Site icon Vistara News

Karnataka Election: ಬಿಟಿಎಂ ಲೇಔಟ್‌ ಗಲಾಟೆ; ಬಿಜೆಪಿ ಕಾರ್ಯಕರ್ತನಿಗೆ ಐಸಿಯುನಲ್ಲಿ ಚಿಕಿತ್ಸೆ: ತಪ್ಪಿತಸ್ಥರ ಬಂಧನಕ್ಕೆ ಪಟ್ಟು

BTM Layout Ruckus BJP worker treated in ICU Arrest of culprits demanded Karnataka Election updates

ಬೆಂಗಳೂರು: ನಗರದ ಬಿಟಿಎಂ ಲೇಔಟ್‌ನ ಒಂದನೇ ಹಂತದಲ್ಲಿ ವಿಧಾನಸಭಾ ಚುನಾವಣೆ (Karnataka Election) ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತ ಹರಿನಾಥ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆನ್ನಲಾದ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತಪ್ಪಿತಸ್ಥರನ್ನು ಬಂಧಿಸುವಂತೆ ಬಿಜೆಪಿ ಕಾರ್ಯಕರ್ತರು ಮಡಿವಾಳ ಪೊಲೀಸ್‌ ಠಾಣೆ ಎದುರು ಭಾನುವಾರ ರಾತ್ರಿ ಇಡೀ ಪ್ರತಿಭಟನೆ ನಡೆಸಿದ್ದಾರೆ. ಇದೀಗ ಸೋಮವಾರ ಕಾಂಗ್ರೆಸ್‌ ಕಾರ್ಯಕರ್ತರೂ ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ಏನಿದು ಘಟನೆ?

ಭಾನುವಾರ ರಾತ್ರಿ ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ಅವರ ಪರ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾಗ, ಕಾಂಗ್ರೆಸ್ ಕಾರ್ಯಕರ್ತರು ಎದುರಾಗಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಶುರುವಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಹರಿನಾಥ್ ಎಂಬುವವರ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಈಗ ಆರೋಪ ಮಾಡಲಾಗಿದೆ. ಹಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಹರಿನಾಥ್‌ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಮಡಿವಾಳ ಪೊಲೀಸ್ ಠಾಣೆಗೆ ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ಪುತ್ರ ಹಾಗೂ ಕಾರ್ಯಕರ್ತರು ದೂರು ನೀಡಿದ್ದಾರೆ. ಅಲ್ಲದೆ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದು, ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿದ್ದಾರೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹರಿನಾಥ್‌ ಅವರ ಆರೋಗ್ಯ ವಿಚಾರಿಸಿದ ಸಂಸದ ತೇಜಸ್ವಿ ಸೂರ್ಯ.

ಇದನ್ನೂ ಓದಿ: SSLC Result 2023 : 625 ಕ್ಕೆ 625 ಅಂಕ ಪಡೆದ ನಾಲ್ವರು ಸಾಧಕರು ಇವರು

ಸಂಸದ ತೇಜಸ್ವಿ ಸೂರ್ಯ ಗರಂ

ಈ ಘಟನೆಯನ್ನು ಖಂಡಿಸಿರುವ ಸಂಸದ ತೇಜಸ್ವಿ ಸೂರ್ಯ ಮಡಿವಾಳ ಪೊಲೀಸ್​ ಠಾಣೆಗೆ ಆಗಮಿಸಿ ಪೊಲೀಸರು ಆರೋಪಿಗಳನ್ನು ಬಂಧಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದರು. ಆರೋಪಿಗಳ ಬಂಧನಕ್ಕಾಗಿ ಪಟ್ಟು ಹಿಡಿದಿದ್ದ ಸಂಸದರ ಬಳಿ ಖುದ್ದು ಡಿಸಿಪಿ ಸಿ.ಕೆ. ಬಾಬ ಅವರು ಬಂದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಅಭ್ಯರ್ಥಿ ಶ್ರೀಧರ ರೆಡ್ಡಿ ಸ್ಥಳದಿಒಂದ ತೆರಳಿದ್ದರು.

ಆರೋಪಿಗಳ ಬಂಧನಕ್ಕೆ ಪಟ್ಟು

ಮಾಜಿ‌ ಮೇಯರ್ ಮಂಜುನಾಥ್ ರೆಡ್ಡಿ ಹಾಗೂ ಸಹಚರರು ಹಲ್ಲೆ ನಡೆಸಿದ್ದಾರೆಂದು ಆರೋಪ ಮಾಡಿರುವ ಬಿಜೆಪಿ ಕಾರ್ಯಕರ್ತರು, ಅವರನ್ನು ತಕ್ಷಣವೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದಿದೆ. ರಾತ್ರಿಯಿಡಿ ಠಾಣೆ ಮುಂದೆ ಕುಳಿತು ಧರಣಿ ನಡೆಸಿದ್ದು, ಬಂಧನ ಆಗುವವರೆಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದೆ.

