ಬೆಂಗಳೂರು: ಕೊನೆಗೂ ಬಿಜೆಪಿ ರೈತ ಹೋರಾಟಕ್ಕೆ (BJP farmers protest) ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಅವರ ಅನಿವಾರ್ಯವಾದರು. ಅವರನ್ನು ಹೊರಗಿಟ್ಟು ಪ್ರತಿಭಟನೆಯ ರೂಪುರೇಷೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BJP national organising secretary BL Santhosh) ಅವರ ಪ್ಲ್ಯಾನ್ ಕೈಕೊಟ್ಟಂತಾಗಿದೆ. ಲೋಕಸಭಾ ಚುನಾವಣೆ (Lok Sabha Election 2024) ಹಿತದೃಷ್ಟಿಯಿಂದ ಹಾಗೂ ಇನ್ನಿತರ ರಾಜಕೀಯ ಕಾರಣಗಳಿಗಾಗಿ ಬಿ.ಎಸ್. ಯಡಿಯೂರಪ್ಪ ಅವರ ಅನಿವಾರ್ಯತೆ ಸೃಷ್ಟಿಯಾಗಿದ್ದೇ ಅವರನ್ನು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿಕೊಳ್ಳುವಂತೆ ಮಾಡಲು ಪ್ರಮುಖ ಕಾರಣವಾಗಿತ್ತು.
ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಆಗಾಗ ಸಾಬೀತಾಗುತ್ತಲೇ ಇದೆ. ಅಲ್ಲದೆ, ಕಳೆದ ವಿಧಾನಸಭಾ ಚುನಾವಣೆಯ (Assembly elections 2023) ಸೋಲಿನ ಬಳಿಕ ರಾಜ್ಯದಲ್ಲಿ ಸೂಕ್ತ ನಾಯಕತ್ವವೇ ಇಲ್ಲದಿರುವುದು ಕಮಲ ಪಡೆಯನ್ನು ಮತ್ತಷ್ಟು ಇಕ್ಕಟ್ಟಿಗೆ ದೂಡಿತ್ತು. ಈ ಮಧ್ಯೆ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಸಂಪೂರ್ಣ ಕಡೆಗಣನೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದನ್ನು ಪುಷ್ಟೀಕರಿಸುವಂತೆ ಬಿಎಸ್‌ವೈ ಸಹ ತಟಸ್ಥ ನಿಲುವನ್ನು ಹೊಂದಿದ್ದರು. ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತರ ಪರವಾಗಿ ಪ್ರತಿಭಟನೆ ನಡೆಸಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪ್ಲ್ಯಾನ್ ಮಾಡಿಕೊಂಡಿದ್ದರು. ಇದಕ್ಕೆ ಯಡಿಯೂರಪ್ಪ ಅವರನ್ನು ದೂರವೇ ಇಟ್ಟಿದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ಈ ಪ್ರತಿಭಟನೆಗೆ ಯಡಿಯೂರಪ್ಪ ಅವರು ಅನಿವಾರ್ಯವಾದರು.
ಇದನ್ನೂ ಓದಿ: Karnataka live news: ಲೋಕಸಭೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಫಿಕ್ಸ್; 4 ಕ್ಷೇತ್ರ ದಳ ಪಾಲು ಎಂದ ಬಿಎಸ್‌ವೈ
ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಟ್ಟು ರೈತ ಹೋರಾಟ ನಡೆಸುವಂತೆ ಸಂಸದ ಈರಣ್ಣ ಕಡಾಡಿ ಮೂಲಕ ಪ್ರತಿಭಟನೆಗೆ ಬಿ.ಎಲ್. ಸಂತೋಷ್ ಕರೆ ಕೊಡಿಸಿದ್ದರು. ಕಳೆದ ಒಂದು ವಾರದ ಹಿಂದೆಯೇ ಅವರು ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದರು. ಆದರೆ, ಸಂತೋಷ್ ನಡೆಗೆ ಪಕ್ಷದಲ್ಲೇ ಅಪಸ್ವರ ಕೇಳಿಬಂದಿತ್ತು. ಯಡಿಯೂರಪ್ಪ ಅವರನ್ನು ಬಿಟ್ಟು ಹೋರಾಟ ಮಾಡಿದರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಾಗಲೀ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಾಗಲೀ, ಇಲ್ಲವೇ ಸಚಿವರೂ ಸಹ ತಲೆ ಕೆಡೆಸಿಕೊಳ್ಳುವುದಿಲ್ಲ. ಹೀಗಾಗಿ ಹೋರಾಟಕ್ಕೆ ಯಡಿಯೂರಪ್ಪ ಅವರ ನೇತೃತ್ವ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದರು.
