Site icon Vistara News

Budget 2023 : ಇದು ಬಾಂಬೆ ಪಿಕ್ಚರ್‌ ಎಂದ ಕಾಂಗ್ರೆಸ್‌, ಅಮೃತ ಬಜೆಟ್‌ ಎಂದ ಬಿಜೆಪಿ: ಕೇಂದ್ರ ಬಜೆಟ್‌ ಕುರಿತು ಪ್ರತಿಕ್ರಿಯೆಗಳು ಇಲ್ಲಿವೆ

budget-2023-reactions from politicians

ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಭದ್ರಾ ಮೇಲ್ದಂಡೆ ಯೋಜನೆಯು ಕರ್ನಾಟಕದ ಪ್ರಮುಖ ನೀರಾವರಿ ಯೋಜನೆ. ಮಧ್ಯ ಕರ್ನಾಟಕದ ಬರಗಾಲ ಪೀಡಿತ, ಬಿಸಿಲು ಪ್ರದೇಶದ ನಾಡಿಗೆ ಒಂದು ಲಕ್ಷಕ್ಕಿಂತ ಹೆಕ್ಟರ್ ಪ್ರದೇಶಕ್ಕೆ ನೀರಾವರಿ, ಕುಡಿಯುವ ನೀರಿನ ಮಹತ್ವದ ಯೋಜನೆ ಇದಾಗಿದ್ದು, ಇದರಿಂದ ಬಹಳ ಅನುಕೂಲವಾಗಲಿದೆ. ರಾಷ್ಟ್ರೀಯ ಯೋಜನೆಯಾಗಿ ಮಾಡುವಂತೆ ಮೊದಲೇ ಪ್ತಸ್ತಾವನೆ ಕಳಿಸಿದ್ದೆವು. ಹೀಗಾಗಿ 5300 ಕೋಟಿ ನೀಡಿದ್ದು ಸ್ವಾಗತಾರ್ಹ. ಕರ್ನಾಟಕದ ಹಲವಾರು ಯೋಜನೆಗಳಲ್ಲಿ ಇದು ಮೊದಲು ರಾಷ್ಟ್ರೀಯ ಯೋಜನೆ. ಈ ಯೋಜನೆಗೆ ಇಷ್ಟು ದೊಡ್ಡ ಪ್ರಮಾಣದ ಅನುದಾನ ಘೋಷಣೆ ಮಾಡಿದ್ದು ಸಂತಸದ ಸಂಗತಿ.

ಸಿ.ಸಿ. ಪಾಟೀಲ್‌, ಲೋಕೋಪಯೋಗಿ ಸಚಿವ
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಘೋಷಿಸಿದ್ದ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೂಲಮಂತ್ರದ ಆಶಯ ಇಂದು ಕೇಂದ್ರ ಸರ್ಕಾರದ ಮುಂಗಡ ಪತ್ರದಲ್ಲೂ ಸೇರಿರುವುದರಿಂದ ದೇಶದ ಸರ್ವಾಂಗೀಣ ಪ್ರಗತಿಗೆ ಇದು ಮತ್ತಷ್ಟು ಚಾಲನೆ ನೀಡಲಿದೆ. ಬಜೆಟ್ಟಿನಲ್ಲಿ ಘೋಷಿಸಲಾದ ಕಾರ್ಯಕ್ರಮಗಳಿಂದ ಮುಖ್ಯವಾಗಿ ಬಡವರು ಮಧ್ಯಮ ವರ್ಗದವರು, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

ಮುರುಗೇಶ್‌ ನಿರಾಣಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ
ಕೋವಿಡ್ ನಂತರವೂ ಭಾರತ ತನ್ನ ಆರ್ಥಿಕತೆಯ ವೇಗದಿಂದಾಗಿ ಜಗತ್ತಿನ ಗಮನ ಸೆಳೆದಿದೆ. ರೈಲ್ವೆ ಇಲಾಖೆಯಲ್ಲಿ ಹೆಚ್ಚಿನ ಹಣ ಹೂಡಿಕೆ, ಯುವ ಉದ್ಯಮಿಗಳು, ಕೃಷಿ ಸ್ಟಾರ್ಟಪ್‍ಗಳಿಗೆ ಉತ್ತೇಜನ, ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಿದ್ದು, ಒಂದು ಜಿಲ್ಲೆ- ಒಂದು ಉತ್ಪನ್ನಕ್ಕೆ ಪ್ರೋತ್ಸಾಹ ಕೊಟ್ಟ ಆಯವ್ಯಯ ಪತ್ರ ಇದಾಗಿದೆ ಎಂದು ತಿಳಿಸಿದ್ದಾರೆ.

