Site icon Vistara News

Karnataka Election: ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅಧಿಕಾರಕ್ಕೆ ಬರಲ್ಲ: ಬಿ.ಎಸ್‌. ಯಡಿಯೂರಪ್ಪ

BS Yediyurappa says Congress is a sinking ship, won't come to power

BS Yediyurappa says Congress is a sinking ship, won't come to power

ಮಂಡ್ಯ: ಪಕ್ಷ ಸಂಘಟನೆಗೆ ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಪ್ರಧಾನಿ ಮೋದಿ ಕೈ ಬಲಪಡಿಸಲು ನಾನು ಪಕ್ಷದ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ಈ ಬಾರಿ 130 ಸೀಟ್ ಗೆದ್ದು ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ಅದು ಅಧಿಕಾರಕ್ಕೆ ಬರಲ್ಲ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಜಿಲ್ಲೆಯ ಕೆ.ಆರ್‌.ಪೇಟೆ ಕ್ಷೇತ್ರದ ಬೂಕನಕೆರೆಯಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಇದಕ್ಕಾಗಿ ನಾನು ಆಭಾರಿ. ಕೆಲವರು ಈ ಬಗ್ಗೆ ವದಂತಿ ಹರಡುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಮುಂದೆ ರಾಹುಲ್ ಗಾಂಧಿ ಏನೂ ಅಲ್ಲ ಎಂದು ಕಿಡಿಕಾರಿದರು.

ಉತ್ತರದ ಪ್ರದೇಶದ ಚುನಾವಣೆ ವೇಳೆ ಕಾಂಗ್ರೆಸ್‌ನ ಎಲ್ಲ ನಾಯಕರು ಇದ್ದರೂ ಅವರು ಗೆದ್ದಿದ್ದು ಬೆರಳಣಿಕೆ ಕ್ಷೇತ್ರ ಮಾತ್ರ. ದೇಶದ ಜನ ಜಾಗೃತರಾಗಿದ್ದಾರೆ, ನಾವು ಹಿಂದುಳಿದ ವರ್ಗಕ್ಕೆ ಕೊಟ್ಟ ಸವಲತ್ತಿನಿಂದ ಜನ ಬಿಜೆಪಿ ಕೈ ಹಿಡಿಯುತ್ತಾರೆ. ಅದೂ ಅಲ್ಲದೆ ನಮ್ಮ ಪಕ್ಷ ಈಗ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಜನಪರವಾಗಿದೆ. ಹೀಗಾಗಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಎಂದು ತಿಳಿಸಿದರು.

ಇದನ್ನೂ ಓದಿ | Karnataka Election: ಬಜರಂಗದಳ ನಿಷೇಧ ಭರವಸೆ; ಒಂಟಿಯಾದ್ರಾ ಡಿಕೆಶಿ? ಉಳಿದ ನಾಯಕರಿಂದೇಕೆ ಸಿಗುತ್ತಿಲ್ಲ ಬೆಂಬಲ?

ಸಂಸದೆ ಸುಮಲತಾ ಕೈ ಹಿಡಿದು ದೀಪ ಬೆಳಗಿಸಿದ ಯಡಿಯೂರಪ್ಪ

ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಬಿಜೆಪಿ ಸಮಾವೇಶ ಉದ್ಘಾಟಿಸುವಾಗ ಸಂಸದೆ ಸುಮಲತಾ ಕೈ ಹಿಡಿದು ಬಿ.ಎಸ್‌. ಯಡಿಯೂರಪ್ಪ ಅವರು ದೀಪ ಬೆಳಗಿಸಿದ ದೃಶ್ಯ ಕಂಡುಬಂತು. ವೇದಿಕೆಯಲ್ಲಿ ದೀಪ ಬೆಳಗಿಸಲು ಯಡಿಯೂರಪ್ಪ ಅವರನ್ನು ಕೋರಿದಾಗ, ಪಕ್ಕದಲ್ಲೇ ನಿಂತಿದ್ದ ಸುಮಲತಾ ಅಂಬರೀಶ್‌ರ ಕೈ ಹಿಡಿದು ಅವರು ದೀಪ ಬೆಳಗಿಸಿದರು. ನಂತರ ಉಳಿದ ಗಣ್ಯರು ದೀಪ ಬೆಳಗಿಸಿದರು.

ಇತ್ತೇಚೆಗೆ ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ ನಾಮಪತ್ರ ಸಲ್ಲಿಕೆ ವೇಳೆ ನಡೆದ ಮೆರವಣಿಗೆಯಲ್ಲಿ ನಟಿ ಶೃತಿ ಅವರ ಕೆನ್ನೆ ಹಿಂಡಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಸುದ್ದಿಯಾಗಿದ್ದರು. ನಂತರ ಲಿಂಗಸುಗೂರು ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಬಾಳೆಹಣ್ಣು ತಂದುಕೊಟ್ಟಾಗ ಬಿಎಸ್‌ವೈ ತಾವು ತೆಗೆದುಕೊಳ್ಳುವ ಮೊದಲು ನಟಿ ಶೃತಿಗೆ ಬಾಳೆಹಣ್ಣು ಕೊಟ್ಟು ಉಪಚರಿಸಿದ್ದರು. ಇದರ ಬೆನ್ನಲ್ಲೇ ಮಂಡ್ಯದಲ್ಲಿ ಸುಮಲತಾ ಅಂಬರೀಶ್‌ರ ಕೈ ಹಿಡಿದು ಯಡಿಯೂರಪ್ಪ ದೀಪ ಬೆಳಗಿಸಿರುವುದು ನಡೆದಿದೆ.

ಇದನ್ನೂ ಓದಿ | Modi in Karnataka : ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ 1 ದಿನದ ಬದಲು 2 ದಿನ; ಮಾರ್ಗವೂ ಬದಲಾವಣೆ

ಗ್ರಾಮ ದೇವತೆ ಗೋಗಾಲಮ್ಮಗೆ ಪೂಜೆ ಸಲ್ಲಿಕೆ

ಹುಟ್ಟೂರು ಬೂಕನಕೆರೆಗೆ ಆಗಮಿಸಿದಾಗ ಬಿಜೆಪಿ ಸಮಾವೇಶಕ್ಕೂ ಮೊದಲು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಗ್ರಾಮ ದೇವತೆ ಗೋಗಾಲಮ್ಮ ದೇವಿಯ ದರ್ಶನ ಪಡೆದರು. ಗ್ರಾಮಕ್ಕೆ ಭೇಟಿ ನೀಡಿದಾಗಲೆಲ್ಲ ಮೊದಲು ಗ್ರಾಮ ದೇವತೆ ಗೋಗಾಲಮ್ಮ ತಾಯಿಗೆ ಯಡಿಯೂರಪ್ಪ ಪೂಜೆ ಸಲ್ಲಿಸುತ್ತಾರೆ. ಅದರಂತೆ ಗುರುವಾರವೂ ಕೂಡ ದೇಗುಲದಲ್ಲಿ ಪೂಜೆ ಸಲ್ಲಿಕೆ ಬಳಿಕ ಪ್ರಚಾರಕ್ಕೆ ತೆರಳಿದರು.

Exit mobile version