Site icon Vistara News

Karnataka Election: ಬಾದಾಮಿಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ವರುಣದಲ್ಲಿ ಸಿದ್ದರಾಮಯ್ಯರನ್ನು ನಾನು ಸೋಲಿಸುವೆ: ಯಡಿಯೂರಪ್ಪ

BS yediyurappa says Bjp candidate will win in Badami, I will defeat Siddaramaiah in Varuna

ಬಾಗಲಕೋಟೆ: ವರುಣ ಕ್ಷೇತ್ರದಲ್ಲಿ ಒಂದು ದಿನ ಮಾತ್ರ ಪ್ರಚಾರ ಎಂದಿದ್ದ ಸಿದ್ದರಾಮಯ್ಯ ಈಗ ವರುಣ ಬಿಟ್ಟು ಹೊರಗೆ ಬರಲಾಗದ ದುಸ್ಥಿತಿಯಲ್ಲಿ ಇದ್ದಾರೆ. ಸಿದ್ದರಾಮಯ್ಯ ಬಾದಾಮಿ ಜನರಿಗೆ ದ್ರೋಹ ಮಾಡಿ ವರುಣಕ್ಕೆ ಹೋಗಿದ್ದಾರೆ. ಹೀಗಾಗಿ ಬಾದಾಮಿ ಜನರು ಸಿದ್ದರಾಮಯ್ಯಗೆ ಬುದ್ಧಿ ಕಲಿಸಲು ಈ ಚುನಾವಣೆಯಲ್ಲಿ (Karnataka Election) ಬಿಜೆಪಿಯನ್ನು ಗೆಲ್ಲಿಸಬೇಕು. ಬಾದಾಮಿಯಲ್ಲಿ ಶಾಂತಗೌಡ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಿ, ನಾನು ವರುಣದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಜಿಲ್ಲೆಯ ಕೆರೂರು ಪಟ್ಟಣದಲ್ಲಿ ಬಾದಾಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಶಾಂತಗೌಡ ಪಾಟೀಲ ಪರ ಪ್ರಚಾರ ನಡೆಸಿದ ಅವರು, ಎಸ್‌ಟಿ ಸಮಾಜದ ಮಹಿಳೆಯನ್ನು ಬಿಜೆಪಿ ದೇಶದ ರಾಷ್ಟ್ರಪತಿ ಮಾಡಿದೆ. ನಾನು ಸಿಎಂ ಆಗಿದ್ದಾಗ ಕಾಗಿನೆಲೆಯನ್ನು ಹೇಗೆ ಅಭಿವೃದ್ಧಿ ಮಾಡಿದ್ದೇನೆ ನೋಡಿಕೊಂಡು ಬರಬೇಕು ಎಂದು ಕುರುಬ ಸಮಾಜಕ್ಕೆ ಒಂದು ಮಾತು ಹೇಳಿದ್ದೇನೆ. ರಾಜೀವ್‌ ಗಾಂಧಿ ಅವರು ವೀರೇಂದ್ರ ಪಾಟೀಲ್‌ರನ್ನು ವಿಮಾನ ನಿಲ್ದಾಣದಲ್ಲೇ ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಈ ರೀತಿಯಾಗಿ ವೀರಶೈವ ಲಿಂಗಾಯತರಿಗೆ ಕಾಂಗ್ರೆಸ್‌ನವರು ದ್ರೋಹ ಮಾಡಿದ್ದಾರೆ ಎಂದು ಯಡಿಯೂರಪ್ಪ ಕಿಡಿಕಾರಿದರು.

ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಅಪಮಾನ ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ ಈ ಅಪಪ್ರಚಾರವನ್ನು ವೀರಶೈವ ಲಿಂಗಾಯತರು ನಂಬಬಾರದು. ನಾನೇ ಸ್ವತಃ ಸಿಎಂ ಸ್ಥಾನ ಬಿಟ್ಟುಕೊಟ್ಟು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಓಡಾಡುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ | Karnataka Election 2023: ಶೀಘ್ರವೇ ನನಗೆ ಬೈಯುವುದರಲ್ಲಿ ಕಾಂಗ್ರೆಸಿಗರು ಶತಕ ಬಾರಿಸಲಿದ್ದಾರೆ; ಪ್ರಧಾನಿ ಮೋದಿ