ಬಿ.ಎಸ್.‌ ಯಡಿಯೂರಪ್ಪ, ಮಾಜಿ ಸಿಎಂ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌, ಭವಿಷ್ಯವನ್ನು ಗಮನದಲ್ಲಿರಿಸಿಕೊಂಡಿದೆ. 2025ಕ್ಕೆ ಭಾರತವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯಾಗಿಸುವತ್ತ ಹೆಜ್ಜೆ ಇಟ್ಟಿದೆ. ಮಧ್ಯಮ ವರ್ಗದ ಕಾಳಜಿಯನ್ನು ಈ ಬಜೆಟ್‌ ಹೊಂದಿದೆ ಹಾಗೂ ಎಲ್ಲ ವರ್ಗದವರಿಗೂ ಒಂದಲ್ಲ ಒಂದು ಅನುಕೂಲವನ್ನು ನೀಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಾನು ಅಭಿನಂದಿಸುತ್ತೇನೆ.

ಅರುಣ್‌ ಸಿಂಗ್‌, ರಾಜ್ಯ ಬಿಜೆಪಿ ಪ್ರಭಾರಿ
ಅತ್ಯಧಿಕ ಬಂಡವಾಳ ಹೂಡಿಕೆಯೊಂದಿಗೆ ಗಮನಾರ್ಹ ಬೆಳವಣಿಗೆ ಆಧಾರಿತ ಬಜೆಟ್, ಯುವಕರಿಗೆ ನವೀನ ಕೌಶಲ್ಯದ ಯೋಜನೆಗಳು, ಮಧ್ಯಮವರ್ಗಕ್ಕೆ ಅನೇಕ ಪ್ರಯೋಜನಗಳು, ಅಂತ್ಯೋದಯಕ್ಕೆ ಅತಿ ಹೆಚ್ಚಿನ ಆದ್ಯತೆ, ಹಸಿರು ಬೆಳವಣಿಗೆಗೆ ಉತ್ತೇಜನ. ವಿತ್ತಸಚಿವರಾದ ನಿರ್ಮಲಾ ಸೀತಾರಾಮನ್‌ ಅವರಿಗೆ ಅಭಿನಂದನೆಗಳು.

ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷ ನಾಯಕ
2022 ರಲ್ಲಿ 16.61 ಲಕ್ಷ ಸಾಲ ಮಾಡ್ತೀವಿ ಎಂದು ಹೇಳಿದ್ರು. 17.55 ಲಕ್ಷ ಸಾಲ ಮಾಡಿದ್ದಾರೆ. ಬಡ್ಡಿ ಕೊಡುವುದೇ 42 ಶೇಕಡಾ ಆಗುತ್ತೆ. ನೂರು ರೂಪಾಯಿ ಆದಾಯದಲ್ಲಿ 42 ರೂಪಾಯಿ ಬಡ್ಡಿಗೆ ಹೋಗುತ್ತೆ. 54.90 ಲಕ್ಷ ಕೋಟಿ ರೂ. ಮನಮೋಹನ್ ಸಿಂಗ್ ಕಾಲದವರೆಗೂ ಆಗಿತ್ತು.. ಇದು ನೆಹರೂ ಕಾಲದಿಂದ ಆದ ಸಾಲ. 1.10 ಲಕ್ಷ ಕೋಟಿ ರೂ. ಮೋದಿ ಸಾಲ ಮಾಡಿದ್ದಾರೆ. ಇದು ಮೋದಿ ಕೊನೆಯ ಬಜೆಟ್. ಮುಂದಿನ ವರ್ಷ ಎಲೆಕ್ಷನ್ ಬಜೆಟ್ ಮಾಡ್ತಾರೆ.
118 ಲಕ್ಷ ಕೋಟಿ ಸಾಲವನ್ನ ಹತ್ತು ವರ್ಷಗಳಲ್ಲಿ ಮಾಡಿದ್ದಾರೆ. ಇದು ಅತ್ಯಂತ ನಿರಾಶಾದಾಯಕ ಬಜೆಟ್.
ಕೃಷಿ, ಗ್ರಾಮೀಣ, ಸಮಾಜ ಕಲ್ಯಾಣ ಇಲಾಖೆಗೆ ಹೆಚ್ಚು ಏನು ಕೊಟ್ಟಿಲ್ಲ. ನರೇಗಾಗೆ ಕಡಿಮೆ ಮಾಡಿದ್ದಾರೆ. ಉದ್ಯೋಗ ಕೊಡುವವರಿಗೆ ಕಡಿತ ಮಾಡಿದ್ದಾರೆ. 29 ಸಾವಿರ ಕೋಟಿ ಖೋತಾ ಮಾಡಿದ್ದಾರೆ. 2022 ನೋಡಿದ್ರೆ 23 ಕ್ಕೆ ಕಡಿಮೆ ಮಾಡಿದ್ದಾರೆ. ರಾಜ್ಯಕ್ಕೆ ಏನೂ ಮಾಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಇನ್ನೂ ಡಿಪಿಆರ್ ಆಗದೇ ಏನು ಮಾಡಲು ಆಗಲ್ಲ. ಕೇಂದ್ರ ಸರ್ಕಾರ ಅನುಮತಿ ಕೊಡದೇ ಏನೂ ಆಗುವುದಿಲ್ಲ. ಇದನ್ನ ರಾಷ್ಟ್ರೀಯ ಯೋಜನೆ ಮಾಡ್ತೀವಿ ಎಂದು ಹೇಳಿದ್ರು. ಅದನ್ನು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ. ನೋಟಿಪಿಕೇಷನ್ ಜಾರಿ ಮಾಡಿದ ಮೇಲೆ ಇದು ಅಪ್ಲೇ ಆಗುತ್ತೆ. ಮೇಕೆದಾಟು ಯೋಜನೆ ಗೆ ಒಂದು ಸಾವಿರ ಕೊಟ್ರು ಏನಾಯಿತು? ಅದು ಡಿಪಿಆರ್ ಸಹ ಆಗಲಿಲ್ಲ. ಇದು ನಾವು ಸಣ್ಣ ಮಕ್ಕಳು ಇದ್ದಾಗ ಬಾಂಬೆ ನೋಡಿ ಅಂತ ಬರ್ತಿದ್ರು. ಹಾಗೇ ಆಗಿದೆ ಇವರ ಅನೌನ್ಸ್ಮೆಂಟ್. ಇದು ಕನ್ನಡಿ ಒಳಗಿನ ಒಂದು ಗಂಟು ಅಷ್ಟೇ.

ಬೈರತಿ ಬಸವರಾಜ್‌, ನಗರಾಭಿವೃದ್ಧಿ ಸಚಿವ
ಕೇಂದ್ರ ಸರ್ಕಾರದ 2023-24ನೇ ಆಯವ್ಯಯದಲ್ಲಿ ಕರ್ನಾಟಕದ ಅಭಿವೃದ್ಧಿಯನ್ನು ದೃಷ್ಠಿಯಲ್ಲಿಟ್ಟುಕೊಂಡಿರುವುದು ನಮ್ಮ ಡಬಲ್ ಇಂಜಿನ್ ಸರ್ಕಾರದ ಕೊಡುಗೆ. ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ನೇತೃತ್ವದ ಎನ್.ಡಿ.ಎ. ಸರ್ಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಪರಿಕಲ್ಪನೆಯಲ್ಲಿ ಕೇಂದ್ರದ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸರ್ವರ ಅಭಿವೃದ್ಧಿಗೆ ಪೂರಕವಾಗಿಯೇ ಬಜೆಟ್ ಮಂಡಿಸಿದ್ದಾರೆ.

ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವು ಈ ಬಜೆಟ್‌ನಲ್ಲಿ 5,300 ಕೋಟಿ ರೂ.ಮೀಸಲಿಟ್ಟಿದೆ. ಈ ಮೂಲಕ ಐದು ದಶಕಗಳ ಬೇಡಿಕೆಯನ್ನು ಈಡೇರಿಸಿದೆ. ಈ ಐತಿಹಾಸಿಕ ಯೋಜನೆಯೂ ರೈತರಿಗೆ ವರದಾನವಾಗಲಿದೆ. ಇಂತಹ ಅತ್ಯುತ್ತಮ ಬಜೆಟ್‌ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಅಭಿನಂದನೆಗಳು.ಎಲ್ಲ ಭಾರತೀಯರ ಆಶೋತ್ತರಗಳ ಕುರಿತೂ ಕಾಳಜಿ ಹೊಂದಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ಗೆ ಅನುಗುಣವಾಗಿದೆ.

ಡಾ. ಕೆ. ಸುಧಾಕರ್‌, ಆರೋಗ್ಯ ಸಚಿವ
2104 ರಿಂದ ದೇಶದಲ್ಲಿ ವಿವಿಧೆಡೆ 157 ಮೆಡಿಕಲ್‌ ಕಾಲೇಜುಗಳನ್ನು ಆರಂಭಿಸಿದ್ದು, ಈ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್‌ ಕಾಲೇಜುಗಳನ್ನು ಆರಂಭಿಸುವುದಾಗಿ ತಿಳಿಸಲಾಗಿದೆ. ಸಿಕಲ್‌ ಸೆಲ್‌ ಅನೀಮಿಯಾದ ನಿವಾರಣೆಗಾಗಿ ಪ್ರತ್ಯೇಕವಾದ ಅಭಿಯಾನ ಆರಂಭಿಸಲಾಗುತ್ತದೆ. ಫಾರ್ಮಾ ಉದ್ಯಮದಲ್ಲಿ ಸಂಶೋಧನೆಗೆ ಪ್ರೋತ್ಸಾಹಿಸಲು ಕಾರ್ಯಕ್ರಮ, ನಿಗದಿತ ಐಸಿಎಂಆರ್‌ ಲ್ಯಾಬ್‌ಗಳಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಸಂಶೋಧನೆಗೆ ಕಾರ್ಯಕ್ರಮ ರೂಪಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ. ಇವು ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಉತ್ತಮ ಕೊಡುಗೆಗಳು.

ಎಸ್‌.ಟಿ. ಸೋಮಶೇಖರ್‌, ಸಹಕಾರ ಸಚಿವ
ಕೇಂದ್ರ ಸರ್ಕಾರದ ಈ ಸಾಲಿನ ಬಜೆಟ್‌, ಜನಪರ ಬಜೆಟ್. ಸಮಾಜದ ಎಲ್ಲ ವರ್ಗಗಳ ನಿರೀಕ್ಷೆಯನ್ನು ಪೂರೈಸಲಿದೆ. ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ರೂಪಿಸಿದ ಬಜೆಟ್ ಇದಾಗಿದೆ. 7 ಲಕ್ಷದವರೆಗೆ ವೈಯಕ್ತಿಕ ತೆರಿಗೆ ವಿನಾಯ್ತಿ, ಕೃಷಿ ಸಾಲಕ್ಕೆ 20 ಲಕ್ಷ ಕೋಟಿ ರೂ. ಮಿಸಲು, 50 ಹೊಸ ಏರ್ ಪೋರ್ಟ್ ಗಳ ಸ್ಥಾಪನೆ, ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ ಸೇರಿದಂತೆ ಹತ್ತು ಹಲವು ಯೋಜನೆಗಳ ಘೋಷಣೆ ಮಾಡಲಾಗಿದೆ. ಒಟ್ಟಾರೆ ಈ ಬಜೆಟ್ ಎಲ್ಲಾ ವರ್ಗದ ಜನತೆಯನ್ನು ಒಳಗೊಂಡ ಜನಪರ ಬಜೆಟ್.

ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ ರಚನಾತ್ಮಕ ನೀತಿಗಳ ಪ್ರತಿಫಲನವಾಗಿದೆ. ಇದು ಸಮಾಜದ ಆಧಾರಸ್ತಂಭವಾದ ರೈತರು, ದೀನದಲಿತರು, ಮಹಿಳೆಯರು ಕುಶಲಕರ್ಮಿಗಳು, ಯುವಜನರು, ಉದ್ಯಮಿಗಳು ಮತ್ತು ತೆರಿಗೆದಾರರ ಸಬಲೀಕರಣ ಮತ್ತು ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡಿದೆ. ಇದರ ಜತೆಯಲ್ಲೇ ಶಿಕ್ಷಣ, ಕೌಶಲ್ಯ, ಮೂಲಸೌಕರ್ಯ ಮತ್ತು ವೈಜ್ಞಾನಿಕ ನಗರೀಕರಣಕ್ಕೆ ಒತ್ತು ಕೊಡುವ ಹೊಸ ದೃಷ್ಟಿಕೋನವೂ ಇದರಲ್ಲಿದೆ.

ವಿ. ಸುನಿಲ್‌ಕುಮಾರ್‌, ಇಂಧನ ಸಚಿವ
ಹಸಿರು ಇಂಧನ ಕ್ಷೇತ್ರವನ್ನು ಆದ್ಯತಾ ವಲಯವಾಗಿ ಗುರುತಿಸಲಾಗಿದ್ದು, ೨೦೩೦ ರ ವೇಳೆಗೆ ೫ ಎಂಎಂಟಿ ಹಸಿರು ಹೈಡ್ರೋಜನ್ ಉತ್ಪಾದನಾ ಗುರಿ ನಿಗದಿ ಮಾಡಲಾಗಿದ್ದು, ೩೫೦೦೦ ಕೋಟಿ ರೂ. ಹೂಡಿಕೆಗೆ ನಿರ್ಧರಿಸಿರುವುದು ಸ್ವಾಗತಾರ್ಹ. ಇದು ರಾಜ್ಯಗಳ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಬಂಡವಾಳ ಹೂಡಿಕೆ ಮಿತಿಯನ್ನು ೧೦ ಲಕ್ಷ ಕೋಟಿಗೆ ಹೆಚ್ಚಳ‌ ಮಾಡಲಾಗಿದ್ದು, ಇದು ಜಿಡಿಪಿಯ ಶೇ.೩.೩ ರಷ್ಟಾಗುತ್ತದೆ. ಇದು ಭಾರತದ ಬದಲಾದ ಆರ್ಥಿಕ ಶಕ್ತಿಗೆ ನಿದರ್ಶನ ಎಂದು ಹೇಳಿದ್ದಾರೆ. ಕೊರೋನಾ ಕಾಲಘಟದಲ್ಲಿ ದೇಶದ ಯಾವೊಬ್ಬ ಪ್ರಜೆಯೂ ಹಸಿದಿರಬಾರದೆಂಬ ಕಾರಣಕ್ಕೆ ಪಿಎಂ ಗರೀಬ್ ಕಲ್ಯಾಣ ಯೋಜನೆಯಲ್ಲಿ ಉಚಿತವಾಗಿ ಅಕ್ಕಿ ಹಾಗೂ ಧಾನ್ಯ ವಿತರಣೆ ಮಾಡಲಾಗಿತ್ತು. ಮುಂದಿನ ಒಂದು ವರ್ಷದ ಅವಧಿಗೆ ಈ ಯೋಜನೆ ವಿಸ್ತರಣೆ ಮಾಡಿರುವುದು ಕೇಂದ್ರ ಸರ್ಕಾರದ ಮಾತೃ ಹೃದಯದ ಸಂಕೇತ‌.