ಕಾಂಗ್ರೆಸ್‌ನಿಂದ ಕೀಳು ಮಟ್ಟದ ರಾಜಕೀಯ- ಶ್ರೀಧರ್‌ ರೆಡ್ಡಿ

ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಅವರ ಪುತ್ರ ಲಿತೇಶ್ ರೆಡ್ಡಿ ಸೇರಿದಂತೆ ಒಂದಿಷ್ಟು ಕಾರ್ಯಕರ್ತರು ಹರಿನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಎಲೆಕ್ಷನ್‌ ಕೊನೇ ಸಮಯದಲ್ಲಿ ಕೀಳು ಮಟ್ಟದ ರಾಜಕೀಯ ಮುಖಾಂತರ ಹೆದರಿಸುವ ಯತ್ನವನ್ನು ಮಾಡುತಿದ್ದಾರೆ.. ಬಿಜೆಪಿ ಕಾರ್ಯಕರ್ತ ಹರಿನಾಥ್‌ಗೆ ಹಲ್ಲೆಯಾಗಿದ್ದು, ಇದರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಬಿಟಿಎಂ ಲೇಔಟ್ ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ಗುಡುಗಿದ್ದಾರೆ.

ಕಾಂಗ್ರೆಸ್‌ ಪ್ರತಿಭಟನೆ

ಬಿಜೆಪಿ ಆರೋಪದ ಬೆನ್ನಲ್ಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆಗೆ ಸಿದ್ಧತೆ ನಡೆದಿದ್ದು, ನೂರಾರು ಕಾರ್ಯಕರ್ತರು ಮಡಿವಾಳ ಪೊಲೀಸ್‌ ಠಾಣೆ ಎದುರು ಜಮಾಯಿಸಿ ಪ್ರತಿಭಟನೆಗೆ ನಿರ್ಧಾರ ಮಾಡಿದ್ದಾರೆ. ಪೊಲೀಸ್ ಇಲಾಖೆ ಸಂಪೂರ್ಣ ಬಿಜೆಪಿ ಪರ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ. ಬಿಜೆಪಿ ವಿರುದ್ಧವಾಗಿ ಘೋಷಣೆ ಕೂಗಿದ್ದಾರೆ.

ಚುನಾವಣಾ ಅಧಿಕಾರಿಗಳಿಗೆ ದೂರು ಕೊಡುತ್ತೇವೆ- ರಾಮಲಿಂಗಾ ರೆಡ್ಡಿ

ಬಿಟಿಎಂ ಲೇಔಟ್ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಹರಿನಾಥ್‌ಗೆ ನಮ್ಮವರು ಹಲ್ಲೆ ಮಾಡಿಲ್ಲ. ಆತ ತಪ್ಪಿಸಿಕೊಂಡು ಓಡುವಾಗ ಜಾರಿ ಬಿದ್ದು ಗಾಯವಾಗಿದೆ. ಹರಿನಾಥ್ ಈ‌ ಹಿಂದೆ ಜೈಲಿಗೆ ಹೋಗಿ ಬಂದಿರುವ ವ್ಯಕ್ತಿ. ಯಾವ್ ಕೇಸಲ್ಲಿ ಅನ್ನೋದು ಎಲ್ಲರಿಗೂ ಗೊತ್ತಿದೆ‌. ಭಾನುವಾರ ರಾತ್ರಿ ಏಳೂವರೇ ಸುಮಾರಿಗೆ ಬಿಟಿಎಂ ಲೇಔಟ್‌ನಲ್ಲಿ ಹಣ ಹಂಚುತ್ತಿದ್ದರು. ಈ ವೇಳೆ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಹೋಗಿದ್ದಾರೆ. ಆಗ ಎರಡೂ ಕಡೆ ಕಾರ್ಯಕರ್ತರು, ಗಲಾಟೆ ಮಾಡಿಕೊಂಡಿದ್ದಾರೆ. ಹರಿನಾಥ್‌ಗೆ ಯಾರೂ ಹೊಡೆದಿಲ್ಲ. ಅವರೇ ಓಡುವಾಗ ಕೆಳಗೆ ಬಿದ್ದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: FAME II sops : ಓಲಾ ಸೇರಿ 4 ಇ-ಸ್ಕೂಟರ್‌ ಕಂಪನಿಗಳಿಗೆ 500 ಕೋಟಿ ರೂ. ಸಬ್ಸಿಡಿ, ಗ್ರಾಹಕರಿಗೆ ಏನೇನು ಲಾಭ?

ಸಂಸದ ತೇಜಸ್ವಿ ಸೂರ್ಯ ಪ್ರಭಾವ ಬಳಸಿ ಕೇಸ್ ಮಾಡಿಸಿದ್ದಾರೆ. ರಾತ್ರಿ ಮೂರು ಗಂಟೆಗೆ ಡಿಸಿಪಿಯನ್ನು ಕರೆಸಿ ಒತ್ತಡ ಹಾಕಿ ಕೇಸ್ ಮಾಡಿಸಿದ್ದಾರೆ. ಚಿಕ್ಕ ಗಾಯವಾಗಿದೆ ಅಷ್ಟೇ, ಅದಕ್ಕೆ ಐಸಿಯೂಗೆ ಹಾಕಿ ಅಂತಾ ಒತ್ತಾಯ ಮಾಡಿ, ಆಸ್ಪತ್ರೆಯಲ್ಲಿ ಉಳಿಸಿಕೊಂಡಿದ್ದಾರೆ. ನಾವು ಸಹ ದೂರು ಕೊಟ್ಟಿದ್ದೇವೆ. ಅದನ್ನು ಎಫ್‌ಐಆರ್ ಮಾಡಿಲ್ಲ. ಚುನಾವಣಾ ಅಧಿಕಾರಿಗಳಿಗೆ ದೂರು ಕೊಡುತ್ತೇವೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Exit mobile version