ನವದೆಹಲಿ: ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾವಣೆ ಮಾಡಲಾಗುತ್ತದೆಯೇ ಇಲ್ಲವೇ ಎಂಬ ಚರ್ಚೆಗಳ ನಡುವೆಯೇ ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ನವದೆಹಲಿಗೆ ತೆರಳಿದ್ದು, ಈ ಕುರಿತು ಚರ್ಚೆಯನ್ನು ಮುಕ್ತವಾಗಿರಿಸಿದ್ದಾರೆ.
ದಿಢೀರನೆ ಗುರುವಾರ ಪ್ರವಾಸ ನಿಗದಿಪಡಿಸಿಕೊಂಡು ನವದೆಹಲಿಗೆ ಆಗಮಿಸಿರುವ ಬಿ.ಎಸ್. ಯಡಿಯೂರಪ್ಪ, ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ಸದ್ಯದಲ್ಲಿಯೇ ಭೇಟಿ ಮಾಡುತ್ತಿದ್ದೇನೆ. ರಾತ್ರಿ ಎಂಟು ಗಂಟೆಗೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲು ಸಮಯ ನಿಗದಿಯಾಗಿದೆ. ಗೃಹಸಚಿವ ಅಮಿತ್ ಷಾ ಅವರ ಭೇಟಿ ಮಾಡುವ ಪ್ರಯತ್ನವೂ ನಡೆಯುತ್ತಿದೆ, ಇನ್ನೂ ಸಮಯ ನಿಗದಿಯಾಗಿಲ್ಲ. ಮೂವರನ್ನೂ ಇಂದೇ ಭೇಟಿ ಮಾಡುವವನಿದ್ದೇನೆ ಎಂದರು.
ಇದನ್ನೂ ಓದಿ | ಅಲುಗಾಡಿದ್ದು ಕಟೀಲ್ ಕಾರಲ್ಲ, BJP ರಾಜ್ಯಾಧ್ಯಕ್ಷರ ಸೀಟು: ಸಮಸ್ಯೆ ಪರಿಹಾರಕ್ಕೆ 3 ಆಯ್ಕೆಗಳು
ಇದು ಸೌಹಾರ್ದಯುತ ಭೇಟಿಯೇ ಅಥವಾ ರಾಜಕೀಯ ಚರ್ಚೆ ನಡೆಯಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಉನ್ನತ ಸ್ಥಾನವನ್ನು ವರಿಷ್ಠರು ನೀಡಿದಾಗ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸುವುದು ಕರ್ತವ್ಯ. ಭೇಟಿ ಮಾಡಿದಾಗ ಸಹಜವಾಗಿ ರಾಜಕೀಯ ವಿಚಾರ, ರಾಜ್ಯದಲ್ಲಿ ಸ್ಥಿತಿಗತಿ ಕುರಿತು ಚರ್ಚೆ ನಡೆದೇ ನಡೆಯುತ್ತದೆ ಎಂದರು. ಈ ಮೂಲಕ, ಈ ಭೇಟಿಯ ಮಹತ್ವವನ್ನು ಬಿಚ್ಚಿಟ್ಟರು.
ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ನಾನಂತೂ ಈ ವಿಚಾರವನ್ನು ಮುಂದಿಟ್ಟುಕೊಂಡು ಬಂದಿಲ್ಲ. ಆದರೆ ಚರ್ಚೆಯಾಗಬಹುದೇ ಇಲ್ಲವೇ ಗೊತ್ತಿಲ್ಲ ಎಂದರು. ರಾಜ್ಯಾಧ್ಯಕ್ಷರ ಬದಲಾವಣೆ ಆಗುವುದೇ ಇಲ್ಲ ಎಂದು ಖಡಾಖಂಡಿತವಾಗಿ ಯಡಿಯೂರಪ್ಪ ಹೇಳಲಿಲ್ಲ. ಈ ಮೂಲಕ ಕೆಲವೇ ದಿನಗಳಲ್ಲಿ ಯಾವ ಬದಲಾವಣೆಗಳು ಬೇಕಾದರೂ ನಡೆಯಬಹುದು ಎನ್ನಲಾಗಿದೆ.
