ಕೋಲಾರ: ಇಲ್ಲಿನ ತೊಟ್ಲಿ ಗ್ರಾಮದಲ್ಲಿ ಪತ್ತೆಯಾದ ಮೆದುಳು ಜ್ವರ (brain fever) ಇಡೀ ಜಿಲ್ಲೆಯ ಜನತೆಯ ನಿದ್ದೆಗೆಡಿಸುವಂತೆ ಮಾಡಿದೆ. ತೊಟ್ಲಿ ಗ್ರಾಮದ ಬಾಲಕನಿಗೆ ಕಳೆದ ವಾರದಿಂದ ಬಿಟ್ಟು ಬಿಡದೆ ಜ್ವರ ಕಾಡುತ್ತಿತ್ತು. ಇದು ವಿಪರೀತವಾಗಿ ಬುದ್ಧಿ ಭ್ರಮಣೆಯ ರೀತಿಯಲ್ಲಿ ಬಾಲಕ ವರ್ತಿಸಿದ್ದಲ್ಲದೆ, ತೀವ್ರವಾಗಿ ಅಸ್ವಸ್ಥತನಾಗಿದ್ದಾನೆಂದು ತಿಳಿದು ಬಂದಿದೆ.
ಬಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ರಕ್ತ ಪರೀಕ್ಷೆ ಮಾಡಿದಾಗ ಮೆದುಳು ಜ್ವರ ಇರುವುದು ಪತ್ತೆಯಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಸ್ವಚ್ಛತಾ ಕ್ರಮದ ಕುರಿತು ಎಚ್ಚರವಹಿಸುವಂತೆ ಸೂಚಿಸಿದ್ದಾರೆ. ಆದರೆ, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಮೌನವಾಗಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಂದಿ ಸಾಕಾಣಿಕೆ ನಿಷೇಧ
ಜನರು ಆಕ್ರೋಶ ಹೊರಹಾಕುತ್ತಿದ್ದಂತೆ ಜಿಲ್ಲಾ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿ, ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪಂಚಾಯಿತಿ ಪಿಡಿಒ ಪಂಚಾಯಿತಿ ವ್ಯಾಪ್ತಿಯಲ್ಲಿ ತೊಟ್ಲಿ ಗ್ರಾಮದ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಹಂದಿ ಸಾಕಾಣಿಕೆಯನ್ನು ನಿಷೇಧ ಮಾಡಲಾಗಿದೆ. ಜತೆಗೆ ಗ್ರಾಮ ಪಂಚಾಯಿತಿಯಿಂದ ಶುಚಿತ್ವ ಕಾಪಾಡುವಂತೆ ಹಂದಿ ಸಾಕಾಣಿಕೆದಾರರಿಗೆ ಎಚ್ಚರಿಗೆ ನೋಟಿಸ್ ನೀಡಿದ್ದಾರೆ. ಗ್ರಾಮಗಳಲ್ಲಿ ಡಂಗೊರ ಹಾಕಿಸಿ ಸೊಳ್ಳೆಗಳಿಂದ ಶುಚಿತ್ವದ ಬಗ್ಗೆ ಗಮನಹರಿಸಲು ಪ್ರಕಟಣೆ ಹೊರಡಿಸಿದ್ದಾರೆ.
ಲಸಿಕೆ ಹಾಕಿಸುವಂತೆ ತಿಳಿವಳಿಕೆ
ಆರೋಗ್ಯ ಇಲಾಖೆಯಿಂದ ಪತ್ರದಂತೆ ೧೫ ವರ್ಷದೊಳಗಿನ ಮಕ್ಕಳಿಗೆ ಜೆಇ ಲಸಿಕೆ ಹಾಕಿಸುವಂತೆಯೂ ತಿಳಿವಳಿಕೆ ನೀಡುತ್ತಿದ್ದಾರೆ. ಗ್ರಾಮದ ಸುತ್ತಮುತ್ತಿನ ನೀರಿನ ತಾಣಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಲಾರ್ವಾಹಾರಿ ಮೀನುಗಳನ್ನು ಬಿಡಲಾಗಿದ್ದು, ಇಲಾಖೆ ಸಿಬ್ಬಂದಿಯಿಂದ ಪ್ರತಿ ಕುಟುಂಬಗಳಿಗೆ ಭೇಟಿ ನೀಡಿ ಜಲಸಮೀಕ್ಷೆ ಮಾಡುವಂತೆ ಸೂಚಿಸಲಾಗಿದೆ. ಸೊಳ್ಳೆ ಹಾಗೂ ಹಂದಿಗಳಿಂದ ಮೆದುಳು ಕಾಯಿಲೆ ಹರಡುವುದರಿಂದ ಜತೆಗೆ ಈಗ ಪತ್ತೆ ಆಗಿರುವ ವೈರಸ್ ಹಂದಿಗಳಲ್ಲಿ ದ್ವಿಗುಣವಾಗಿ ಹರಡುವ ಸಾಧ್ಯತೆ ಇದೆ. ಹಂದಿ ಸಾಕಣೆ ಗೂಡುಗಳಿಗೆ ಸೂಳ್ಳೆ ಪರದೆಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ | Appu Namana| ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ: ಅರವಿಂದ್ ಕೇಜ್ರಿವಾಲ್ ಕನ್ನಡದಲ್ಲಿ ಟ್ವೀಟ್!