ಡಿ.ಕೆ ಸುರೇಶ್, ಕಾಂಗ್ರೆಸ್‌ ಸಂಸದ
ಒಂಬತ್ತನೇ ಬಜೆಟ್ ಅನ್ನು ಮೋದಿ ಸರ್ಕಾರ ಮಂಡಿಸಿದೆ. ಸುದೀರ್ಘವಾದ, ಮಾರ್ಮಿಕವಾದ ಬಜೆಟ್ ಮಂಡಿಸಿದ್ದಾರೆ. ಇದು ಅಮೃತ್ ಕಾಲದ ಬಜೆಟ್ ಎಂದರು. ಇದು ಅಮೃತ್ ಕಾಲದ ಅಥಾವ ಅದಾನಿ ಕಾಲದ ಅಥಾವ ಆಮ್ ಅದ್ಮಿ ಬಜೆಟ್‌ನಲ್ಲಿ ಯಾವುದು ಎಂದು ಗೊತ್ತಾಗುತ್ತಿಲ್ಲ. ಕರ್ನಾಟಕ, ದೇಶದ ಯುವಕರು ರೈತರ ಪಾಲಿಗೆ ಏನನ್ನು ಕೊಡದ ಡಬ್ಬಾ ಬಜೆಟ್ ಇದು. ಮೋದಿಯ ಸುಳ್ಳು ಭರವಸೆ ಮುಂದುವರಿದಿದೆ. ಕೃಷಿ ಆದಾಯ ದ್ವಿಗುಣ ಮಾಡ್ತಿವಿ ಎಂದಿದ್ದರು. ಜಿಡಿಪಿ, ತಲಾ ಆದಾಯ ಹೆಚ್ಚಿದೆ ಎಂದು ಹಣಕಾಸು ಸಚಿವರು ಹೇಳಿದರು. ಯಾರ ಆದಾಯ ಹೆಚ್ಚಾಗಿದೆ ಎಂದು ಹೇಳಿಲ್ಲ. ಸಿರಿಧಾನ್ಯಗಳಿಗೆ ಹೊಸ ಹೆಸರಿಟ್ಟು ಅವುಗಳನ್ನು ನೆನಪಿಸಿಕೊಂಡಿದ್ದಾರೆ. ಹೆಸರು ಬದಲಿಸುವ ಪದ್ದತಿ ಮುಂದುವರಿಸಿದ್ದಾರೆ. ಕೊವೀಡ್ ನಿಂದ ತತ್ತರಿಸಿದ ಜನರಿಗೆ ಯಾವುದೇ ಪರಿಹಾರ ನೀಡಿಲ್ಲ. ಕರ್ಮಯೋಗಿ ಯೋಜನೆ ಘೋಷಣೆ ಮಾಡಿದ್ದಾರೆ, ಆದರೆ ಉದ್ಯೋಗ ಸೃಷ್ಟಿಸಿಲ್ಲ. ಹೆಣ್ಣ ಮಕ್ಕಳು ಹಿರಿಯ ನಾಗರಿಕರಿಗೆ ಎರಡು ಲಕ್ಷದ ಬಾಂಡ್ ಮಾಡಿದ್ದಾರೆ. ಆದಾನಿಗೆ ಹಣ ಹೊಂದಾಣಿಕೆ ಮಾಡಲು ಈ ನಿರ್ಧಾರ ಮಾಡಿರಬಹುದು. ಈಗಾಗಲೇ ಎಲ್‌ಐಸಿಯನ್ನು ನಷ್ಟದಲ್ಲಿರುವಂತೆ ಮಾಡಿದೆ. ಅದಕ್ಕಾಗಿ ಹೊಸ ಪ್ಲ್ಯಾನ್ ಮಾಡಿರುವಂತಿದೆ. ಬೆಲೆ ಏರಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಸರಿಪಡಿಸಲು ಏನು ಮಾಡ್ತಿದ್ದಿವಿ ಅಂತಾ ಹೇಳಿಲ್ಲ. ಆದಾಯ ತೆರಿಗೆ ವಿನಾಯಿತಿ ಕೂಡಾ ಚುನಾವಣಾ ರಾಜಕೀಯ ಅಷ್ಟೇ. ಇದೊಂದು ಡಬ್ಬಾ ಬಜೆಟ್, 130 ಕೋಟಿ ಜನರನ್ನು ಮೋಸ ಮಾಡುವ ಶೂನ್ಯ ಬಜೆಟ್.