ಇನ್ನು ಎಲ್ಲ ಸಭೆಗಳಿಗೂ ಬಿಎಸ್‌ವೈ ನಾಯಕತ್ವ
ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲೇ ಹೋರಾಟ ಮತ್ತು ಪಕ್ಷದ ಸಭೆಗಳನ್ನು ಮಾಡಿದರೆ ಮಾತ್ರ ಅನುಕೂಲ ಆಗುತ್ತದೆ. ಅವರ ಉಪಸ್ಥಿತಿ, ನಾಯಕತ್ವ ಇದ್ದರೆ ಮಾತ್ರ ವಲಸಿಗರು ಕೂಡ ಪಕ್ಷದಲ್ಲಿ ಉಳಿಯುತ್ತಾರೆ. ಈಗಾಗಲೇ ಕೆಲವರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಮಾತಿಗೆ ಅವರೂ ಸಹ ಬೆಲೆ ಕೊಡುತ್ತಾರೆ. ಜತೆಗೆ ಅವರನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂಬ ಬಗ್ಗೆ ರಾಜ್ಯದ ಕೆಲವು ನಾಯಕರು ವರಿಷ್ಠರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಹೋರಾಟಕ್ಕೆ ಮುಂದಾಗಲಾಗಿದೆ. ಇನ್ನು ಯಾವುದೇ ಸಭೆಗಳು ಇದ್ದರೂ ಬಿಎಸ್‌ವೈ ನೇತೃತ್ವ ವಹಿಸಿಕೊಳ್ಳಬೇಕು. ಅದರ ಮೂಲಕ ರಾಜ್ಯ ಬಿಜೆಪಿ ಕಾರ್ಯತಂತ್ರ ಇರಬೇಕು ಎಂದು ಹೈಕಮಾಂಡ್ ಸಹ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಹೀಗಾಗಿ ವರಿಷ್ಠರ ಸೂಚನೆ ಮೇರೆಗೆ ಯಡಿಯೂರಪ್ಪ ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಅಲ್ಲದೆ, ಇನ್ನು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇನೆ. ಇಲ್ಲಿಯವರೆಗೆ ಶಾಂತವಾಗಿದ್ದೆ. ಇನ್ನು ಸರ್ಕಾರ ತೊಲಗುವವರೆಗೂ ನನ್ನ ಹೋರಾಟ ಎಂದು ಗುಡುಗಿದ್ದಾರೆ.
ಇದನ್ನೂ ಓದಿ: Karnataka Politics : ಸೆ. 16ರಿಂದ ರಾಜ್ಯಾದ್ಯಂತ ಹೋರಾಟ; ಸರ್ಕಾರ ತೊಲಗುವವರೆಗೂ ಅಭಿಯಾನ ಬಿಎಸ್‌ವೈ ಗುಡುಗು
ಸಿದ್ದರಾಮಯ್ಯ ಸರ್ಕಾರಕ್ಕೀಗ ಬಿಎಸ್‌ವೈ ತಲೆಬಿಸಿ
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನ ಪೂರೈಸಿ ಮುನ್ನಡೆಯುತ್ತಿದೆ. ಈ ಮಧ್ಯೆ ಬಿಜೆಪಿ ಸಹಿತ ವಿಪಕ್ಷಗಳ ಮಾತಿಗೆ ಅಷ್ಟಾಗಿ ಸೊಪ್ಪು ಹಾಕುತ್ತಿರಲಿಲ್ಲ. ಅಲ್ಲದೆ, ಬಿಜೆಪಿಯಲ್ಲಿ ಸೂಕ್ತ ನಾಯಕತ್ವ ಇರಲಿಲ್ಲ. ಇದರಿಂದ ನಿರಾತಂಕವಾಗಿ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿತ್ತು. ಆದರೆ, ಈಗ ಬಿ.ಎಸ್. ಯಡಿಯೂರಪ್ಪ ಅವರು ಪುಟಿದೆದ್ದಿದ್ದರಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಹೋರಾಟದ ಬಿಸಿ ತಟ್ಟಲಿದೆ.