ರಾಹುಲ್ ಗಾಂಧಿ ಮೋದಿಗೆ ಸಮಾನ ಆಗುತ್ತಾರಾ ಎಂದು ಜನರನ್ನು ಕೇಳಿದ ಯಡಿಯೂರಪ್ಪ, ಎಲ್ಲಿಯ ಮೋದಿ? ಎಲ್ಲಿಯ ರಾಹುಲ್ ಗಾಂಧಿ? ಬಾದಾಮಿಗೆ ಬಂದು, ತಿಂದು ದ್ರೋಹ ಮಾಡಿರುವ ಸಿದ್ದರಾಮಯ್ಯ ಅವರಿಗೆ ಪಾಠ ಕಲಿಸಲು ಕಾಂಗ್ರೆಸ್ ಸೋಲಿಸಿ ಎಂದು ಯಡಿಯೂರಪ್ಪ ಕರೆ ನೀಡಿದರು.

ಸಿದ್ದರಾಮಯ್ಯ ವರುಣಾದಲ್ಲಿ ಸೋಲುತ್ತಾರೆ

ಬಾದಾಮಿ ಜನರಿಗೆ ಈ ಸಾರಿ ಕೈ ಮುಗಿದು ಕೇಳುತ್ತೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ನಿಂತು ಕೆಲವೇ ಮತಗಳ ಅಂತರದಲ್ಲಿ ಗೆದ್ದಿದ್ದರು. ಈ ಬಾರಿ ಬಾದಾಮಿ ಜನರಿಗೆ ಕೈ ಕೊಟ್ಟು ವರುಣದಲ್ಲಿ ನಿಂತಿದ್ದಾರೆ. ಬಾದಾಮಿಯಲ್ಲಿ ನಿಂತಿದ್ದರೂ ಸೋಲುತ್ತಿದ್ದರು, ಈಗ ವರುಣಾದಲ್ಲಿ ಸೋಲುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಗೆಲ್ಲುತ್ತಾರೆ. ಸಿದ್ದರಾಮಯ್ಯ ಈ ಭಾರಿ ಅತಂತ್ರ ಪರಿಸ್ಥಿತಿಗೆ ಹೋಗುತ್ತಾರೆ. ಸೋಮಣ್ಣ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಹಾಗೇಯೇ ಬಾದಾಮಿಯಲ್ಲಿ ಶಾಂತಗೌಡ ಗೆಲ್ಲುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ | ಕಾಂಗ್ರೆಸ್, ಜೆಡಿಎಸ್‌ನದ್ದು ತುಷ್ಟೀಕರಣದ ನೀತಿ; ಬಿಜೆಪಿಯದ್ದು ಸಂತುಷ್ಟೀಕರಣದ ರಾಜನೀತಿ ಎಂದ ಮೋದಿ

ನರೇಂದ್ರ ಮೋದಿ ಅವರು ಯಡಿಯೂರಪ್ಪ ಅವರ ಬಗ್ಗೆ ಒಂದೂ ಮಾತನಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಹುಟ್ಟುಹಬ್ಬದ ದಿನದಂದೇ ಪ್ರಾರಂಭ ಆಗಬೇಕು ಎಂದು ಮೋದಿಯವರು ಶಿವಮೊಗ್ಗ ವಿಮಾನ ಉದ್ಘಾಟನೆ ಮಾಡಿದರು. ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸವನ್ನು ಮರೆಯಲಿಕ್ಕೆ ಎಂದೂ ಸಾಧ್ಯವಿಲ್ಲ. ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಅವರಿಗೆ ಯಾರ ಹೆಸರೂ ಹೇಳಿ ಅಭ್ಯಾಸ ಇಲ್ಲ. ಹೀಗಾಗಿ ನನ್ನ ಹೆಸರನ್ನೂ ಹೇಳಿರಲ್ಲ. ಆದರೆ ನನ್ನ ಮೇಲಿರುವ ಪ್ರೀತಿ ವಿಶ್ವಾಸ ಕವಡೆ ಕಾವಸಿನಷ್ಟೂ ಕಡಿಮೆ ಆಗಿಲ್ಲ. ಅವರ ಬಗ್ಗೆ ನನಗೂ ವಿಶ್ವಾಸ ಇದೆ, ಅವರಿಗೆ ನನ್ನ ಮೇಲೆ ವಿಶ್ವಾಸ ಇದೆ ಎಂದು ತಿಳಿಸಿದರು.

Exit mobile version