Site icon Vistara News

Bride Scarcity: ಈ ಸ್ಫುರದ್ರೂಪಿ ಹುಡುಗನಿಗೂ ಮದುವೆಯಾಗಲು ಹೆಣ್ಣು ಸಿಗಲಿಲ್ಲ; ಮನ ನೊಂದು ಆತ್ಮಹತ್ಯೆ

Bride scarcity young man suicide

ಶಿರಸಿ: ಗಂಡಿಗೊಂದು ಹೆಣ್ಣು, ಹೆಣ್ಣಿಗೊಂದು ಗಂಡು ಇದ್ದೇ ಇದೆ ಎನ್ನುವ ನಾಣ್ಣುಡಿಯೇ ತಪ್ಪಾಗಿದೆಯೇ ಎಂದು ಯೋಚಿಸುವಷ್ಟರ ಮಟ್ಟಿಗೆ ವಧುಗಳ ಕೊರತೆ (Bride scarcity) ಕಾಡುತ್ತಿದೆ. ಅದರಲ್ಲೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಂತೂ ಕೃಷಿಕರಿಗೆ, ಬಾಣಸಿಗರಿಗೆ, ಅರ್ಚಕರಿಗೆ, ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡಿರುವವರಿಗೆ ಮದುವೆಯೇ ಮರೀಚಿಕೆಯಾದಂತಿದೆ. ಇಂಥಹುದೇ ಪರಿಸ್ಥಿತಿಯನ್ನು ಎದುರಿಸಿದ ಯುವಕನೊಬ್ಬ ನೇಣು ಬಿಗಿದುಕೊಂಡು ಪ್ರಾಣ (Suicide case) ಕಳೆದುಕೊಂಡಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ತೇಲಂಗಾರ ನಿವಾಸಿ ಕಿರಗಾರಿ ಮನೆಯ ನಾಗರಾಜ ಗಣಪತಿ ಗಾಂವ್ಕರ (35) ಮೃತ ಯುವಕ. ಕಳೆದ ಹಲವಾರು ವರ್ಷಗಳಿಂದ ಹುಡುಗಿ ಹುಡುಕುತ್ತಿದ್ದ ಅವರಿಗೆ ಕೊನೆಗೂ ಒಂದು ಮದುವೆ ಸೆಟ್‌ ಆಗಲೇ ಇಲ್ಲ. ಇದರಿಂದ ನೊಂದು ಪ್ರಾಣವನ್ನೇ ಕಳೆದುಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಯುವಕ ನಾಗರಾಜ್‌ಗೆ ಮನೆಯಲ್ಲಿ ಕೃಷಿ ಮಾಡಿಕೊಂಡಿದ್ದರು. ಬದುಕುವುದಕ್ಕೆ ಸಾಕಾಗುವಷ್ಟು ವ್ಯವಸ್ಥೆಗಳೂ ಇದ್ದವು. ಸಾಲದ್ದಕ್ಕೆ ಯುವಕ ನಾಗರಾಜ್‌ ಒಳ್ಳೆ ಸ್ಫುರದ್ರೂಪಿ. ಅದರೆ, ಹುಡುಗಿಯೇ ಸಿಗಲಿಲ್ಲ. ಈ ಕಾರಣಕ್ಕಾಗಿ ನಾಗರಾಜ್‌ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದರು.

ನಾಗರಾಜ್‌ ಸ್ವತಃ ಹುಡುಕಾಟದಲ್ಲಿದ್ದರು, ಮನೆಯವರು, ಬಂಧುಗಳು ಎಲ್ಲ ಸೇರಿ ಪ್ರಯತ್ನಿಸಿದರೂ ಹುಡುಗಿ ಸಿಗದೆ ಇದ್ದುದರಿಂದ ಮನನೊಂದ ಆತ ಮನೆಯ ಸಮೀಪದ ಗುಡ್ಡದಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳಕ್ಕೆ ಪೊಲೀಸರು ಭೇಟಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದು ಕಡೆ ಹುಡುಗಿಯರ ಕೊರತೆ ಇನ್ನೊಂದು ಕಡೆ ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆದು ನಗರ ಜೀವನದ ಕಡೆಗೆ ವಾಲುತ್ತಿದ್ದಾರೆ. ಜತೆಗೆ ಉನ್ನತ ಉದ್ಯೋಗ ಪಡೆದು ಉನ್ನತ ಉದ್ಯೋಗ ಪಡೆದವರನ್ನೇ ಮದುವೆಯಾಗಲು ಬಯಸುತ್ತಾರೆ. ಹೀಗಾಗಿ ಊರಿನಲ್ಲಿ, ಮನೆಯಲ್ಲಿ, ಕೃಷಿ ಕೆಲಸದಲ್ಲಿ ನಿರತರಾಗಿರುವ ಯುವಕರಿಗೆ ಹುಡುಗಿ ಸಿಗದೆ ಸಂಕಷ್ಟ ಎದುರಾಗಿದೆ.

ಜಮೀನಿನ ದಾರಿಗಾಗಿ ಜಟಾಪಟಿ; ಮಹಿಳೆಯನ್ನು ದೊಣ್ಣೆಯಿಂದ ಹೊಡೆದು ಕೊಲೆ

ಚಿತ್ರದುರ್ಗ: ಆಸ್ತಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಜಟಾಪಟಿಯಲ್ಲಿ (Figght for road) ಒಬ್ಬ ಮಹಿಳೆಯನ್ನು ಬರ್ಬರವಾಗಿ ಕೊಲೆ (Murder case) ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ (Chitragurga news) ಹೊಸದುರ್ಗ ತಾಲೂಕಿನ ಲಕ್ಷ್ಮಿ ದೇವರಹಳ್ಳಿಯಲ್ಲಿ ನಡೆದ ಘಟನೆಯಲ್ಲಿ ಕೊಲೆಯಾದವರು ಪಾಲಾಕ್ಷಿ ಎಂಬ 35 ವರ್ಷದ ಮಹಿಳೆ.

ಜಮೀನಿಗೆ ಹೋಗುವ ದಾರಿ ಬಿಟ್ಟುಕೊಡುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಬುಧವಾರ ಸಂಜೆ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಪಾಲಾಕ್ಷಿ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಲಾಗಿತ್ತು. ಎರಡು ಗುಂಪುಗಳೂ ದೊಣ್ಣೆ ಮತ್ತಿತರ ಪರಿಕರಗಳನ್ನು ಹಿಡಿದುಕೊಂಡೇ ಹೊಡೆದಾಟ ನಡೆಸಿದ್ದವು. ಈ ವೇಳೆ ಪಾಲಾಕ್ಷಿ ಅವರಿಗೆ ಗಂಭೀರ ಗಾಯಗಳಾಗಿ ಅವರು ಪ್ರಾಣ ಕಳೆದುಕೊಂಡರು.

ರಾಜಪ್ಪ, ಬಸವರಾಜ್, ಚಂದ್ರಶೇಖರ್, ನಾಗರಾಜ್ ಸೇರಿ ಹಲವರು ಗುಂಪಾಗಿ ಬಂದು ಹಲ್ಲೆ ಮಾಡಿ ಈ ಕೊಲೆಗೆ ಕಾರಣರಾಗಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಹೊಸದುರ್ಗ ಸಿಪಿಐ ತಿಮ್ಮಣ್ಣ ಭೇಟಿ ನೀಡಿದ್ದು, ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version