ಶಿವಮೊಗ್ಗ: ರಾಜಕೀಯದ ಒತ್ತಡದ ನಡುವೆಯೂ ಸದಾ ಲವಲವಿಕೆಯನ್ನು ಕಾಪಾಡಿಕೊಳ್ಳುವುದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ವಿಶೇಷ ಗುಣ. ಬುಧವಾರ ಶಿಕಾರಿಪುರದಲ್ಲಿ ನಡೆದ ಪುತ್ರ ಬಿ.ವೈ ವಿಜಯೇಂದ್ರ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯ ವೇಳೆಯೂ ಭಾರಿ ಖುಷಿಯಲ್ಲಿದ್ದರು. ಈ ವೇಳೆ ಅವರು ನಟಿ ಶ್ರುತಿಯವರ ಕೆನ್ನೆ ಹಿಂಡಿ, ತಲೆ ಸವರಿ ಆಶೀರ್ವಾದ ಮಾಡಿದ್ದು ವಾತಾವರಣದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿತು.
ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರು ಬುಧವಾರ ಮನೆಯಲ್ಲಿ ಪೂಜೆ, ಸಂಭ್ರಮಾಚರಣೆಗಳ ಬಳಿಕ ತಾಲೂಕು ಕಚೇರಿಗೆ ಹೋಗಿ ನಾಮಪತ್ರ ಸಲ್ಲಿಸಿದರು. ಅಲ್ಲಿಂದ ಬಿಜೆಪಿಯ ಬೃಹತ್ ಮೆರವಣಿಗೆ ಆರಂಭವಾಯಿತು. ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ಹಳೆ ಸಂತೆ ಮೈದಾನದವರೆಗೆ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ವಿಜಯೇಂದ್ರ ಅವರ ತಂದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೆರೆದ ವಾಹನದಲ್ಲಿ ಹೊರಟಿದ್ದರು. ಅವರ ಜತೆ ಕುಡಚಿ ಶಾಸಕ ಪಿ. ರಾಜೀವ್, ಬಿಜೆಪಿಯ ಸ್ಟಾರ್ ಕ್ಯಾಂಪೇನರ್‌ಗಳಲ್ಲಿ ಒಬ್ಬರು ಎಂದು ನೇಮಿಸಲ್ಪಟ್ಟ ನಟಿ ಶ್ರುತಿ ಅವರು ತೆರೆದ ವಾಹನದಲ್ಲಿದ್ದರು.
ಬಿಎಸ್‌ವೈ ಅವರು ನಗುತ್ತಲೇ ನೆರೆದ ಜನರತ್ತ ಕೈ ಬೀಸುತ್ತಿದ್ದರು, ಮುಗುಳ್ನಗುವಿನೊಂದಿಗೆ ಖುಷಿಯಲ್ಲಿದ್ದರು. ಇತ್ತ ಶ್ರುತಿ ಅವರು ಕೂಡಾ ತಮ್ಮ ಎಂದಿನ ಲವಲವಿಕೆಯಲ್ಲಿದ್ದರು. ಜನರ ಕಡೆಗೆ ಕೈಬೀಸುತ್ತಾ, ಹಾಯ್ ಎನ್ನುತ್ತಾ ಸಾಗುತ್ತಿದ್ದರು.
ಈ ನಡುವೆ, ಶ್ರುತಿ ಅವರ ಸಂಭ್ರಮವನ್ನು ನೋಡಿ ಬಿಎಸ್‌ವೈ ಅವರಿಗೂ ಖುಷಿಯಾಯಿತು. ಅವರು ಪಕ್ಕದಲ್ಲಿದ್ದ ಕುಡಚಿ ರಾಜೀವ್ ಅವರನ್ನೂ ದಾಟಿ ಕೈಯಿಂದ ಶ್ರುತಿಯವರ ಕೆನ್ನೆಯನ್ನು ಹಿಂಡಿದರು. ಮಗುವಿನ ಕೆನ್ನೆಯನ್ನು ಹಿಂಡುವಂತೆ ಪ್ರೀತಿ ತೋರಿದರು.
ಯಡಿಯೂರಪ್ಪ ಅವರು ತೋರಿದ ಆತ್ಮೀಯತೆಗೆ ಶ್ರುತಿ ಅವರೂ ಖುಷಿಯಾದರು. ಆಗ ಬಿಎಸ್‌ವೈ ಅವರು ಶ್ರುತಿ ಅವರ ತಲೆಯನ್ನು ಸವರಿದರು. ಬಳಿಕ ಮುಖವನ್ನು ತಲೆಯ ಪಕ್ಕಕ್ಕೆ ಸರಿಸಿ ಆಶೀರ್ವಾದ ಮಾಡಿದರು. ಬೆನ್ನು ತಟ್ಟಿ ಶಹಬ್ಬಾಸ್ ಎಂದರು.
ಬಿಎಸ್ ವೈ ಅವರ ಆಶೀರ್ವಾದ ಪಡೆದ ಶ್ರುತಿ ಅವರು ಧನ್ಯತೆಯಿಂದ ಮುಗುಳುನಗೆ ಬೀರಿದರು.
ಒಬ್ಬ ಹಿರಿಯ ನಾಯಕನ ಲವಲವಿಕೆ, ಬದುಕನ್ನು ಸಂಭ್ರಮಿಸುವ ರೀತಿ, ಕಿರಿಯರನ್ನು ಆಶೀರ್ವದಿಸುವ ಪರಿಯನ್ನು ನೋಡಿ ಎಲ್ಲರೂ ಖುಷಿಯಾದರು.
ಬಿ.ಎಸ್. ಯಡಿಯೂರಪ್ಪ ಅವರು ಸಾರ್ವಜನಿಕ ಜಾಗದಲ್ಲಿದ್ದರೂ ತಮ್ಮ ಖುಷಿಯನ್ನು ಹಂಚಿಕೊಳ್ಳುವಲ್ಲಿ ಹಿಂದೆ ಬೀಳುವುದಿಲ್ಲ. ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಅವರು ಮಹಿಳೆಯೊಬ್ಬರ ಕೊರಳಲ್ಲಿದ್ದ ನೆಕ್ಲೇಸನ್ನು ಕೈಯಿಂದ ಎತ್ತಿ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದು ಗಮನ ಸೆಳೆದಿತ್ತು.
ಇದನ್ನೂ ಓದಿ: Karnataka Election 2023: ಶಿಕಾರಿಪುರದಲ್ಲಿ ಬಿ.ವೈ. ವಿಜಯೇಂದ್ರ ನಾಮಪತ್ರ ಸಲ್ಲಿಕೆ; ಊರ ಹಬ್ಬದಂತೆ ಸಂಭ್ರಮಿಸಿದ ಜನ