Site icon Vistara News

Karnataka Politics : ‌ʼವರ್ಗಾವಣೆ ದಂಧೆʼ ಪತ್ರ ತನ್ನದಲ್ಲವೆಂದ ಬಿ.ಆರ್.‌ ಪಾಟೀಲ್;‌ ಬಿಜೆಪಿ ಫೇಕ್‌ ಫ್ಯಾಕ್ಟರಿ ಎಂದ ಕಾಂಗ್ರೆಸ್!

Aland MLA BR Patil and CM Siddaramaiah

ಬೆಂಗಳೂರು/ಕಲಬುರಗಿ: ರಾಜ್ಯ ರಾಜಕೀಯದಲ್ಲಿ (Karnataka Politics) ಸಂಚಲನ ಸೃಷ್ಟಿಸಿರುವ ಕಾಂಗ್ರೆಸ್‌ ಸರ್ಕಾರದ “ವರ್ಗಾವಣೆ ದಂಧೆ” ಪತ್ರದ ವಿಚಾರವು ಮತ್ತೊಂದು ತಿರುವು ಪಡೆದುಕೊಂಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರು ವರ್ಗಾವಣೆಗೆ ಶಾಸಕರಿಂದಲೇ ಹಣ ಕೇಳುತ್ತಿದ್ದಾರೆ ಎಂಬ ಆರೋಪವುಳ್ಳ ಪತ್ರ ಎಲ್ಲ ಕಡೆ ಹರಿದಾಡಿತ್ತು. ಬಿ.ಆರ್.‌ ಪಾಟೀಲ್‌ ನೇತೃತ್ವದಲ್ಲಿ ಈ ಪತ್ರವನ್ನು ಬರೆಯಲಾಗಿತ್ತು. ಇದನ್ನು ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸಹ ಒಪ್ಪಿಕೊಂಡಿದ್ದರು. ಆದರೆ, ಈಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಳಂದ ಶಾಸಕ ಬಿ.ಆರ್.‌ ಪಾಟೀಲ್‌, ಅದು ನನ್ನ ಪತ್ರವೇ ಅಲ್ಲ. ನಕಲಿ ಮಾಡಲಾಗಿದೆ. ಬಿಜೆಪಿಯಿಂದ ಈ ಕೃತ್ಯ ನಡೆದಿದೆ. ನನ್ನ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಮಧ್ಯೆ ಸಂಬಂಧಕ್ಕೆ ಬೆಂಕಿ ಹಚ್ಚಲು ಹೀಗೆ ಮಾಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಇತ್ತ ಕಾಂಗ್ರೆಸ್‌ ಸಹ ಟ್ವೀಟ್‌ ಮಾಡಿದ್ದು, “ನಕಲಿ ಪತ್ರ ಸೃಷ್ಟಿಸುವ ಹೊಸ ಫೇಕ್‌ ಫ್ಯಾಕ್ಟರಿಯನ್ನು ಬಿಜೆಪಿ ತೆರೆದಿದೆ” ಎಂದು ಬರೆದುಕೊಂಡಿದೆ.

ಕಲಬುರಗಿಯಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಆಳಂದ ಶಾಸಕ ಬಿ.ಆರ್. ಪಾಟೀಲ್, ಈಗ ಹರಿದಾಡುತ್ತಿರುವ ಪತ್ರವು ನಕಲಿಯಾಗಿದೆ. ಅದು ನಕಲಿ ಲೆಟರ್ ಹೆಡ್ ಆಗಿದೆ. ನಾವು ಲೆಟರ್ ಪ್ಯಾಡ್ ಕೊಟ್ಟಿದ್ದು ಬೇರೆ. ಆದರೆ, ಈಗ ಹರಿದಾಡುತ್ತಿರುವುದು ಬೇರೆ. ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ನಮ್ಮ‌ ನಡುವೆ ಜಗಳ ಹಚ್ಚುವುದಕ್ಕೆ ನಕಲಿ ಪತ್ರವನ್ನು ಹರಿಬಿಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Politics : ಸರ್ಕಾರದಲ್ಲಿ ಅನುದಾನ ಎಲ್ಲಿದೆ? ಕಾಂಗ್ರೆಸ್‌ ಶಾಸಕರಿಗೆ ಡಿಕೆಶಿ ತಿರುಗೇಟು!

ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮನವಿ ಮಾಡಿದ್ದೇವೆ. ಈಗ ಹರಿದಾಡುತ್ತಿರುವುದು ನನ್ನದೇ ಲೆಟರ್. ಆದರೆ, ಅದು ತುಂಬಾ ಹಳೆಯದು. ಈಗ ನಾನು ಸೀರಿಯಲ್ ನಂಬರ್ ಹಾಕುತ್ತೇನೆ. ಇಲ್ಲಿರೋದು ಎಲ್ಲವೂ ನಕಲಿಯಾಗಿದೆ. ಬಿಜೆಪಿಯವರು ಹೀಗೆ ಮಾಡಿದ್ದಾರೆ. ನಾಲ್ಕು ವರ್ಷಗಳ ಹಿಂದಿನ ಲೆಟರ್ ಪ್ಯಾಡ್ ಅದು. ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡುತ್ತಿದ್ದೇನೆ. ಪ್ರಿಯಾಂಕ್‌ ಖರ್ಗೆ ಅವರು ತಂದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಷ್ಟು ಗೌರವ ಕೊಡುತ್ತಾರೋ? ಅಷ್ಟೇ ಗೌರವವನ್ನು ನಮಗೂ ಕೊಡುತ್ತಾರೆ ಎಂದು ಬಿ.ಆರ್.‌ ಪಾಟೀಲ್‌ ಸ್ಪಷ್ಟೀಕರಣ ನೀಡಿದ್ದಾರೆ.

