ಕಲಬುರಗಿ: ಬಿಜೆಪಿಯಲ್ಲಿ ಅತಿ ಹೆಚ್ಚಿನ ಹಿಂದುಳಿದ ನಾಯಕರಿದ್ದಾರೆ. ಹಿಂದುಳಿದ ವರ್ಗದ ಜಾತಿವಾರು ಅಭಿವೃದ್ಧಿ ಮಂಡಳಿಗಳನ್ನು ಮಾಡಿ ಅನುದಾನ ನೀಡಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಸರ್ಕಾರ 5 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆ. ಈ ಭಾಗದ ಸಮಸ್ಯೆಗಳನ್ನು ಪರಿಹರಿಸಿ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ. ಹಾಗೆಯೇ ನರೇಂದ್ರ ಮೋದಿ ಅವರಂತಹ ನಾಯಕ ನಮ್ಮ ಜತೆ ಇದ್ದಾಗ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಹೊರವಲಯದ ಕೆಸರಟಗಿ ರದ್ದೇವಾಡಗಿ ಲೇಔಟ್‌ನಲ್ಲಿ ಭಾನುವಾರ ಆಯೋಜಿಸಿದ್ದ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶದಲ್ಲಿ ಮಾತನಾಡಿ, ಈಗಾಗಲೇ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಕಾರ್ಯ ಆರಂಭವಾಗಿದೆ. ಕಲಬುರಗಿ ಹಾಗೂ ಬೀದರ್‌ನಲ್ಲಿ ವಿಮಾನ ನಿಲ್ದಾಣ ಶುರುವಾಗಿದೆ. ಈ ಭಾಗದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮುಂದಿನ ದಿನದಲ್ಲಿ ಈ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಆ ಮೂಲಕ ಕಲಬುರಗಿಯನ್ನು ಮಾದರಿ ಜಿಲ್ಲೆಯಾಗಿ ಅಭಿವೃದ್ಧಿ ಮಾಡಲು ಕ್ರಮ ವಹಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ | ಪತ್ರಕರ್ತರಿಗೆ ಲಂಚ ಎನ್ನುವುದು ಕಾಂಗ್ರೆಸ್ ಟೂಲ್‌ಕಿಟ್‌ನ ಸುಳ್ಳು ಎಂದ ಸಿಎಂ ಬೊಮ್ಮಾಯಿ: ಕಾಂಗ್ರೆಸ್‌ಗೆ ನೋಟಿಸ್
ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರದೇ ಕಾಂಗ್ರೆಸ್ ಅನ್ಯಾಯ ಮಾಡಿದೆ. ನಾನು ಮೈಸೂರು ಭಾಗದಿಂದ ಹಾಗೂ ಸಿಎಂ ಬೊಮ್ಮಾಯಿ ಅವರು ಉತ್ತರ ಕರ್ನಾಟಕ ಭಾಗದಿಂದ ರಥಯಾತ್ರೆ ನಡೆಸಲಿದ್ದಾರೆ. 7 ರಿಂದ 8 ಲಕ್ಷ ಜನ ಸೇರಿ ದಾವಣಗೆರೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಬೇಕು. ನರೇಂದ್ರ ಮೋದಿ ಅವರಂತಹ ಅಪರೂಪದ ನಾಯಕರು ಇರುವಾಗ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಾರದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದಕ್ಕಾಗಿ ಹಿಂದುಳಿದ ವರ್ಗಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಬಾಬುರಾವ್ ಚಿಂಚನಸೂರ್ ಅವರಿಗೆ ಕೋಲಿ ಸಮಾಜ ಬೆಂಬಲ ನೀಡಬೇಕು. ಅವರಿಗೆ ಸೂಕ್ತ ಸ್ಥಾನ ಬಿಜೆಪಿ ನೀಡುತ್ತಿದೆ. ಹೀಗಾಗಿ ಕೋಲಿ ಸಮಾಜ ಒಟ್ಟಾಗಿ ಬಿಜೆಪಿಗೆ ಬೆಂಬಲ ನೀಡಬೇಕು. ನಿಮ್ಮ ನಿಮ್ಮ ಕ್ಷೇತ್ರಗಳನ್ನು ಹಿಂದುಳಿದ ವರ್ಗಗಳನ್ನು ಸೇರಿಸಿ ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕೋರಿದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬೊಮ್ಮಾಯಿ ಸರ್ಕಾರ 119 ಕೋಟಿ ರೂಪಾಯಿ ನೀಡಿದೆ. ನಮ್ಮ ಸರ್ಕಾರ ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಘೋಷಣೆ ಮಾಡಿದೆ. ಸಿದ್ದರಾಮಯ್ಯ ಅವರೇ ಹಿಂದುಳಿದ ಸಮಾಜದವರಿಗೆ ಎಷ್ಟು ಕೊಟ್ಟಿದ್ದೀರಿ? ನೀವು ಸಿಎಂ ಆದಾಗ ಏನು ಮಾಡಿದ್ದೀರಾ ಹೇಳಿ? ಕುರುಬರು ಹಾಗೂ ಹಿಂದುಳಿದ ವರ್ಗದವರ ಹೆಸರಿನಲ್ಲಿ ಮತ ಪಡೆದು ಸಿಎಂ ಆಗಿದ್ದೀರಿ ಎಂದು ಕಿಡಿಕಾರಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ ಸತ್ತು ಹೋಗಿದೆ. ಅಂತಹ ಪಕ್ಷಕ್ಕೆ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ ರಾಜ್ಯದ ಜನ ಚುನಾವಣೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರನ್ನು ಮಣ್ಣುಮುಕ್ಕಿಸಲು ಜನ ಕಾತರದಿಂದ ಇದ್ದಾರೆ ಎಂದ ಅವರು, ರಾಜ್ಯದಲ್ಲಿ ಹೆಚ್ಚು ದಲಿತರು, ಹಿಂದುಳಿದವರನ್ನು ಶಾಸಕರಾಗಿ ಮಾಡುತ್ತೇವೆ. ಬಿಜೆಪಿಯಿಂದ ಪ್ರತಿ ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರಿಗೆ ಟಿಕೆಟ್ ಸಿಗಲಿದೆ ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ದೇಶ, ಧರ್ಮದ ಬಗ್ಗೆ ಪ್ರಶ್ನೆ ಬಂದಾಗ ಹಿಂದುಳಿದ ವರ್ಗದವರು ಜೀವಕ್ಕೆ ಜೀವ ಕೊಡುವ ಜನರಾಗಿದ್ದಾರೆ. ಹಿಂದುಳಿದ ವರ್ಗಕ್ಕೆ ಸಂವಿಧಾನಬದ್ಧ ಸ್ಥಾನ ನೀಡಿದ್ದು ಬಿಜೆಪಿ ಸರ್ಕಾರ. ಡಬಲ್ ಎಂಜಿನ್ ಸರ್ಕಾರ ಮತ್ತೆ ರಾಜ್ಯದಲ್ಲಿ ಬರಬೇಕು. ಐದು ಬೆರಳು ಒಟ್ಟು ಮಾಡಿದರೆ ಶಕ್ತಿ ಬರುತ್ತದೆ, ಹಿಂದುಳಿದವರು ಒಗ್ಗೂಡಿದರೆ ದೊಡ್ಡ ಶಕ್ತಿ ತೋರಿಸಬಹುದು ಎಂದು ಕರೆ ನೀಡಿದರು.
ಇದು ಜಾತಿ ಒಡೆಯುವ ಸಮಾವೇಶವಲ್ಲ, ನಾವೆಲ್ಲರೂ ಒಟ್ಟಿಗೆ ಇರುವುದನ್ನು ಈ ಸಮಾವೇಶ ತೋರಿಸುತ್ತಿದೆ. ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದ್ದಾರೆ. ಸಿಎಂ ಕುರ್ಚಿಗೆ ಟವೆಲ್ ಹಾಕಿದವರ ಕನಸು ನನಸಾಗಲ್ಲ. ಹಿಂದುಳಿದ ವರ್ಗ, ದಲಿತರನ್ನು ನಿರ್ಲಕ್ಷ್ಯ ಮಾಡಿದರೆ ಚುನಾವಣೆಯಲ್ಲಿ ಏನಾಗುತ್ತದೆ ಎಂದು ಅವರಿಗೆ ಮತದಾರರು ಪಾಠ ಕಲಿಸಿದ್ದಾರೆ ಎಂದು ಕಿಡಿ ಕಾರಿದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್‌ನವರನ್ನು ಯಾರೂ ನಂಬಬೇಡಿ. ಕಾಂಗ್ರೆಸ್ ಮುಳುಗುವ ಹಡುಗು, ಆಗಿದ್ದು, ಈಗ ಖರ್ಗೆಯವರನ್ನು ಅಧ್ಯಕ್ಷರಾಗಿ ಮಾಡಿದ್ದಾರೆ. ಈ ಹಿಂದೆಯೇ ಅವರಿಗೆ ಅಧಿಕಾರ ಕೊಡಬಹುದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಖರ್ಗೆ ಅವರನ್ನು ಸಿಎಂ ಮಾಡಬೇಕಿತ್ತು. ಅದರೆ ಹಾಗೆ ಮಾಡಿಲ್ಲ ಎಂದು ಹೇಳಿದರು.
ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ. ನರೇಂದ್ರ ಬಾಬು ಅವರು ಮಾತನಾಡಿ, ಈ ಸಮಾವೇಶ ಒಬಿಸಿ ಸಮುದಾಯಗಳ ಹೃದಯ ಮಿಡಿತದ ಸಂಕೇತ. ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಯನ್ನು ಅವಕಾಶಗಳನ್ನು ಹಿಂದಿನ ಕಾಂಗ್ರೆಸ್ ಸರ್ಕಾರವು ಕಡೆಗಣಿಸಿತ್ತು. ಆದರೆ, ಮೋದಿ ಸರ್ಕಾರವು ಒಬಿಸಿಗೆ ಗರಿಷ್ಠ ಅವಕಾಶ- ಪ್ರಾತಿನಿಧ್ಯ ಮತ್ತು ಯೋಜನೆಗಳನ್ನು ನೀಡಿದೆ ಎಂದು ತಿಳಿಸಿದರು.
ಒಬಿಸಿ ಸಮುದಾಯಕ್ಕೆ ಕಾಂಗ್ರೆಸ್ ವಂಚನೆ
ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ. ಲಕ್ಷ್ಮಣ್ ಮಾತನಾಡಿ, ಶೇ. 50ಕ್ಕೂ ಹೆಚ್ಚಿನ ಪ್ರಮಾಣದಲ್ಲಿರುವ ಒಬಿಸಿ ಸಮುದಾಯಕ್ಕೆ ಅವಕಾಶ ಮತ್ತು ಸೌಲಭ್ಯಗಳನ್ನು ನೀಡದೆ ಕಾಂಗ್ರೆಸ್ ಪಕ್ಷವು ವಂಚಿಸಿದೆ. ಆ ಮೂಲಕ ಹಿಂದುಳಿದ ವರ್ಗಕ್ಕೆ ನಿರಂತರವಾಗಿ ಮೋಸ ಮಾಡಿದೆ ಎಂದು ಟೀಕಿಸಿದರು. ಆದರೆ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಪ್ರಯತ್ನದಿಂದ ಮೀಸಲಾತಿ ಲಭಿಸಿದೆ. ಹಿಂದುಳಿದ ವರ್ಗದವರು ವೈದ್ಯರಾಗುವ ಕನಸು ನನಸಾಗಿದೆ. ಗರಿಷ್ಠ ಸಂಖ್ಯೆಯ ಸಚಿವ ಸ್ಥಾನವನ್ನೂ ತಮ್ಮ ಸಂಪುಟದಲ್ಲಿ ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಕಾಕಾ ಕಾಲೇಲ್ಕರ್ ಸಮಿತಿ ಶಿಫಾರಸುಗಳನ್ನು ಮಾಜಿ ಪ್ರಧಾನಿ ನೆಹರು ಅವರು ಕಡೆಗಣಿಸಿದ್ದರು. ಬಳಿಕ ಮಂಡಲ್ ಕಮಿಷನ್ ಶಿಫಾರಸುಗಳನ್ನು ರಾಜೀವ್ ಗಾಂಧಿ ವಿರೋಧಿಸಿದ್ದರು. ಒಬಿಸಿಗೆ ಮೀಸಲಾತಿ ಕೊಡುವುದನ್ನು ಕಾಂಗ್ರೆಸ್ ಪಕ್ಷ ಬಯಸಲಿಲ್ಲ ಎಂದು ಟೀಕಿಸಿದರು.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರರು ಇದ್ದರು.
ಇದನ್ನೂ ಓದಿ | BJP OBC Convention | ಹಿಂದುಳಿದವರ ಮತ ಪಡೆದು ರಾಜ್ಯವೇ ಹಿಂದುಳಿಯುವಂತೆ ಮಾಡಿದ ಕಾಂಗ್ರೆಸ್: ಸಿಎಂ ಬೊಮ್ಮಾಯಿ