ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಸದಸ್ಯರಾಗಿ ಹಾಗೂ ಸಂಸದೀಯ ಮಂಡಳಿಗೆ ನೇಮಕ ಮಾಡಲಾಗಿದೆ.
ಈ ಕುರಿತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸೂಚನೆ ಮೇರೆಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯಾಲಯ ಪ್ರಭಾರಿ ಅರುಣ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ, ಸದಸ್ಯರಾಗಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ ಸಿಂಗ್, ಬಿ.ಎಸ್. ಯಡಿಯೂರಪ್ಪ, ಸರ್ವಾನಂದ ಸೋನೊವಾಲ, ಕೆ.ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್‌ಪುರಾ, ಸುಧಾ ಯಾದವ್, ಸತ್ಯನಾರಾಯಣ ಜಟಿಯಾ, ಭೂಪೇಂದ್ರ ಯಾದವ್, ದೇವೇಂದ್ರ ಫಡಣವೀಸ್, ಓಮ್ ಮಾಥುರ್ ಇರಲಿದ್ದಾರೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಕಾರ್ಯದರ್ಶಿಯಾಗಿರಲಿದ್ದಾರೆ, ಸದ್ಯ ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿರುವ ವನಥಿ ಶ್ರೀನಿವಾಸ್ ಅವರು ಪದನಿಮಿತ್ತ ಸದಸ್ಯರಾಗಿ ನೇಮಕವಾಗಿದ್ದಾರೆ.
ಅದೇ ರೀತಿ 11ಸದಸ್ಯರ ಸಂಸದೀಯ ಮಂಡಳಿಯನ್ನೂ ನಡ್ಡಾ ರಚನೆ ಮಾಡಿದ್ದಾರೆ. ಇದರ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಇರಲಿದ್ದು, ಸದಸ್ಯರಾಗಿ ನರೇಂದ್ರ ಮೋದಿ, ರಾಜನಾಥ ಸಿಂಗ್, ಅಮಿತ್ ಶಾ, ಬಿ.ಎಸ್. ಯಡಿಯೂರಪ್ಪ, ಸರ್ವಾನಂದ ಸೋನೊವಾಲ, ಕೆ. ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್‌ಪುರಾ, ಸುಧಾ ಯಾದವ್, ಸತ್ಯನಾರಾಯಣ ಜಟಿಯಾ ಇರಲಿದ್ದಾರೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಾರ್ಯದರ್ಶಿಯಾಗಿರಲಿದ್ದಾರೆ.
ಕೇಂದ್ರೀಯ ಸಂಸದೀಯ ಮಂಡಳಿಯು ಪಕ್ಷದ ಸಂಪೂರ್ಣ ನಿರ್ಧಾರವನ್ನು ಕೈಗೊಳ್ಳುವ ಅತ್ಯುನ್ನತ ಸಮಿತಿಯಾಗಿದೆ. ಜತೆಗೆ, ಪ್ರತಿ ಚುನಾವಣೆಯಲ್ಲೂ ಟಿಕೆಟ್ ಅಂತಿಮಗೊಳಿಸುವುದು ಹಾಗೂ ಚುನಾವಣಾ ರಣತಂತ್ರ ಹೆಣೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಅವರಿಗೆ ಅತ್ಯುನ್ನತ ಸ್ಥಾನ ನೀಡಲಾಗಿದ್ದು, ಪಕ್ಷದಲ್ಲಿ ಕಡೆಗಣಿಸಿಲ್ಲ ಎಂಬ ಸಂದೇಶ ನೀಡಲಾಗಿದೆ.
ಸಂಸದೀಯ ಮಂಡಳಿಯಲ್ಲಿ ಈ ಹಿಂದೆ ಇದ್ದಂತಹ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್ ಚೌಹಾನ್ ಅವರನ್ನು ಕೈಬಿಡಲಾಗಿದೆ. ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಿರುವಷ್ಟೇ ಆಶ್ಚರ್ಯಕರ ವಿಚಾರ ಇದಾಗಿದ್ದು, ರಾಷ್ಟ್ರೀಯ ಬಿಜೆಪಿ ಸಂಘಟನೆಯಲ್ಲಿ ಇನ್ನೂ ಧ್ವಂದ್ವಗಳು ಮುಂದುವರಿದಿವೆ ಎನ್ನುವುದನ್ನು ಸೂಚಿಸುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಇದನ್ನೂ ಓದಿ | ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಿ ಹೇಳಿಕೆ ವಾಪಸ್ ಪಡೆಯಲಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಗ್ರಹ