Site icon Vistara News

Karnataka Election: ಮಂಗಳವಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಬಿ.ಎಸ್‍.ಯಡಿಯೂರಪ್ಪ

BS Yediyurappa says BJP to release list of candidates on April 11

BS Yediyurappa says BJP to release list of candidates on April 11

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Election) ಸಂಬಂಧಿಸಿದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ (ಏ.11) ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕರ್ನಾಟಕದ 224 ಕ್ಷೇತ್ರಗಳ ಬಗ್ಗೆ ದೆಹಲಿಯಲ್ಲಿ 2-3 ಬಾರಿ ಸುದೀರ್ಘ ಚರ್ಚೆ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಚರ್ಚೆಯಲ್ಲಿ ಭಾಗವಹಿಸಿದ್ದರು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದರು.

ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು. ಚರ್ಚೆ ಮತ್ತು ವಿಧಾನಸಭೆಯ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿದಾಗ ಬಿಜೆಪಿ ರಾಜ್ಯದಲ್ಲಿ ಬಹುಮತ ಪಡೆದು ಸರ್ಕಾರ ರಚಿಸುವುದು ನಿಶ್ಚಿತ ಎಂಬ ಭಾವನೆ ಮೂಡಿದೆ. 224 ಕ್ಷೇತ್ರಗಳ ಕುರಿತು ಸಭೆಯಲ್ಲಿ ಚರ್ಚೆ ಆಗಿದೆ. ಎಷ್ಟು ಜನರ ಪಟ್ಟಿ ಎಂಬ ಕುರಿತು ಅಂದಾಜಿಲ್ಲ. 15-20 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ವಿವರವನ್ನು ನಾಳೆ ಬಿಡುಗಡೆ ಮಾಡಬಹುದು ಎಂದು ತಿಳಿಸಿದರು.

ಇದನ್ನೂ ಓದಿ | AAP National Party: ಹೋರಾಟದ ಹಾದಿ ಸಾಗಿ ರಾಷ್ಟ್ರೀಯ ಪಕ್ಷವಾದ ಆಪ್‌, ‘ಆಮ್‌ ಆದ್ಮಿ’ಯನ್ನು ಇದು ತಲುಪಿದ್ದೇಗೆ?

ಹಾಲಿ ಶಾಸಕರಿಗೆ ಟಿಕೆಟ್ ನೀಡದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಚರ್ಚೆಗಳು ನಡೆದಿವೆ. ಯಾರೋ ಮೂರ್ನಾಲ್ಕು ಜನರಿಗೆ ಸಿಗದೆ ಇರಬಹುದು. ಈ ವಿಷಯದಲ್ಲಿ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಪಕ್ಷದಲ್ಲಿನ ಭಿನ್ನಮತದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಮಗೆ ಬಂಡಾಯದ ಬಿಸಿ ಏನೂ ತಟ್ಟಲ್ಲ. ಅತೃಪ್ತರು ಅಂತ ಯಾರೂ ಇಲ್ಲ, ಹಾಗೇನಾದರೂ ಇದ್ದರೆ ಅವರನ್ನು ಕರೆದು ಮಾತನಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಅವರ ಜತೆ ಸೀಟ್ ಹಂಚಿಕೆ ಬಗ್ಗೆ ಚರ್ಚೆ ಆಗಿದೆ. ನಾವೇ ಸರ್ಕಾರ ರಚನೆ ಮಾಡುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಅತೃಪ್ತರಿಗೆ ಜೆಡಿಎಸ್ ಗಾಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದಕ್ಕೆ ನಾನೇನು ಉತ್ತರ ಕೊಡಲ್ಲ ಎಂದು ನಿರ್ಗಮಿಸಿದರು.

Exit mobile version