ಬಿಜೆಪಿ ಫೇಕ್‌ ಫ್ಯಾಕ್ಟರಿ ಎಂದ ಕಾಂಗ್ರೆಸ್‌!

ಸೋಲಿನ ಹತಾಶೆಯಲ್ಲಿರುವ ವಿಪಕ್ಷಗಳು ಈಗ ತಮ್ಮ ಫೇಕ್ ಫ್ಯಾಕ್ಟರಿಗಳಿಗೆ ಹೆಚ್ಚಿನ ಕೆಲಸ ಕೊಟ್ಟಿವೆ. ಗ್ಯಾರಂಟಿಗಳ ಜಾರಿ ಮಾಡಿದ ನಮ್ಮ ಸರ್ಕಾರಕ್ಕೆ ಸಿಗುತ್ತಿರುವ ಜನಮೆಚ್ಚುಗೆಯನ್ನು ಸಹಿಸಲಾಗದೆ ನಕಲಿ ಸೃಷ್ಟಿಯ ಮೊರೆ ಹೋಗಿವೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಶಾಸಕ ಬಿ.ಆರ್. ಪಾಟೀಲ್ ಅವರ ಹಳೆಯ ವಿಳಾಸದ ನಕಲಿ ಲೆಟರ್ ಹೆಡ್‌ನಲ್ಲಿ ನಕಲಿ ಪತ್ರ ಸೃಷ್ಟಿಸಿದ ಸಾಧನೆ ಮಾಡುತ್ತೇವೆ ಎಂದುಕೊಂಡಿದ್ದರೆ ಅದು ಮೂರ್ಖತನವಾಗುತ್ತದೆ ಎಂದೂ ಕಾಂಗ್ರೆಸ್‌ ಟ್ವೀಟ್‌ನಲ್ಲಿ ಬರೆದುಕೊಂಡಿದೆ.

ಬಸವರಾಜ ರಾಯರೆಡ್ಡಿ ಸ್ಪಷ್ಟೀಕರಣ

ಶಾಸಕಾಂಗ ಪಕ್ಷದ ಸಭೆ (Legislative Party Meeting) ಕರೆಯುವಂತೆ ಪತ್ರ ಬರೆದಿರುವುದು ನಿಜ. ಸರ್ಕಾರದಲ್ಲಿ ಕೆಲಸಗಳು ಆಗಬೇಕಿದೆ. ಶಾಸಕ ಬಿ.ಆರ್. ಪಾಟೀಲ್ (MLA BR Patil) ಸಿದ್ಧಪಡಿಸಿದ ಪತ್ರಕ್ಕೆ ಸಹಿ ಹಾಕಿದ್ದೇನೆ. ಒಟ್ಟು 35 ಶಾಸಕರು ಸಹಿ ಹಾಕಿದ್ದೇವೆ. ಸಿಎಲ್‌ಪಿ ಸಭೆಯಲ್ಲಿ ಎಲ್ಲವನ್ನೂ ಚರ್ಚೆ ಮಾಡುತ್ತೇವೆ. ಇದು ಅಸಮಾಧಾನ ಅಲ್ಲ. ಕೆಲಸ ಮಾಡಿಕೊಡಿ ಅಂತ ಕೇಳುತ್ತಿದ್ದೇವಷ್ಟೇ ಎಂದು “ವರ್ಗಾವಣೆ ದಂಧೆ” (Transfer racket) ಬಗ್ಗೆ ಬರೆಯಲಾಗಿದೆ ಎನ್ನಲಾದ ಪತ್ರದ ಬಗ್ಗೆ ಶಾಸಕ ಬಸವರಾಜ ರಾಯರೆಡ್ಡಿ ಸ್ಪಷ್ಟೀಕರಣ ನೀಡಿದ್ದಾರೆ.

ಇದನ್ನೂ ಓದಿ: Karnataka Politics : ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದು ಹೌದು! ಶಾಸಕ ರಾಯರೆಡ್ಡಿ ಕೊಟ್ಟ ಕಾರಣ ಇದು

ಈ ವಿಷಯವನ್ನು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿಲ್ಲ. ಸಿಎಲ್‌ಪಿ ಸಭೆಯಲ್ಲಿ ಎಲ್ಲವೂ ಚರ್ಚೆ ಆಗಬೇಕು. ನಾನು ಒಳಗೊಂದು ಹೊರಗೊಂದು ಮಾಡುವವನಲ್ಲ. ಆ ಜಾಯಮಾನ ನನ್ನದಲ್ಲ. ನಾನು ನೇರವಾಗಿ ಹೇಳುತ್ತೇನೆ. ಸರ್ಕಾರ ಈಗಷ್ಟೇ ಬಂದಿದೆ. ಒತ್ತಡ ಹಾಕಲು ಆಗುವುದಿಲ್ಲ. ಪತ್ರ ಬರೆದಿದ್ದು ವಿಪಕ್ಷಗಳಿಗೆ ಆಹಾರವಾಯಿತು ಎಂದಾದರೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಬಸವರಾಜ ರಾಯರೆಡ್ಡಿ ಬೆಂಗಳೂರಿನಲ್ಲಿ ಹೇಳಿದ್ದಾರೆ.

Exit mobile version