ಬೆಂಗಳೂರು: ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ( Budget 2023) ಕರ್ನಾಟಕವನ್ನು ಕಡೆಗಣಿಸಿದೆ ಎಂಬ ಪ್ರತಿಪಕ್ಷ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮೇಕೆ ದಾಟು ಯೋಜನೆ ವಿವಾದದಲ್ಲಿ ಸಿಲುಕಿರುವುದು ಕಾಂಗ್ರೆಸ್ ಸರ್ಕಾರದ ತಪ್ಪಿನಿಂದಾಗಿ ಎಂದಿದ್ದಾರೆ. ರಾಜ್ಯದ ಅವಶ್ಯಕತೆಗಳಿಗೆ ತಕ್ಕಂತೆ ಕೇಂದ್ರ ಸರ್ಕಾರವು ಹಣ ಒಡಗಿಸಿದೆ ಎಂದಿದ್ದಾರೆ.
ಬಜೆಟ್ ಕುರಿತು ವಿಧಾನಸೌದದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ಕೃಷಿಗೆ ಹೆಚ್ಚು ಹಣ ನೀಡಬೇಕು ಎಂಬ ಬೇಡಿಕೆ ನಮ್ಮಿಂದ ಇತ್ತು. ಗ್ರಾಮೀಣ ಮೂಲಸೌಕರ್ಯಕ್ಕೆ ಒತ್ತು ನೀಡಬೇಕು ಎಂದು ಕೇಳಿದ್ದೆವು. ಅದೇ ರೀತಿ ಯುವಕರಿಗೆ ಕೌಶಲ್ಯ ಹಾಗೂ ರೈಲ್ವೆ ಯೋಜನೆಗಳಿಗೆ ಒತ್ತು ನೀಡಿದ್ದೆವು. ಇದೆಲ್ಲದಕ್ಕೂ ಕೇಂದ್ರ ಸರ್ಕಾರ ಹೆಚ್ಚಿನ ಹಣ ನೀಡಿದೆ. ಅನೇಕ ಕೇಂದ್ರ ಯೋಜನೆಗಳಿಗೆ ಹೊಂದಾಣಿಕೆ ಹಣವನ್ನು ನಾವು ಕೊಡಬೇಕು. ಈ ಸವಾಲಿನ ಕುರಿತು ನಾವು ಬಜೆಟ್‌ನಲ್ಲಿ ಗಮನ ಹರಿಸುತ್ತೇವೆ ಎ ದರು.
ನರೇಗಾಕ್ಕೆ ಹಣ ಕಡಿಮೆ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಎಲ್ಲ ಯೋಜನೆಗಳಿಗೂ ಒಂದು ಜೀವನಚಕ್ರ ಇರುತ್ತದೆ. ವಾಜಪೇಯಿ ಅವರ ಕಾಲದಲ್ಲಿ ಸರ್ವ ಶಿಕ್ಷಾ ಅಭಿಯಾನ ನಡೆಯಿತು. ಈಗ ಮಾಧ್ಯಮ ಶಿಕ್ಷಣ ಅಭಿಯಾನ ನಡೆಯುತ್ತಿದೆ. ಹಾಗೆಂದು ನರೇಗಾ ಅನುದಾನ ಬಹಳಷ್ಟು ಕಡಿಮೆ ಆಗಿಲ್ಲ. ನಮ್ಮ ಯೋಜನೆಗಳನ್ನು ನರೇಗಾ ಜತೆಗೆ ಹೊಂದಿಸಿ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶ ಮೂಲಸೌಕರ್ಯಕ್ಕೆ ತೊಂದರೆ ಆಗುವುದಿಲ್ಲ ಎಂದು ಹೇಳಿದರು.
