Site icon Vistara News

ಯಡಿಯೂರಪ್ಪ ಅವರನ್ನೊಮ್ಮೆ ನೋಡ್ಬೇಕು ಅಂದಿದ್ರಂತೆ ಬಿ.ಬಿ ಶಿವಪ್ಪ ಪತ್ನಿ: ಆರೋಗ್ಯ ವಿಚಾರಿಸಿದ ಬಿಎಸ್‌ವೈ

BB Shivappa

ಸಕಲೇಶಪುರ: ಬಿಜೆಪಿ ಕೇಂದ್ರೀಯ ಸಲಹಾ ಮಂಡಳಿಯ ಸದಸ್ಯರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ಸೋಮವಾರ ಸಕಲೇಶಪುರಕ್ಕೆ ಭೇಟಿ ನೀಡಿ ಬಿಜೆಪಿ ನಾಯಕ ದಿವಂಗತ ಬಿ.ಬಿ. ಶಿವಪ್ಪ ಅವರ ಪತ್ನಿ ಸುಶೀಲಮ್ಮ ಅವರ ಆರೋಗ್ಯ ವಿಚಾರಿಸಿದರು.

ಯಡಿಯೂರಪ್ಪ ಮತ್ತು ಬಿ.ಬಿ. ಶಿವಪ್ಪ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ, ಬೆಳೆಸಿದ ಕಟ್ಟಾಳುಗಳಾಗಿದ್ದರು. ೧೯೮೫ರ ಅಸೆಂಬ್ಲಿ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಬಿಜೆಪಿ ಚಿನ್ಹೆಯಿಂದ ಗೆದ್ದ ಇಬ್ಬರೇ ಶಾಸಕರು ಇವರು. ಬಿ.ಬಿ. ಶಿವಪ್ಪ ಅವರು ೨೦೧೭ರಲ್ಲಿ ನಿಧನರಾಗಿದ್ದರು.
ಈ ನಡುವೆ ಶಿವಪ್ಪ ಅವರ ಪತ್ನಿ ಸುಶೀಲಮ್ಮ ಅನಾರೋಗ್ಯಕ್ಕೆ ಒಳಗಾಗಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಂಬ್ರಹಳ್ಳಿ ಗ್ರಾಮದಲ್ಲಿನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ೯೪ ವರ್ಷದ ಸುಶೀಲಮ್ಮ ಇತ್ತೀಚೆಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಇದನ್ನು ಯಡಿಯೂರಪ್ಪ ಅವರಿಗೆ ತಿಳಿಸಲಾಗಿತ್ತು.

ವಿಷಯ ತಿಳಿಯುತ್ತಿದ್ದಂತೆಯೇ ಯಡಿಯೂರಪ್ಪ ಅವರು ಅತ್ಯಂತ ಕಾಳಜಿಯಿಂದ ಅಲ್ಲಿಗೆ ತೆರಳಿದರು. ಮನೆಗೆ ಭೇಟಿ ನೀಡಿ ಸುಶೀಲಮ್ಮ ಅವರು ಮಲಗಿದ್ದ ಮಂಚದ ಪಕ್ಕದಲ್ಲೇ ಕುಳಿತು, ಅವರ ಕೈ ಹಿಡಿದು ಆರೋಗ್ಯದ ಬಗ್ಗೆ ವಿಚಾರಿಸಿದರು ಯಡಿಯೂರಪ್ಪ. ಒಂದು ಕಾಲದಲ್ಲಿ ತಾವು ಮನೆಗೆ ಬಂದಾಗ ತಾಯಿಯಂತೆ ಅಡುಗೆ ಬಡಿಸಿದ್ದನ್ನು, ಅಕ್ಕನಂತೆ ಉಪಚರಿಸಿದ್ದನ್ನು ಯಡಿಯೂರಪ್ಪ ನೆನೆದರು.

ರಾಜ್ಯದಲ್ಲಿ ಬಿಜೆಪಿ ಅಷ್ಟೇನೂ ಗಟ್ಟಿ ನೆಲೆ ಹೊಂದಿಲ್ಲದೆ ಇದ್ದ ಕಾಲದಲ್ಲಿ ಪಕ್ಷವನ್ನು ಬೆಳೆಸಿದವರು ಬಿ.ಬಿ. ಶಿವಪ್ಪ ಅವರು. ಅವರು ೧೯೮೩ರಿಂದ ೧೯೮೮ರವರೆಗೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರು. ರಾಜ್ಯದಲ್ಲಿ ಬಿಜೆಪಿ ಕಟ್ಟಲು ಯಡಿಯೂರಪ್ಪ ಅವರ ಜೊತೆ ಕೈಜೋಡಿಸಿದ್ದರು ಶಿವಪ್ಪ. ೧೯೮೫, ೧೯೯೪ರಲ್ಲಿ ವಿಧಾನಸಭೆಯಲ್ಲಿ ಶಾಸಕರಾಗಿದ್ದ ಅವರು ೨೦೧೩ರಲ್ಲಿ ಎಂಎಲ್‌ಸಿ ಆಗಿದ್ದರು. ೨೦೧೩ರಲ್ಲಿ ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಬೆಂಗಾವಲಾಗಿ ನಿಂತಿದ್ದರು.

Exit mobile version