ಬೆಂಗಳೂರು: ಹಾಲುಣಿಸುವ ತಾಯಂದಿರು ಮತ್ತು ತಾಯಿಯರಾಗುವ ನಿರೀಕ್ಷೆಯಲ್ಲಿರುವವರಿಗೆ ಸ್ತನ್ಯಪಾನದ ಶಿಕ್ಷಣದ ಕುರಿತು ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಜಾಗೃತಿ (Breast Feeding Awareness) ಮೂಡಿಸಲಾಯಿತು. ಈ ಕಾರ್ಯಕ್ರಮವನ್ನು ಬಹುಭಾಷಾ ನಟಿ ಪ್ರಣೀತ ಸುಭಾಷ್ ಉದ್ಘಾಟಿಸಿದರು.
ಕೇವಲ ಎದೆ ಹಾಲುಣಿಸುವುದರ ಜಾಗೃತಿ ಮಾತ್ರವಲ್ಲದೇ, ಯುವ ತಾಯಂದಿರಿಗೆ ಸ್ತನ್ಯಪಾನ ಸ್ನೇಹಿ ವಾತಾವರಣ ಸೃಷ್ಟಿಸುವುದರ ಪ್ರಾಮುಖ್ಯತೆ ಬಗ್ಗೆ ತಿಳಿಸಲಾಯಿತು. ಶಿಶುಗಳಿಗೆ ಯಾವ ರೀತಿಯಲ್ಲಿ ಎದೆ ಹಾಲುಣಿಸಬೇಕು ಎಂಬುದರ ಕುರಿತು ಸೂಕ್ತ ಮಾರ್ಗದರ್ಶನವನ್ನು ಈ ಕಾರ್ಯಕ್ರಮದಲ್ಲಿ ನೀಡಲಾಯಿತು.
ಬಳಿಕ ಮಾತನಾಡಿದ ನಟಿ ಪ್ರಣೀತ, ಮಹಿಳೆಯರ ಜೀವನದಲ್ಲಿ ತಾಯ್ತನ ಒಂದು ಸುಂದರವಾದ ಅನುಭವವಾಗಿದೆ. ಭಾವನೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ತಾಯಿ-ಶಿಶುಗಳಿಬ್ಬರ ವಿಷಯದಲ್ಲೂ ಎದೆಹಾಲುಣಿಸುವುದು ಗಮನಾರ್ಹ ಪಾತ್ರ ವಹಿಸುತ್ತದೆ. ಆದ್ದರಿಂದ ಇದನ್ನು ಮೊದಲ ಲಸಿಕೆ ಎಂದು ಕರೆಯಲಾಗುತ್ತದೆ. ಏಕೆಂದರೆ, ಇದು ಶಿಶುಗಳನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ ಎಂದರು.
ಹೆರಿಗೆಯ ನಂತರ ಖಿನ್ನತೆ, ಒತ್ತಡದ ಕೆಲಸಗಳು, ನಿದ್ರಾರಹಿತ ರಾತ್ರಿಗಳು ಜತೆಗೆ ಅವರಿಗಿರುವ ಆರೋಗ್ಯ ಸಮಸ್ಯೆಗಳು ಕೂಡ ಹಾಲು ಉತ್ಪಾದನೆಯ ಮೇಲೆ ಪರಿಣಾಮ ಉಂಟಾಗಬಹುದು. ಈ ಸಮಸ್ಯೆಗಳತ್ತ ತಾಯಂದಿರು ಗಮನಹರಿಸುವ ಅಗತ್ಯವಿರುತ್ತದೆ ಎಂದು ಪ್ರಣೀತ ಹೇಳಿದರು.
ಇದನ್ನೂ ಓದಿ | Motivational story: ನೆಮ್ಮದಿಯೇ ಇಲ್ಲದ ಶ್ರೀಮಂತ ಮಹಿಳೆಗೆ ಏನೂ ಇಲ್ಲದ ವಿಶಾಲಾಕ್ಷಮ್ಮ ಹೇಳಿದ ಕಥೆ
ಮಣಿಪಾಲ್ ಆಸ್ಪತ್ರೆಯ ನವಜಾತ ಶಿಶು ರೋಗತಜ್ಞರಾದ ಡಾ. ಫಣಿಭೂಷನ್ ಮಾತನಾಡಿ, ಮೊದಲ ಆರು ತಿಂಗಳುಗಳಲ್ಲಿ ಶಿಶುಗಳಿಗೆ ಪ್ರತ್ಯೇಕವಾಗಿ ಎದೆ ಹಾಲುಣಿಸುವ ಅಗತ್ಯವಿರುತ್ತದೆ. ಶಿಶುವಿನ ಬೆಳವಣಿಗೆ ಮತ್ತು ಅಭಿವೃದ್ದಿಗೆ ಸೂಕ್ತವಾದ ಪೋಷಕಾಂಶಗಳನ್ನು ಇದು ಪೂರೈಸುತ್ತದೆ. ಎದೆಹಾಲಿನಲ್ಲಿ ರೋಗ ನಿರೋಧಕ (ಪ್ರತಿಕಾಯಗಳು) ಇದ್ದು, ಇವು ಶಿಶುಗಳನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಡಿಎಚ್‌ಎನಂತಹ ಫ್ಯಾಟಿ ಆಸಿಡ್‌ಗಳನ್ನು ಇದು ಹೊಂದಿದ್ದು, ಶಿಶುವಿನ ಮೆದುಳು ಮತ್ತು ಕಣ್ಣುಗಳ ಅಭಿವೃದ್ದಿಗೆ ಇದು ಸಹಾಯ ಮಾಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆಯ ಮಹಿಳೆಯರ ಆರೋಗ್ಯ ಕುರಿತಾದ ವುಮೆನ್ಸ್ ಹೆಲ್ತ್ ಪ್ಯಾಕೇಜ್‌ವೊಂದನ್ನು ತಾಯಂದಿರಿಗಾಗಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ತಾಯಂದಿರು ತಮ್ಮ ಆರೋಗ್ಯ ಪರೀಕ್ಷಿಸಿಕೊಳ್ಳಬಹುದಲ್ಲದೆ, ಅನಾರೋಗ್ಯ ಕುರಿತಾದ ಆರಂಭದ ಲಕ್ಷಣಗಳನ್ನು ಮತ್ತು ಕೊರತೆಗಳನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಿಸಿಕೊಳ್ಳಬಹುದು.
ಉದ್ಘಾಟನೆಯ ಸಂದರ್ಭದಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ. ಜ್ಯೋತಿ ವಿ ಶಣೈ, ಪ್ರಸೂತಿ ಮತ್ತು ಸ್ತ್ರೀ ರೋಗ ಸಲಹಾ ತಜ್ಞರಾದ ಡಾ. ಅಂಬುಜಾ ಗೋವಿಂದರಾಜ್, ನವಜಾತ ಶಿಶು ತಜ್ಞರು, ಡಾ. ಫಣಿಭೂಷನ್ ಮತ್ತು ನವಜಾತ ಶಿಶು ರೋಗಶಾಸ್ತ್ರ ಡಾ. ಕುಶಾಲ್ ಧೀರಜ್ಲಾಲ್ ಶಾ ಹಾಜರಿದ್ದರು.
ಇದನ್ನೂ ಓದಿ | Breastfeeding Week 2022 | ಅಮ್ಮನ ಹಾಲೇ ಅಮೃತ!