ಬೆಂಗಳೂರು: ಇಂಡಿಯಾ ಒಕ್ಕೂಟದ ಒಳಗೆ ಡಿಎಂಕೆ ಇದೆ. ಆ ನಾಯಕನ್ನು ಕರೆದುಕೊಂಡು ಬಂದು ಕೆಆರ್‌ಎಸ್ ಜಲಾಶಯ ತೋರಿಸಿ. ನಮ್ಮಲ್ಲಿ ನೀರಿಲ್ಲ, ಜಲಾಶಯ (Cauvery Dispute) ಒಣಗಿ ಹೋಗಿದೆ ಎಂದು ಮನವರಿಕೆ ಮಾಡಿಕೊಡಿ. ಪ್ರಧಾನಿ ಮೋದಿಯನ್ನು ತೆಗಳಲು ಮಾತ್ರ ನಿಮ್ಮ ಸಂಬಂಧವೇ? ರಾಜಕಾರಣ ಎಂಬುದು ಬರೀ ಮ್ಯಾಥಮೆಟಿಕ್ಸ್ ಅಲ್ಲ, ಅದರಲ್ಲಿ ಕೆಮಿಸ್ಟ್ರಿ ಕೂಡ ಇರುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲೇ ಬರಗಾಲದ ಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದಾರೆ. ಮಂಡ್ಯ ರೈತರ ಜಮೀನಿಗೆ, ಬೆಂಗಳೂರಿಗೆ ಕುಡಿಯುವ ನೀರನ್ನೂ ಬಿಡದೆ ರಾಜ್ಯ ಸರ್ಕಾರ ಸಂಕಷ್ಟಕ್ಕೆ ದೂಡಿದೆ. ಹೀಗಾಗಿ ಮಂಗಳವಾರ ಬಂದ್‌ಗೆ ಕರೆ ನೀಡಲಾಗಿದೆ. ಈಗಾಗಲೇ ನಮ್ಮ ನಾಯಕ ಯಡಿಯೂರಪ್ಪ ಅವರು ಸಂಘಟನೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಶಾಂತಕುಮಾರ್ ಅವರ ಜತೆ, ಇತರರು ತೆಗೆದುಕೊಂಡಿರುವ ನಿರ್ಧಾರಕ್ಕೆ ಬಿಜೆಪಿ ಬೆಂಬಲಿಸಲಿದೆ. ಶಾಂತಿಯುತವಾಗಿ ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಪ್ರತಿಭಟನೆ ಮಾಡಿ ಎಂದು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇವೆ. ಈಗಾಗಲೇ ವಾಡಿಕೆಗಿಂತ ಶೇ. 54 ಮಳೆ ಕೊರತೆ ಇದೆ ಅಂತ ವರದಿ ನೀಡಿದ್ದಾರೆ. ಕಾವೇರಿಯಲ್ಲಿ 24 ಟಿಎಂಸಿ ನೀರಿದೆ. ರಿಸರ್ವ್ ವಾಟರ್ ಅಂತ ಇಂತಿಷ್ಟು ಇರಲಿದೆ. ಬಾಕಿ ಉಳಿಯುವುದು 6 ಟಿಎಂಸಿ. ಇದರಿಂದ ಬೆಂಗಳೂರು ಜನತೆಗೆ ಮೂರು ತಿಂಗಳಿಗೂ ನೀರು ಕೊಡಲು ಸಾಲುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ | HD Kumaraswamy : 6ನೇ ಗ್ಯಾರಂಟಿಯಾಗಿ ಮದ್ಯಭಾಗ್ಯ; ಎಚ್.ಡಿ. ಕುಮಾರಸ್ವಾಮಿ ಕಿಡಿ
ಸರ್ವ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ನೀರು ಬಿಡುವುದಿಲ್ಲ ಎಂದು ತೀರ್ಮಾನ ಮಾಡಿದೆ. ಆದರೂ ನೀರು ಬಿಡುತ್ತಿದ್ದಾರೆ. ಮೆಟ್ಟೂರು ಡ್ಯಾಮಲ್ಲಿ ನೀರಿದೆ, ಕುರ್ವಾಯು ಬೆಳೆ ಬೆಳೆಯಲು ತಮಿಳುನಾಡಿನವರು ಇಟ್ಟುಕೊಂಡಿದ್ದಾರೆ. ಕಾಕಾ ಪಾಟೀಲ್ ನಿಮಗೂ ಫ್ರೀ, ಮಹದೇವಪ್ಪ ನಿಮಗೂ ಪ್ರೀ ಅಂತ ಸಿಎಂ ಹೇಳಿದ್ದಾರೆ. ಅದೇ ರೀತಿ ಸ್ಟಾಲಿನ್ ನಿನಗೂ ಫ್ರೀ ಅಂತ ನೀರು ಬಿಡುತ್ತಿದ್ದಾರೆ ಎಂದು ಟೀಕಿಸಿದರು.
