Site icon Vistara News

BS Yediyurappa : ಸರ್ಕಾರದ ವಿರುದ್ಧ ಹೋರಾಟ; ಎಚ್‌.ಡಿ ಕುಮಾರಸ್ವಾಮಿ ನಡೆಯನ್ನು ಕೊಂಡಾಡಿದ ಬಿಎಸ್‌ವೈ

BSY Kumaraswamy

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ (Karnataka Election Results) ಪ್ರಕಟಗೊಂಡು 50 ದಿನಗಳೇ ಕಳೆದಿವೆ. ಸರ್ಕಾರ ಅಸ್ತಿತ್ವಕ್ಕೆ (Karnataka Government formation) ಬಂದು ವಿಧಾನಮಂಡಲದ ಅಧಿವೇಶನವೂ (Joint session) ಆರಂಭಗೊಂಡಿದೆ. ಆದರೆ, ಅಧಿಕೃತ ವಿರೋಧ ಪಕ್ಷವಾಗಿರುವ ಬಿಜೆಪಿಗೆ ಇನ್ನೂ ತನ್ನ ಸದನ ನಾಯಕನ ಆಯ್ಕೆಯನ್ನು (Opposition leader) ಮಾಡಲು ಸಾಧ್ಯವಾಗಿಲ್ಲ. ಈ ನಡುವೆ ಅದು ಮುಂಚೂಣಿ ಹೋರಾಟಕ್ಕೆ ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswmy) ಅವರನ್ನೇ ನೆಚ್ಚಿಕೊಂಡಂತೆ ಕಾಣಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ (BS Yediyurappa) ಅವರು ಸ್ವತಃ ಈ ಮಾತನ್ನು ಪುರಸ್ಕರಿಸುವಂತೆ ಮಾತನಾಡಿದರು.

ವಿಧಾನ ಮಂಡಲ ಅಧಿವೇಶನದಲ್ಲಿ ಶಾಸಕರು ವಿಧಾನಸೌಧದ ಒಳಗೆ ಹೋರಾಟ ನಡೆಸಿದರೆ ಬಿ.ಎಸ್‌. ಯಡಿಯೂರಪ್ಪ ಅವರು ಸದನದ ಹೊರಗೆ ಎಲ್ಲ ನಾಯಕರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದ್ದರು. ಸದನ ನಡೆಯುವ ಎಲ್ಲ ದಿನಗಳಲ್ಲೂ ದಿನಪೂರ್ತಿ ಪ್ರತಿಭಟನೆ ನಡೆಯಲಿದೆ ಎಂದು ಬಿಎಸ್‌ವೈ ಪ್ರಕಟಿಸಿದ್ದರು. ಅದರ ಭಾಗವಾಗಿ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆರಂಭಗೊಂಡಿದೆ.

ಈ ಪ್ರತಿಭಟನೆಯಲ್ಲಿ ಭಾಗವಹಿಸಲು ತಮ್ಮ ಮನೆಯಾದ ಧವಳಗಿರಿಯಿಂದ ಹೊರಟ ವೇಳೆ ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ ಕೆಲವೊಂದು ವಿಚಾರಗಳನ್ನು ಹಂಚಿಕೊಂಡರು.

ʻʻರಾಜ್ಯ ಸರ್ಕಾರದ ಗ್ಯಾರಂಟಿಗಳ ಜಾರಿಗೆ ಆಗ್ರಹಿಸಿ ಇಂದು ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರದ ಗ್ಯಾರಂಟಿಗಳನ್ನು ಜಾರಿಗೆ ತರಬೇಕು ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸಾಲ‌ ಮನ್ನಾ ಮಾಡಬೇಕು. ಗೋಹತ್ಯೆ ನಿಷೇಧ ಕಾಯ್ದೆ ರದ್ದು ಕೋರಿ ಹೊರಡಿಸಿರುವ ಆದೇಶ ರದ್ದು ಮಾಡಬೇಕು, ಮತಾಂತರ ಕಾಯ್ದೆ ರದ್ದು ಆದೇಶ ವಾಪಸ್ಸು ಪಡೆಯಬೇಕು ಎಂಬ ಅಂಶಗಳನ್ನು ಇಟ್ಕೊಂಡು ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಸರ್ಕಾರ ಕೂಡಲೇ ಎಚ್ಚೆತ್ತು ನೀಡಿರುವ ಎಲ್ಲ ಭರವಸೆಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕುಮಾರಸ್ವಾಮಿ ಹೋರಾಟಕ್ಕೆ ಪೂರ್ಣ ಬೆಂಬಲ

ಸಿಎಂ ಕಚೇರಿಯಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ, ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬೆಲ್ಲ ಆರೋಪಗಳನ್ನು ಮಾಡಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಮಾತುಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಕುಮಾರಸ್ವಾಮಿ ಅವರು ತುಂಬಾ ಜವಾಬ್ದಾರಿಯುತವಾಗಿ ಹೋರಾಟ ಮಾಡ್ತಿದ್ದಾರೆ. ನಮ್ಮ ಹೋರಾಟಕ್ಕೂ ಕುಮಾರಸ್ವಾಮಿಯವರ ಬೆಂಬಲ ಪಡೆದು ಒಟ್ಟಿಗೆ ಹೋರಾಟ ಮಾಡ್ತೇನೆ. ಅವ ಹೋರಾಟಕ್ಕೂ ನಾವು ಸಂಪೂರ್ಣ ಸಹಮತದೊಂದಿಗೆ ಸಹಕಾರ ನೀಡ್ತೇವೆ. ಕುಮಾರಸ್ವಾಮಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡ್ತೇವೆ ಎಂದು ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಮುಂದಿನ ದಿನಗಳಲ್ಲಿ ಮೈತ್ರಿ ಮಾಡಿಕೊಳ್ಳುವ ಚಿಂತನೆಯಲ್ಲಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ಮಾಡಿಕೊಳ್ಳಲಿವೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಬಿಜೆಪಿಯ ನಡುವೆ, ಬಿ.ಎಸ್‌. ಯಡಿಯೂರಪ್ಪ ಅವರ ಮಾತು ಮಹತ್ವ ಪಡೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಕೂಡಾ ಕುಮಾರಸ್ವಾಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಶಾಸಕಾಂಗ ಪಕ್ಷ ನಾಯಕನ ಆಯ್ಕೆ ಯಾವಾಗ?

ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬವಾಗುತ್ತಿರುವ ಬಗ್ಗೆ ಕೇಳಿದಾಗ, ಶಾಸಕಾಂಗ ಪಕ್ಷದ ನಾಯಕ ತನ್ನ ಇಂದು ಸಂಜೆ ನಾಳೆ (ಮಂಗಳವಾರ ಅಥವಾ ಬುಧವಾರ) ತೀರ್ಮಾನವಾಗಲಿದೆ ಎಂದರು. ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರು ತೀರ್ಮಾನ ತೆಗೆದುಕೊಂಡು ಆಯ್ಕೆ‌ ಮಾಡಲಾಗುತ್ತದೆ ಎಂದು ಯಡಿಯೂರಪ್ಪ ನುಡಿದರು.

ಇದನ್ನೂ ಓದಿ: HD Kumaraswamy : ದೇಶದಲ್ಲಿ GST ಇದ್ದಂತೆ, ರಾಜ್ಯದಲ್ಲೀಗ YST ಟ್ಯಾಕ್ಸ್: ಎಚ್‌.ಡಿ. ಕುಮಾರಸ್ವಾಮಿ

Exit mobile version