Site icon Vistara News

ನಿಜವಾಗಿ ಜಾತಿ ವ್ಯವಸ್ಥೆ ತಂದವರು ಸಿದ್ದರಾಮಯ್ಯ: ಬ್ರಾಹ್ಮಣರ ಸಂಘ ಆರೋಪ

ಬ್ರಾಹ್ಮಣರ ಸಂಘ

ರಾಮನಗರ: ಜಾತಿ ವ್ಯವಸ್ಥೆ ತಂದವರು ಬ್ರಾಹ್ಮಣರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಬ್ರಾಹ್ಮಣ ಜಾತಿಯನ್ನು 44 ಪಂಗಡಗಳಾಗಿ ವಿಂಗಡಿಸಿದ ಸಿದ್ದರಾಮಯ್ಯ ಅವರೇ ನಿಜವಾಗಿ ಜಾತಿ ವ್ಯವಸ್ಥೆ ತಂದವರು ಎಂದು ರಾಮನಗರ ಜಿಲ್ಲಾ ಬ್ರಾಹ್ಮಣ ಸಂಘ ಆರೋಪಿಸಿದೆ.

ಈ ಕುರಿತು ಚನ್ನಪಟ್ಟಣದ ವರದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಯ್ಯ ಮಾತನಾಡಿದರು. ಅಡುಗೆ ಮಾಡಲು ಬಂದ ಭಟ್ಟರನ್ನು ನಮಸ್ಕಾರ ಬುದ್ದಿ ಎನ್ನುತ್ತಾರೆ, ಆದರೆ ಹಿಂದುಳಿದವರನ್ನು ಏನ್ಲಾ ಎಂದು ಕರೆಯುತ್ತಾರೆ, ಇದು ಗುಲಾಮಗಿರಿ ಮನಸ್ಥಿತಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ನಿಜವಾಗಿ ಹೇಳಬೇಕೆಂದರೆ ಬ್ರಾಹ್ಮಣರ ಮೇಲೆಯೇ ದೌರ್ಜನ್ಯ ಆಗುತ್ತಿದೆ. ಹೀಗಿದ್ದರೂ ಅವರು ಬ್ರಾಹ್ಮಣರ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನೊಮ್ಮೆ ಸಮುದಾಯದ ಬಗ್ಗೆ ಮಾತನಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬ್ರಾಹ್ಮಣರನ್ನು 44 ಜಾತಿಗಳಾಗಿ ವಿಂಗಡಿಸಿ ದೌರ್ಜನ್ಯ ಎಸಗಿದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಕಾಲದಲ್ಲಿ ಸಮುದಾಯದ ಜಮೀನನ್ನು ವಶಕ್ಕೆ ಪಡೆದು ಬ್ರಾಹ್ಮಣರನ್ನು ಬೀದಿಪಾಲು ಮಾಡಿದರು. ನಾವು ಸಂಸ್ಕಾರವಂತರು, ಆದ್ದರಿಂದ ಜನ ನಮಸ್ಕರಿಸುತ್ತಾರೆ. ನಮ್ಮ ರಕ್ತದಲ್ಲೇ ಸಂಸ್ಕಾರ ಬಂದಿದೆ, ನಿಮ್ಮಿಂದ ನಾವು ಕಲಿಯಬೇಕಿಲ್ಲ ಎಂದು ಕಿಡಿ ಕಾರಿದರು.

ಮೋದಿ ಸರ್ಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ಸಂವಿಧಾನ ಬಾಹಿರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಅಸಮಾಧಾನ ಹೊರಹಾಕಿದ ಅವರು, ಸಮುದಾಯ ಎಂದೂ ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮಾಡಿಲ್ಲ. ಬ್ರಾಹ್ಮಣತ್ವದ ಬಗ್ಗೆ ಯಾವುದೇ ರಾಜಕಾರಣಿಗಳು ಮಾಡಬಾರದು. ನಿಮ್ಮ ರಾಜಕೀಯವನ್ನು ಮೊದಲು ಬದಿಗಿರಿಸಿ ಸಮುದಾಯದವರನ್ನು ಸಹೋದರರಂತೆ ಕಾಣಿರಿ, ಅದನ್ನು ಬಿಟ್ಟು ಕೆದಕುವ ಕೆಲಸ ಮಾಡಬಾರದು ಎಂದು ಹೇಳಿದರು.

ಇದನ್ನೂ ಓದಿ | ಡಿಕೆಶಿ, ಸಿದ್ದರಾಮಯ್ಯ ನಡುವೆ ಇದೆಯೇ ಮುನಿಸು? ಒಂದೇ ಕಾರ್ಯಕ್ರಮಕ್ಕೆ ಪ್ರತ್ಯೇಕವಾಗಿ ಹೋಗಿದ್ದೇಕೆ?

Exit mobile version