ಚಿಕ್ಕೋಡಿ: ಪಂಚರ್ ಆಗಿ ಸರ್ಕಾರಿ ಬಸ್ಸು ಕೆಟ್ಟು ನಿಂತು (Broken Bus) ಅರ್ಧ ದಿನ ಕಳೆದರೂ ಹೇಳುವವರು ಕೇಳುವವರು ಯಾರು ಇಲ್ಲವೆಂದು ಪ್ರಯಾಣಿಕರೊಬ್ಬರ ಸರ್ಕಾರದ ವಿರುದ್ಧ ಕಿಡಿಕಾರಿದ್ದು ಗಮನ ಸೆಳೆದಿದೆ. ಬಸ್ಸಿಗೂ ಜಾಕ್ ಇಲ್ಲ, ಈಗ ಇರುವ ಸರ್ಕಾರಕ್ಕೂ ಜಾಕ್ ಇಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಥಣಿಯಿಂದ ಉಗಾರ್‌ಗೆ ಹೋಗುವ ಮಾರ್ಗದಲ್ಲಿ ಬಸ್‌ವೊಂದು ಸಂಜೆ ಆರು ಗಂಟೆಗೆ ಕೆಟ್ಟು ಹೋಗಿತ್ತು. ರಾತ್ರಿ 9 ಗಂಟೆಯಾದರೂ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿಲ್ಲ ಎಂದವರು ಅಸಮಾಧಾನ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ಕೇವಲ ಕುರ್ಚಿ ಕಸಿದುಕೊಳ್ಳೋದು ಬಿಟ್ಟರೆ ಜನರ ಪರಿಸ್ಥಿತಿ ಕೇಳುವವರು ಯಾರೂ ಇಲ್ಲ. ತಟ್ಟೆ ಕಸಿದು ಊಟ ಮಾಡಬೇಡಿ, ಇಸ್ಕೊಂಡು ಊಟ ಮಾಡಿ ಎಂದು ಹಿರಿಯರು ಹೇಳುತ್ತಾರೆ. ಆದರೆ ರಾಜಕೀಯ ವ್ಯವಸ್ಥೆ ಹೇಗಿದೆ ಎಂದರೆ ಕುಮಾರಸ್ವಾಮಿ ಊಟ ಮಾಡುವ ತಟ್ಟೆಯನ್ನು ಯಡಿಯೂರಪ್ಪ ಕಸಿದುಕೊಂಡರು. ಯಡಿಯೂರಪ್ಪ ಊಟ ಮಾಡುವ ತಟ್ಟೆಯನ್ನು ಬೊಮ್ಮಾಯಿ ಕಸಿದುಕೊಂಡರು. ಈ ಸರ್ಕಾರ ಜಾಕ್ ಇಲ್ಲದ ಸರ್ಕಾರ ಎಂದವರು ವಿಡಿಯೊ ಮಾಡಿ ಕಿಡಿಕಾರಿದ್ದಾರೆ.
ಮೋದಿಗೆ ಹೆಂಡತಿ ಮಕ್ಕಳಿಲ್ಲ
ಪ್ರಧಾನಿ ನರೇಂದ್ರ ಮೋದಿಗೆ ಹೆಂಡತಿ ಮಕ್ಕಳಿಲ್ಲ. ಆದರೆ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳಿ ದೇಶ ಹಾಳು ಮಾಡಿದ್ದಾರೆ. ಕರ್ನಾಟಕದಲ್ಲಿ ಇವರ ಕುರ್ಚಿ ಅವರು ಕಸಿದುಕೊಂಡು, ಅವರ ಕುರ್ಚಿ ಇವರು ಕಸಿದುಕೊಂಡು ರಾಜ್ಯ ಹಾಳಾಗಿ ಹೋಗಿದೆ. ಇಲ್ಲಿ ನಮ್ಮ ಪರಿಸ್ಥಿತಿ ಕೇಳುವವರು ಯಾರೂ ಇಲ್ಲ ಎಂದು ಆ ಪ್ರಯಾಣಿಕರು ಕಿಡಿ ಕಾರಿದ್ದಾರೆ.
ಶ್ರೀಮಂತ ಪಾಟೀಲ್ ಗೂಂಡಾಗಿರಿ ಶಾಸಕ
ಶಾಸಕ ಶ್ರೀಮಂತ ಪಾಟೀಲ್ ಕಾಗವಾಡ ಕ್ಷೇತ್ರದ ಎಂಎಲ್‌ಎ ಅಲ್ಲ, ಆತ ಮಹಾರಾಷ್ಟ್ರದ ಎಂಎಲ್ಎ ತರಹ ಆಗಿದ್ದಾರೆ. ʻನಾ ಘರ್ ಕಾ, ನಾ ಘಾಟ್ ಕಾʼ ಎಂಬ ಪರಿಸ್ಥಿತಿ ಅವರದ್ದಾಗಿದೆ. ಶ್ರೀಮಂತ ಪಾಟೀಲ್ ಗೂಂಡಾಗಿರಿ ಶಾಸಕನಾಗಿದ್ದು, ಸಿದ್ದರಾಮಯ್ಯ ಸರ್ ಕಾಗವಾಡ ಮತ ಕ್ಷೇತ್ರದ ಬಗ್ಗೆ ಸ್ವಲ್ಪ ಗಮನಿಸಿ. ನಮ್ಮ ಕ್ಷೇತ್ರ ಗುರುವಿಲ್ಲದ ಮಠದಂತಾಗಿದೆ. ನೀವು ಕೇವಲ ಕುರ್ಚಿಗಾಗಿ ಸರ್ಕಾರ ನಡೆಸಿದ್ದಿರೋ? ಅಥವಾ ಜನರಿಗಾಗಿ ಸರ್ಕಾರ ನಡೆಸಿದಿದ್ದಿರೋ? ಹಾಗೇನಾದರೂ ಇದ್ದರೆ ಕರ್ನಾಟಕದ ಜನರಿಗೆ ಚೂರು ವಿಷ ನೀಡಿಬಿಡಿ ಎಂದವರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ | ಜನಸಾಮಾನ್ಯರ ಸಾರಿಗೆಗೆ ವಿಷ ಹಾಕಿ ಕೊಲ್ಲುತ್ತಿದೆ ಸರ್ಕಾರ: ಸಿದ್ದರಾಮಯ್ಯ ಆಕ್ರೋಶ