭಸ್ಮವಾಗಿರುವ ಹುಲ್ಲಿನ ಬವಣೆ

ಸೊರಬದಲ್ಲಿ ಭಾರಿ ಮಳೆ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಬುಧವಾರ ರಾತ್ರಿ ಗಾಳಿ ಸಹಿತ ಜೋರು ಮಳೆಯಾಗಿದ್ದು, ಬಿರುಸಿನ ಗಾಳಿಗೆ ಹಲವು ಕಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರ ಪರಿಣಾಮ ವಾಹನ ಸಂಚಾರಕ್ಕೆ ತೊಡಕಾಗಿತ್ತು. ತಾಲೂಕಿನ ಚಂದ್ರಗುತ್ತಿ ಬಳಿಯ ಅಂಕರವಳ್ಳಿ ಗ್ರಾಮದಲ್ಲಿ ಮನೆಯೊಂದರ ಮೇಲೆ ಮರ ಉರುಳಿ ಬಿದ್ದಿದೆ. ಪರಿಣಾಮ ಮನೆಯ ಹೆಂಚು ತಗಡುಗಳಿಗೆ ಹಾನಿಯಾಗಿವೆ. ಜತೆಗೆ ಕಾರ್ ಶೆಡ್‌ನಲ್ಲಿದ್ದ ಕಾರಿಗೂ ಹಾನಿಯಾಗಿದೆ. ಮತ್ತೊಂದಡೆ ಅಂಗಡಿ ಮಳಿಗೆ ಮೇಲೂ ಮರ ಉರುಳಿದ್ದು, ಅಂಗಡಿಯಲ್ಲಿದ್ದ ಸಾವಿರಾರು ರೂ. ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ.

ಸೊರಬದಲ್ಲಿ ಭಾರಿ ಮಳೆಗೆ ಮುರಿದು ಬಿದ್ದಿರುವ ವಿದ್ಯುತ್‌ ಕಂಬ

ಇನ್ನು ಅಂಕರವಳ್ಳಿ ಚಂದ್ರಗುತ್ತಿ ಮಾರ್ಗದಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿದ ಪರಿಣಾಮ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಸ್ಥಳೀಯರು ಮರವನ್ನು ಜೆಸಿಬಿ ಮೂಲಕ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇನ್ನು ಕಲ್ಕುಣಿ ಕ್ರಾಸ್ ಬಳಿ ಮರವೊಂದು ಉರುಳಿ ಬಿದ್ದಿದೆ. ಬಿರುಸಿನ ಗಾಳಿಗೆ ಜೋಳದಗುಡ್ಡೆ ಸಮೀಪದ ಗೊಮ್ಮಟೇಶ್ವರ ದೇವಸ್ಥಾನದ ಛಾವಣಿಗೆ ಹಾನಿಯಾಗಿದೆ. ಹೋಬಳಿಯ ಸುತ್ತಮುತ್ತ ಹಲವು ಕಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ಪೂರೈಕೆಯಲ್ಲಿಯೂ ವ್ಯತ್ಯಯ ಉಂಟಾಯಿತು.
ಒಟ್ಟಾರೆ, ಹೋಬಳಿಯ ಸುತ್ತಮುತ್ತ ಉತ್ತಮ ಮಳೆಯಾಗಿದೆ.

ಶಿವಮೊಗ್ಗದಲ್ಲಿ ಅವಾಂತರ

ಶಿವಮೊಗ್ಗದಲ್ಲಿ ಬುಧವಾರ ರಾತ್ರಿ ಸುರಿದ ಗಾಳಿ ಮಳೆಗೆ ಅವಾಂತರವೇ ಸೃಷ್ಟಿಯಾಗಿದೆ. ಅಂಗನವಾಡಿ ಟೆಂಟ್‌ಗಳು ಗಾಳಿ ಮಳೆಗೆ ಬಿದ್ದು ಹೋಗಿವೆ. ಶಿವಮೊಗ್ಗದ ಶ್ರೀರಾಂಪುರ ಹಕ್ಕಿಪಿಕ್ಕಿ ಕ್ಯಾಂಪಿನಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: LPG Price Cut: 19ಕೆಜಿ ವಾಣಿಜ್ಯ ಬಳಕೆ ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಕೆ; ಈಗೆಷ್ಟಿದೆ ದರ?

ಹುಬ್ಬಳ್ಳಿಯಲ್ಲಿ ಮುಂಗಾರು ಮಳೆಯ ಸಿಂಚನ

ಹುಬ್ಬಳ್ಳಿಯಲ್ಲಿ ಗುರುವಾರ ಬೆಳಗ್ಗೆಯೇ ಮಳೆಯಾಗಿದೆ. ಮೋಡ ಕವಿದ ವಾತಾವರಣದೊಂದಿಗೆ ಮಳೆ ಸುರಿದಿದ್ದು, ಶೀತಗಾಳಿ, ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗ್ಗೆಯಿಂದ ಎಡೆಬಿಡದೆ ವರ್ಷಧಾರೆಯಾಗಿದೆ. ಮಳೆಯಲ್ಲಿ ಕೆಲಸಕ್ಕೆ ತೆರಳಲು ವಾಹನ ಸವಾರರು, ಸಾರ್ವಜನಿಕರ ಪರದಾಡಿದರು.

Exit mobile version