ಕೋಲಾರ: ಕಳೆದ ಕೆಲವು ದಿನಗಳಿಂದ ವಿದ್ಯುತ್ ಸ್ಪರ್ಶದಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಒಂದೇ ಸಮನೆ ಹೆಚ್ಚಿದೆ. ಗುರುವಾರ ಸಂಜೆಯಷ್ಟೇ ಹಾಸನದಲ್ಲಿ ಮಹಡಿ ಮೇಲಿನ ಕೈತೋಟಕ್ಕೆ ಚಾವಣಿ ಹಾಕುವ ವೇಳೆ ಇಬ್ಬರು ವಿದ್ಯುದಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದರು. ಶುಕ್ರವಾರ ಬೆಳಗ್ಗೆ ದೊಮ್ಮಸಂದ್ರದ ಸಂತೆ ಬೀದಿಯ ಕಾವೇರಮ್ಮ ದೇವಾಲಯದ ಬಳಿ ಸೈಕಲ್‌ನಲ್ಲಿ ಹೋಗುತ್ತಿದ್ದ ಮಹೇಶ್ (47) ಅವರ ಮೇಲೆ 11 ಕೆವಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು.
ಈ ನಡುವೆ ಕೋಲಾರದ ಕೆಜಿಎಫ್‌ನಲ್ಲಿ ತೋಟಕ್ಕೆ ಅಳವಡಿಸಿದ್ದ ಸೋಲಾರ್ ಪೆನ್ಸಿಂಗ್ ಸ್ಪರ್ಶ ಮಾಡಿದ ಅಣ್ಣ ಮತ್ತು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಲಕ್ಷ್ಮೀ ಸಾಗರ ಗ್ರಾಮದಲ್ಲಿ ಮೃತಪಟ್ಟ ಇಬ್ಬರು ಸೋದರರನ್ನು ರಮೇಶ್ (೩೦) ಹಾಗೂ ಮುರಳಿ (೨೮) ಎಂದು ಗುರುತಿಸಲಾಗಿದೆ.
ತೋಟಕ್ಕೆ ಅಳವಡಿಸಿದ್ದ ಸೋಲಾರ್ ಫೆನ್ಸಿಂಗ್ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಹೀಗಾಗಿ ವಿದ್ಯುತ್ ಹರಿದು ತಂತಿ ಮುಟ್ಟಿದಾಗ ಸಾವು ಸಂಭವಿಸಿದೆ ಎನ್ನಲಾಗಿದೆ. ಮೊದಲು ಅಣ್ಣನಿಗೆ ಆಘಾತವಾಗಿದ್ದು, ಅವನನ್ನು ರಕ್ಷಿಸಲು ಹೋದಾಗ ತಮ್ಮನೂ ಪ್ರಾಣ ಕಳೆದುಕೊಂಡಿದ್ದಾರೆ.
ಒಂದೇ ಮನೆಯ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ಮನೆಯಲ್ಲಿದ್ದ ವ್ಯಕ್ತಿಯ ಕತ್ತು ಕೊಯ್ದು ಕೊಲೆ
ಕೋಲಾರ ತಾಲ್ಲೂಕು ವೇಮಗಲ್‌ನಲ್ಲಿ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ವೆಂಕಟೇಶ್ ಎಂಬವರನ್ನು ಕೊಲೆ ಮಾಡಲಾಗಿದೆ. ವೇಮಗಲ್ ಬಿ2 ಬ್ಲಾಕ್ ನಿವಾಸಿಯಾಗಿರುವ ಇವರನ್ನು ಕೊಂದವರಾರು, ಯಾವ ಕಾರಣ ಎಂಬ ಮಾಹಿತಿ ತಿಳಿದುಬಂದಿಲ್ಲ. ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ | ವಿದ್ಯುತ್ ತಂತಿ ತುಂಡಾಗಿ ಬಿದ್ದು ಸೈಕಲ್ ಸವಾರ ಮೃತ್ಯು