ಗುರುವಾರವಷ್ಟೆ ಉತ್ತರ ಪ್ರದೇಶ ಹಾಗೂ ತ್ರಿಪುರಾ ಬಿಜೆಪಿ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಬದಲಾವಣೆ ಮಾಡಬೇಕೆ ಬೇಡವೆ ಎಂಬ ಚರ್ಚೆಗಳು ನಡೆಯುತ್ತಿವೆ. ಯಡಿಯೂರಪ್ಪ ಅವರೊಂದಿಗೆ ವರಿಷ್ಠರು ಯಾವ ಮಾತುಕತೆ ನಡೆಸುತ್ತಾರೆ ಎಂಬ ಕುತೂಹಲ ಮೂಡಿದೆ.
ಮಂಗಳೂರಿಗೆ ಬರುವ ವೇಳೆಗೆ ನಿರ್ಧಾರ?
ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 2ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಒಟ್ಟಿಗೆ ಸೇರಿಸಿ ಸಮಾವೇಶ ನಡೆಸುವ ಕಾರ್ಯಕ್ರಮವಿದೆ. ಸುಮಾರು ಒಂದು ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ.
ಈ ಕಾರ್ಯಕ್ರಮಕ್ಕೆ ಮೋದಿ ಆಗಮಿಸಿದ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಲ್ಲದಿದ್ದರೂ ದಕ್ಷಿಣ ಕನ್ನಡ ಸಂಸದರಾಗಿಯಾದರೂ ನಳಿನ್ ಕುಮಾರ್ ಕಟೀಲ್ ಉಪಸ್ಥಿತಿ ಇರಲೇಬೇಕಾಗುತ್ತದೆ. ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಪಾರ್ಥಿವ ಶರೀರದ ದರ್ಶನಕ್ಕೆ ಆಗಮಿಸಿದ್ದ ನಳಿನ್‌ಕುಮಾರ್ ಕಟೀಲ್ ಅವರ ಕಾರನ್ನು ಅಲುಗಾಡಿಸಿದ್ದು ಇಡೀ ಸಂಘಟನೆಯಲ್ಲೇ ಆತಂಕ ಸೃಷ್ಟಿಸಿತ್ತು.
ನಂತರದಲ್ಲಿ ಯುವಮೋರ್ಚಾ ಕಾರ್ಯಕರ್ತರು ಸರಣಿ ರಾಜೀನಾಮೆ ನೀಡಲು ಆರಂಭಿಸಿದ್ದರು. ರಾಜ್ಯ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಅಂತಹ ಘಟನೆಗಳು ಯಾವುದೂ ನಡೆದಿಲ್ಲವಾದರೂ, ಕಾರ್ಯಕರ್ತರ ಅಸಮಾಧಾನಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಅಧಿಕಾರದಲ್ಲಿರುವವರ ಬದಲಾವಣೆಯಾಗಲಿ ಆಗಿಲ್ಲ. ಸೆಪ್ಟೆಂಬರ್ 2ರಂದು ಮೋದಿ ಆಗಮಿಸಿದಾಗ ಇಂತಹ ಘಟನೆಗಳಾಗಲಿ, ಪಕ್ಷದ ನಾಯಕತ್ವದ ವಿರುದ್ಧ ಘೋಷಣೆಗಳಾಗಲಿ ಹೊರಬೀಳದಂತೆ ತಡೆಯುವ ಸವಾಲು ಇದೀಗ ಬಿಜೆಪಿ ನಾಯಕರ ಮೇಲಿದೆ. ಸಿಎಂ ಸ್ಥಾನವನ್ನು ಬದಲಾವಣೆ ಮಾಡುವುದಿಲ್ಲ ಎಂದು ಬಿಜೆಪಿ ವರಿಷ್ಠರು ಹೇಳಿರುವುದರಿಂದ, ರಾಜ್ಯ ಅಧ್ಯಕ್ಷರ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂಬ ಚರ್ಚೆಗಳು ಪಕ್ಷದಲ್ಲಿ ನಡೆಯುತ್ತಿವೆ.
ಇದನ್ನೂ ಓದಿ | Praveen Nettaru | ತಾಕ್ಕತ್ತಿದ್ರೆ ಒಬ್ಬನೇ ಒಬ್ಬ ಕಾರ್ಯಕರ್ತನ ಮುಟ್ಟಿ ನೋಡಿ ಎಂದಿದ್ದ ನಳಿನ್ ಕುಮಾರ್ ಕಟೀಲ್!