ನೀರು ಬಿಡುವುದಿಲ್ಲ ಎಂದರೆ ನಮ್ಮ ಬೆಂಬಲವಿದೆ
25 ಅಸಮರ್ಥ ಸಂಸದರು ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಿಮಗೆಲ್ಲಾ ಸಾಮರ್ಥ್ಯ ಇದೆಯಲ್ಲ. ನಮ್ಮ ನೀರು ನಮ್ಮ ಹಕ್ಕು ಎಂದು ಚಳವಳಿ ಮಾಡಿದ್ದು ನೀವೆ ಅಲ್ಲವೇ? ಈ ಸಂದರ್ಭದಲ್ಲಿ ನೀವೇ ನೀರು ಬಿಡುವುದಿಲ್ಲ ಅಂತ ನಿಂತುಕೊಳ್ಳಿ. 25 ಸಂಸದರ ಜತೆಗೆ 7 ಕೋಟಿ ಜನರೂ ನಿಲ್ಲುತ್ತೇವೆ ನಿಮ್ಮ ಹೈಕಮಾಂಡ್ ಮನವೊಲಿಸಲು ಕೇಳದೆ ನೀರು ಬಿಟ್ಟಿದ್ದೀರಿ. ಪೊಲಿಟಿಕಲ್ ಸೆಟ್ ಬ್ಯಾಕ್ ಆಗುತ್ತೆ ಎಂದು ಕೇಳದೆಯೇ ನೀರು ಬಿಟ್ಟಿದ್ದಾರೆ. ತಮಿಳುನಾಡಿನ ಓಲೈಕೆಗೆ ನೀರು ಬಿಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ಸಿ.ಟಿ ರವಿಗೆ ಬೇರೆ ಎಲ್ಲೂ ಜಾಗ ಇಲ್ಲ, ಅದಕ್ಕೆ ಮಂಡ್ಯಾಗೆ ಹೋಗಿದ್ದಾರೆ ಎಂದ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಗೆದ್ದಿದ್ದಾರೆ, ನಾನು ಸೋತಿದ್ದೀನಿ ಎಂಬ ಅರ್ಥದಲ್ಲಿ ಹೇಳಿದ್ದಾರೆ. ನನ್ನ ಸೋಲು ಹೇಗಾಯಿತು ಎಂದು ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ. ಅಹಂಕಾರದ ಮಾತುಗಳಿಂದ ಎಲ್ಲವೂ ಗೆಲ್ಲಲು ಸಾಧ್ಯವಿಲ್ಲ. ಪಕ್ಷಾತೀತವಾಗಿ ನಾವು ನಿಲ್ಲುತ್ತೇವೆ ಎಂದು ಹೇಳಿದರೂ ನೀರು ಬಿಡುತ್ತಿದ್ದೀರಾ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದರು.