ರಾಜ್ಯಕ್ಕೆ ಯಾವುದೂ ಉಪನಗರವನ್ನು ಘೋಷಣೆ ಮಾಡಿಲ್ಲ ಎಂಬ ಕುರಿತು ಪ್ರತಿಕ್ರಿಯಿಸಿ, ಉಪನಗರ ಮಾಡುವುದು ರಾಜ್ಯದ ವಿಚಾರ. ಮೆಟ್ರೊ ಮೂರನೇ ಹಂತಕ್ಕೆ 23 ಸಾವಿರ ಕೋಟಿ ರೂ. ಅನುಮೋದನೆ ಸಿಕ್ಕಿದೆ. ಮುಂದಿನ ಹಂತಕ್ಕೆ ಪ್ರಸ್ತಾವನೆ ಕಳಿಸುತ್ತೇವೆ. ನಾಲ್ಕನೇ ಹಂತಕ್ಕೆ ಡಿಪಿಆರ್ ಮಾಡುತ್ತಿದ್ದೇವೆ. ಬಿಡದಿ, ರಾಮನಗರದಂತಹ ನಗರಗಳಿಗೆ ವಿಸ್ತರಣೆ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ : Union Budget 2023 ವಿಸ್ತಾರ ಸಮಗ್ರ : ಆರ್ಥಿಕ ಶಿಸ್ತಿಗಾಗಿ ರಕ್ಷಣಾತ್ಮಕ ಆಟ, ಆದಾಯ ತೆರಿಗೆಯ ಜೂಟಾಟ
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಒದಗಿಸಿರುವುದು ಕನ್ನಡಿಯೊಳಗಿನ ಗಂಟು ಎಂದಿರುವ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿ, ಬಜೆಟ್ ಬಗ್ಗೆ ಹಾಗೂ ಹಣಕಾಸಿನ ಅನುಭವ ಇದ್ದವರು ಹೀಗೆ ಮಾತನಾಡುವುದಿಲ್ಲ. ಮೇಕೆ ದಾಟು ಯೋಜನೆ ಆರಂಭಿಸುವಾಗ ಪ್ರಕ್ರಿಯೆಯಲ್ಲಿ ತಪ್ಪು ಮಾಡುತ್ತಿದ್ದೀರ ಎಂದು ಹೇಳಿದೆವು. ಆದರೆ ಕಾಂಗ್ರೆಸ್ ಸರ್ಕಾರ ಆರಂಭ ಮಾಡುವಾಗಲೇ ತಪ್ಪು ಮಾಡಿದ್ದರಿಂದ ಈಗ ವಿವಾದದಲ್ಲಿ ಸಿಲುಕಿಕೊಂಡಿದೆ. ಈಗ ಸುಪ್ರೀಂಕೋರ್ಟ್‌ನಲ್ಲಿ ಸಿಕ್ಕಿಕೊಂಡಿದೆ. ಸುಪ್ರೀಂಕೋರ್ಟ್‌ನಿಂದ ಹಸಿರು ನಿಶಾನೆ ಸಿಕ್ಕರೆ ಕೆಲಸ ಮಾಡೋಣ ಎಂದು ಹಣಕಾಸಿನ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಮಾರ್ಚ್‌ನಲ್ಲಿ ವಿಚಾರಣೆ ಇದೆ, ಅದರಲ್ಲಿ ಅನುಮತಿ ಸಿಕ್ಕರೆ ಮುಂದುವರಿಯುತ್ತೇವೆ. ಈ ಬಜೆಟ್‌ನಿಂದ ರಾಜ್ಯಕ್ಕೆ ಇಷ್ಟೇ ಹಣ ಲಭಿಸುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಇನ್ನೂ ಪೂರ್ಣ ವಿವರ ಸಿಕ್ಕ ನಂತರ ತಿಳಿಯುತ್ತದೆ. ನಮ್ಮ ಸರ್ಕಾರದ ಆದ್ಯತೆ ಕ್ಷೇತ್ರಗಳಿಗೆ ಹಣ ಲಭಿಸಿದೆ ಎಂದರು.
ಮೂಗಿಗೆ ತುಪ್ಪ ಸವರಿದ್ದಾರೆ ಎಂಬ ಪ್ರತಿಪಕ್ಷದ ಟೀಕೆ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಎಷ್ಟು ಜನರ ಮೂಗಿಗೆ ತುಪ್ಪ ಸುರಿದಿದ್ದಾರೆ ಎನ್ನುವುದನ್ನು ಜನರು ತಿಳಿದ ನಂತರವೇ ಅವರನ್ನು ಮನೆಗೆ ಕಳಿಸಿದ್ದಾರೆ ಎಂದು ತಿರುಗೇಟು ನೀಡಿದರು.