Site icon Vistara News

ಸಿದ್ದರಾಮೋತ್ಸವ ಎಫೆಕ್ಟ್‌ ಕಡೆಗಣಿಸುವಂತಿಲ್ಲ; ಅಮಿತ್‌ ಶಾಗೆ ಯಡಿಯೂರಪ್ಪ ರಿಪೋರ್ಟ್

BSY Amit shah

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಸುಮಾರು ೧೫ ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ವೇಳೆ ಬಿಎಸ್‌ವೈ ಅವರು ಬುಧವಾರ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕುರಿತ ಪ್ರಾಥಮಿಕ ವರದಿಯನ್ನು ಒಪ್ಪಿಸಿದರೆಂದು ಹೇಳಲಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಕಡೆಗಣಿಸುವಂತಿಲ್ಲ, ಸಿದ್ದರಾಮೋತ್ಸವದ ಪರಿಣಾಮಗಳನ್ನು ಅವಗಣಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಗೊತ್ತಾಗಿದೆ.

ರಾಜ್ಯಕ್ಕೆ ಅಗಮಿಸಿರುವ ಅಮಿತ್‌ ಶಾ ಅವರು ರಾಜಕೀಯ ಪರಿಸ್ಥಿತಿಯ ಅವಲೋಕನಕ್ಕಾಗಿಯೇ ತಾವಿರುವ ಹೋಟೆಲ್‌ಗೆ ಯಡಿಯೂರಪ್ಪ ಅವರನ್ನು ಕರೆಸಿಕೊಂಡಿದ್ದರು ಎನ್ನಲಾಗಿದೆ. ಈ ವೇಳೆ ಸಿದ್ದರಾಮೋತ್ಸವ, ಹಿಂದೂ ಕಾರ್ಯಕರ್ತರ ಹತ್ಯೆ, ಬಿಜೆಪಿ ಕಾರ್ಯಕರ್ತರ ಆಕ್ರೋಶ, ಮುಂದಿನ ಚುನಾವಣೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆದವು ಎಂದು ತಿಳಿದುಬಂದಿದೆ.

ಸಿದ್ದರಾಮೋತ್ಸವವು ಈ ಬಾರಿಯ ಚುನಾವಣೆಯ ದಿಕ್ಕನ್ನು ತೋರಿಸಿದೆ. ಈ ಬಾರಿ ಇಂಥ ಮಾಸ್‌ ಪ್ರಚಾರಗಳು ದೊಡ್ಡ ಮಟ್ಟದಲ್ಲಿ ನಡೆಯಲಿವೆ ಎಂದು ಅಮಿತ್‌ ಶಾ ಅವರಿಗೆ ವಿವರಣೆ ನೀಡಿದರೆನ್ನಲಾಗಿದೆ.

ದಾವಣಗೆರೆ ಸಮಾವೇಶದಲ್ಲಿ ಇಷ್ಟೊಂದು ಜನ ಭಾಗವಹಿಸುವ ಬಗ್ಗೆ ಸ್ವತಃ ಕಾಂಗ್ರೆಸ್‌ ಕೂಡಾ ನಿರೀಕ್ಷೆ ಮಾಡಿರಲಿಲ್ಲ. ಸಿದ್ದರಾಮಯ್ಯ ಅವರ ಮಾಸ್‌ ಇಮೇಜ್‌ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದೆ. ರಾಜ್ಯದ ಎಲ್ಲ ಕಡೆಗಳಿಂದ ಜನರು ಬಂದಿದ್ದಾರೆ. ಹೀಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಜತೆಗೂಡಿ ದೊಡ್ಡ ಮಟ್ಟದ ಪ್ರಚಾರ ನಡಸಿದರೆ ಅವರನ್ನು ಎದುರಿಸಲು ಬಿಜೆಪಿಗೆ ಕಷ್ಟವಾಗಲಿದೆ ಎಂದು ಯಡಿಯೂರಪ್ಪ ಅವರು ವಿವರಣೆ ನೀಡಿದರೆಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಮತ್ತು ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆಸುವ ತಂತ್ರಗಾರಿಕೆಯನ್ನು ಎದುರಿಸಲು ಈಗಿನಿಂದಲೇ ಸಿದ್ದರಾಗಬೇಕು. ಇದಕ್ಕೆ ಪರ್ಯಾಯ ರಾಜಕೀಯ ತಂತ್ರಗಾರಿಕೆಯ ಅವಶ್ಯಕತೆ ಇದೆ ಎಂದು ಅವರು ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ. ಸಿದ್ದರಾಮೋತ್ಸವಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯ ಘಟಕ, ರಾಜ್ಯಾಧ್ಯಕ್ಷರು ವಿವರಣೆ ನೀಡುವ ಮೊದಲೇ ಯಡಿಯೂರಪ್ಪ ಪ್ರಾಥಮಿಕ ವರದಿ ನೀಡಿರುವುದು ಗಮನಾರ್ಹ. ರಾಜ್ಯ ಬಿಜೆಪಿಯಲ್ಲಿ ತಮ್ಮನ್ನು ಬಿಟ್ಟರೆ ಸಿದ್ದರಾಮಯ್ಯ ಲೆವೆಲ್‌ನ ನಾಯಕರು ಇಲ್ಲ ಎಂಬ ಅಂಶವನ್ನು ಅವರು ಬೇರೆ ರೂಪದಲ್ಲಿ ಅಮಿತ್‌ ಶಾ ಅವರಿಗೆ ದಾಟಿಸಿದರು ಎನ್ನಲಾಗಿದೆ.

ದಕ್ಷಿಣ ಕನ್ನಡದ ಸುಳ್ಯದಲ್ಲಿ ನಡೆದ ಪ್ರವೀಣ್‌ ನೆಟ್ಟಾರು ಹತ್ಯೆ, ಬಳಿಕ ನಡೆದ ಕಾರ್ಯಕರ್ತರ ಪ್ರತಿಭಟನೆ, ರಾಜೀನಾಮೆಗಳ ಬಗ್ಗೆಯೂ ಅವರು ಅಮಿತ್‌ ಶಾ ಅವರಿಗೆ ಸಂಕ್ಷಿಪ್ತ ಮಾಹಿತಿ ನೀಡಿದರು ಎನ್ನಲಾಗಿದೆ. ಯಡಿಯೂರಪ್ಪ ಅವರ ಎಲ್ಲ ಮಾತುಗಳನ್ನು ಅತ್ಯಂತ ಜತನದಿಂದ ಅಮಿತ್‌ ಶಾ ಆಲಿಸಿದರು ಎಂದು ತಿಳಿದಬಂದಿದೆ.

ಎಲ್ಲ ರಾಜಕೀಯ ವಿಚಾರಗಳು, ಸೂಕ್ಷ್ಮಗಳ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸೋಣ, ದೆಹಲಿ‌ ಮಟ್ಟದಲ್ಲೂ ಚರ್ಚೆ ಆಗಲಿದೆ ಎಂದಷ್ಟೇ ಅಮಿತ್‌ ಶಾ ಹೇಳಿದರು ಎನ್ನಲಾಗಿದೆ.

ಇದನ್ನೂ ಓದಿ Amit Shah in state | ಪ್ರವೀಣ್‌ ನೆಟ್ಟಾರು ಹತ್ಯೆ, ಪ್ರತಿಭಟನೆಗಳಿಂದ ಬಿಜೆಪಿಗೆ ಭಾರಿ ಡ್ಯಾಮೇಜ್‌, ಅಮಿತ್‌ ಶಾ ಕಿಡಿ

Exit mobile version