Site icon Vistara News

Karnataka Election: ಬಿಟಿಎಂ ಲೇಔಟ್‌ ಗಲಾಟೆ; ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ ಶ್ರೀಧರ್‌ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ

BTM Layout Ruckus Sridhar Reddy leads protest demanding arrest of culprits Karnataka Election updates

ಬೆಂಗಳೂರು: ನಗರದ ಬಿಟಿಎಂ ಲೇಔಟ್‌ನ ಒಂದನೇ ಹಂತದಲ್ಲಿ ವಿಧಾನಸಭಾ ಚುನಾವಣೆ (Karnataka Election) ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತ ಹರಿನಾಥ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆನ್ನಲಾದ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತಪ್ಪಿತಸ್ಥರನ್ನು ಬಂಧಿಸುವಂತೆ ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಧರ ರೆಡ್ಡಿ ನೇತೃತ್ವದಲ್ಲಿ ಮಡಿವಾಳ ಠಾಣೆ ಮುಂದೆ ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಸಾಥ್‌ ನೀಡಿದ್ದಾರೆ.

ಬಿಜೆಪಿ‌ ಕಾರ್ಯಕರ್ತರು ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಸಂಸದ ತೇಜಸ್ವಿ ಸೂರ್ಯ ಆಗಮಿಸಿದ್ದು, ಎಫ್ಐಆರ್ ಆದರೂ ಆರೋಪಿಗಳನ್ನು ಬಂಧಿಸದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಯಾವ ಬೂತ್‌ನಲ್ಲಿ ಮತ ಹಾಕಬೇಕು? ರೂಟ್‌ ಯಾವುದು? ಎಲ್ಲ ಮಾಹಿತಿಗೂ ಇದೊಂದು App ಸಾಕು

ಮಡಿವಾಳ ಪೊಲೀಸ್‌ ಠಾಣೆ ಎದುರು ಶ್ರೀಧರ ರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ

ಆರೋಪಿಗಳನ್ನು ಬಂಧಿಸುವವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿರುವ ಬಿಜೆಪಿಗರು ನಿರ್ಧಾರವನ್ನು ಕೈಗೊಂಡಿದ್ದು, ಠಾಣೆ ಎದುರೇ ಕುಳಿತು ಆಕ್ರೋಶವನ್ನು ಹೊರಹಾಕಿದ್ದಾರೆ.

ಮಡಿವಾಳ ಪೊಲೀಸ್‌ ಠಾಣೆ ಎದುರು ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಬಿಜೆಪಿ ಕಾರ್ಯಕರ್ತರು

ಈ ವೇಳೆ ಮಾತನಾಡಿದ ಅಣ್ಣಾಮಲೈ, ಹಿರಿಯ ಅಧಿಕಾರಿಗಳು ಬರುವವರೆಗೂ ಧರಣಿಯನ್ನು ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ಯಾವುದೇ ಕಾರಣಕ್ಕೂ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮತದಾನಕ್ಕೆ ಇನ್ನು ಎರಡು ದಿನ ಮಾತ್ರವೇ ಬಾಕಿ ಇದೆ. ಇಷ್ಟರಲ್ಲಿ ಕಾಂಗ್ರೆಸ್‌ನವರು ದಬ್ಬಾಳಿಕೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಮಡಿವಾಳ ಠಾಣೆಗೆ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಚಂದ್ರಶೇಖರ್ ಭೇಟಿ ನೀಡಿ ಅಹವಾಲನ್ನು ಆಲಿಸಿದರು. ಅಲ್ಲದೆ, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರ ಕ್ರಮ ವಹಿಸಲಾಗುವುದು ಎಂದು ಸಮಾಧಾನಪಡಿಸಲು ಮುಂದಾದರು. ಆದರೆ, ಇದಕ್ಕೆ ಬಗ್ಗದ ಬಿಜೆಪಿ ಮುಖಂಡರು ಆರೋಪಿಗಳನ್ನು ಬಂಧಿಸುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಏನಿದು ಘಟನೆ?

ಭಾನುವಾರ ರಾತ್ರಿ ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ಅವರ ಪರ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾಗ, ಕಾಂಗ್ರೆಸ್ ಕಾರ್ಯಕರ್ತರು ಎದುರಾಗಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಶುರುವಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಹರಿನಾಥ್ ಎಂಬುವವರ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಈಗ ಆರೋಪ ಮಾಡಲಾಗಿದೆ. ಹಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಹರಿನಾಥ್‌ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಮಡಿವಾಳ ಪೊಲೀಸ್ ಠಾಣೆಗೆ ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ಪುತ್ರ ಹಾಗೂ ಕಾರ್ಯಕರ್ತರು ಭಾನುವಾರ ರಾತ್ರಿಯೇ ದೂರು ನೀಡಿದ್ದರು. ಅಲ್ಲದೆ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದು, ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿದ್ದರು. ಆದರೆ, ಸಂಜೆಯಾದರೂ ಬಂಧಿಸದೇ ಇದ್ದ ಕಾರಣ ಪುನಃ ಶ್ರೀಧರ ರೆಡ್ಡಿ ನೇತೃತ್ವದಲ್ಲಿ ಮಡಿವಾಳ ಠಾಣೆ ಮುಂದೆ ಪ್ರತಿಭಟನೆ ಮಾಡಲಾಗಿದೆ.

ಇದನ್ನೂ ಓದಿ: Karnataka Election 2023: ಬಹಿರಂಗ ಪ್ರಚಾರ ಅಂತ್ಯ; ಕಣ ರಂಗೇರಿಸಿದ ಅತಿರಥ, ಮಹಾರಥರ ಕ್ಯಾಂಪೇನ್!

ಶ್ರೀಧರ್‌ ರೆಡ್ಡಿ ಕಿಡಿಕಿಡಿ

ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಅವರ ಪುತ್ರ ಲಿತೇಶ್ ರೆಡ್ಡಿ ಸೇರಿದಂತೆ ಕೆಲವು ಕಾರ್ಯಕರ್ತರು ಹರಿನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಇದು ಕೀಳು ಮಟ್ಟದ ರಾಜಕೀಯವಾಗಿದೆ. ನಮ್ಮನ್ನು ಹೆದರಿಸುವ ಯತ್ನವನ್ನು ಕಾಂಗ್ರೆಸ್‌ನವರು ಮಾಡುತಿದ್ದಾರೆ. ಬಿಜೆಪಿ ಕಾರ್ಯಕರ್ತ ಹರಿನಾಥ್‌ಗೆ ಹಲ್ಲೆಯಾಗಿದ್ದು, ಇದರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ. ಆದರೆ, ಇದುವರೆಗೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ. ನಮಗೆ ನ್ಯಾಯ ಬೇಕು ಎಂದು ಬಿಟಿಎಂ ಲೇಔಟ್ ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ಗುಡುಗಿದ್ದಾರೆ.

Exit mobile version