ಇಂದು ಅಕ್ರಮವಾಗಿ ಗೋಮಾಂಸ ಸಾಗಣೆ ವಾಹನವನ್ನು ದೊಡ್ಡಬಳ್ಳಾಪುರ ಬಳಿ ಹಿಡಿದಿದ್ದಾರೆ. ಅಕ್ರಮ ಗೋಮಾಂಸ ಮಾರಾಟಕ್ಕೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ನೀವು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತೀರಿ ಎಂದರೆ ನಿಮಗೆ ನಾಚಿಕೆ ಆಗಲ್ಲವಾ ಎಂದು ಕಿಡಿ ಕಾರಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಸ್ವಾಗತಿಸುತ್ತೇವೆ
ಎನ್‌ಡಿಎನಲ್ಲಿ ಜೆಡಿಎಸ್ ಭಾಗ ಆಗಿರುವುದನ್ನು ನಾವು ಸ್ವಾಗತ ಮಾಡಿದ್ದೇವೆ. ಉಳಿದ ಸಂಗತಿಗಳ ಬಗ್ಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತೀರ್ಮಾನ ಮಾಡಬೇಕಿದೆ. ಇದರ ಜತೆಗೆ ಉಳಿದ ಸಂಗತಿಗಳ ಬಗ್ಗೆ ನಾವು ಕುಳಿತು ಯೋಚನೆ ಮಾಡಬೇಕು. ಕಾರ್ಯಕರ್ತರ ಹಂತದಿಂದ ಸಮನ್ವಯತೆ ಆಗುವಂತೆ ಮಾಡಬೇಕು. ಕೆಳ ಹಂತದಿಂದ ಸಮನ್ವಯತೆ ತಂದರೆ, ಹೆಚ್ಚಿನ ರಾಜಕೀಯ ಲಾಭವನ್ನು ನಿರೀಕ್ಷೆ ಮಾಡಬಹುದು. ಈಗಲೇ ನಾವು ಕುಣಿದು ಕುಪ್ಪಳಿಸಿ ಮೈ ಮರೆಯಬಾರದು ಎಂದು ಹೇಳಿದರು.
ಇಂಡಿಯಾ ಮೈತ್ರಿ ಕೂಟದಲ್ಲಿ ಯಾರು ಲೀಡರ್ ಎಂಬುದೇ ಕ್ಲ್ಯಾರಿಟಿ ಇಲ್ಲ. ಆದರೆ ಎನ್‌ಡಿಎ ಮೈತ್ರಿಕೂಟದಲ್ಲಿ ಮತ್ತೊಮ್ಮೆ ಮೋದಿ ಎಂಬ ಕ್ಲ್ಯಾರಿಟಿ ಇದೆ. ಹೀಗಾಗಿ ನಾವು ಕೆಳಹಂತದಿಂದ ಕಾರ್ಯಕರ್ತರನ್ನು ಜೋಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ | Life Threat : ಸಾಹಿತಿಗಳಿಗೆ ಬೆದರಿಕೆ ಒಡ್ಡಿ ಬರೆದಿದ್ದ ಪತ್ರಗಳ ಕೈ ಬರಹ ಒಂದೇ! ಪೋಸ್ಟ್ ಆಫೀಸ್ ಹಿಂದೆ ಬಿದ್ದ ಸಿಸಿಬಿ
ಮೈತ್ರಿ ಮಾತುಕತೆ ವೇಳೆ ಗೋವಾ ಸಿಎಂ ಪ್ರಮೋದ್ ಸಾವಂತ್ ಭಾಗಿ ಬಗ್ಗೆ ಪ್ರತಿಕ್ರಿಯಿಸಿ, ಈಗ ಜೆಡಿಎಸ್ ಎನ್‌ಡಿಎ ಭಾಗವಾಗಿದೆ. ಉಳಿದ ವಿಚಾರಗಳನ್ನು ರಾಜ್ಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ಮಾಡುತ್ತಾರೆ. ಪ್ರಮೋದ್ ಸಾವಂತ್ ಗೋವಾ ಸಿಎಂ ಮಾತ್ರವಲ್ಲ ನಮ್ಮ ಪಕ್ಷದ ಕಾರ್ಯಕರ್ತರು ಕೂಡ ಆಗಿದ್ದಾರೆ. ನಾನು ಸಹ ಗೋವಾ, ಮಹಾರಾಷ್ಟ್ರ, ತಮಿಳುನಾಡಿನ ಪ್ರಭಾರ. ಹಾಗೆಯೇ ಪ್ರಮೋದ್ ಸಾವಂತ್ ತಮಗೆ ಕೊಟ್ಟ ಜವಾಬ್ದಾರಿ ನಿಭಾಯಿಸಿದ್ದಾರೆ. ನಮಗೂ ಅಂತಹ ಎಷ್ಟೋ ಟಾಸ್ಕ್ ಕೊಟ್ಟಿರುತ್ತಾರೆ. ವೈಚಾರಿಕ, ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಒಗ್ಗೂಡಿಸಿದರೆ ಖಂಡಿತ ನಮಗೆ ಗೆಲುವು ಸಿಗುತ್ತೆ ಎಂದು ಹೇಳಿದರು.