ಎಲ್. ಹನುಮಂತಯ್ಯ, ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ
ಸಾಮಾನ್ಯ ವ್ಯಕ್ತಿಗೆ ಯಾವ ಅನುಕೂಲ ಆಗಿಲ್ಲ. ಇದು ಆಮ್ ಅದ್ಮಿ ಬಜೆಟ್ ಅಲ್ಲ, ಆದಾಯ ಹೆಚ್ಚಿರುವ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಆದಾಯ ಹೆಚ್ಚು ಮಾಡುವ ಕೆಲಸ ಆಗಿಲ್ಲ. ಮೋದಿ ಅಧಿಕಾರಕ್ಕೆ ಬರುವಾಗ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದರು. ಆದರೆ ಅದಕ್ಕೆ ಪೂರಕ ಅಂಶಗಳನ್ನು ಸೇರಿಸಿಲ್ಲ. ಯಾರು ಕಷ್ಟದಲ್ಲಿದ್ದಾರೆ ಅವರಿಗೆ ಪರಿಹಾರ ಕೊಡುವ ಕೆಲಸ ಮಾಡಿಲ್ಲ. ಆದಾಯ ತೆರಿಗೆ ಸ್ಲಾಬ್ ಬದಲು ಮಾಡಿರುವುದು ಬಿಟ್ಟು ಬೇರೇನೂ ಮಾಡಿಲ್ಲ. ಹೀಗಾಗಿ ಇದನ್ನು ಶ್ರೀಮಂತ ಲರ ಬಜೆಟ್ ಎಂದು ಕರೆಯಬಹುದು. ಶಿಕ್ಷಣ ಕ್ಷೇತ್ರ ಪುನರುಜ್ಜೀವನಗೊಳಿಸುವ ಕೆಲಸ ಆಗಿಲ್ಲ. ವಿವಿಗಳಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅವಕಾಶ ನೀಡಿಲ್ಲ. ಕೃಷಿಗೂ ಬಜೆಟ್ ನಲ್ಲಿ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಬೆಂಬಲ ಬೇಡಿಕೆ ಘೋಷಣೆ ಮಾಡಿಲ್ಲ. ಕೃಷಿ ಕಾರ್ಮಿಕರಿಗೆ ಪೂರಕ ಘೋಷಣೆಗಳಿಲ್ಲ. ಭಾರತದ ಬಡ ಜನರಿಗೆ ಈ ಬಜೆಟ್ ನಿಂದ ಏನು ಸಿಕ್ಕಿಲ್ಲ.

ಎಂ.ಬಿ. ಪಾಟೀಲ್‌, ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ
ಇದು ಘೋಷಣೆಗಳ ಬಜೆಟ್ ಆಗಿದೆ. ಪೆಟ್ರೋಲ್, ಡೀಸೆಲ್ ಗ್ಯಾಸ್, ರಸಗೊಬ್ಬರ ದರ ಕಡಿಮೆ ಆಗಿಲಿದೆ ಅಂತ ಜನರ ನಿರೀಕ್ಷೆ ಇತ್ತು. ಕೊರೊನಾ ಸಮಯದಲ್ಲಿ 20 ಲಕ್ಷ ಕೋಟಿ ಅನೌನ್ಸ್ ಮಾಡಿದ್ದರು. ಕೊರೊನಾದಿಂದ ಸತ್ತವರು, ಕೊರೊನಾ ವಾರಿಯರ್ಸ್ ಗೆ ಕೊಡ್ತೀವಿ ಅಂತ ಹೇಳಿದ್ದರು. ಕೆಲವು ಕಸುಬುದಾರರಿಗೆ ಯಾವುದೂ ಬೆಂಬಲ ಸಿಗಲಿಲ್ಲ. 20 ಲಕ್ಷ ಕೋಟಿ ಯಾರಿಗೂ ಸಿಕ್ಕಿಲ್ಲ. ಅದೇ ರೀತಿಯ ಬಜೆಟ್ ಅಷ್ಟೆ ಇದು. ಎರಡು ಕೋಟಿ ಉದ್ಯೋಗ ಸೃಷ್ಟಿ ಅಂದರು. ಯಾರಿಗೆ ಸಿಕ್ತು ಹಾಗಾದ್ರೆ ಉದ್ಯೋಗ? ಆತ್ಮನಿರ್ಭರ, ಮೇಕ್ ಇನ್ ಇಂಡಿಯ ಅಂತ ಬಹಳ ಚೆನ್ನಾಗಿ ಮಾತಾಡ್ತಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಆಗಿದೆಯಾ? 2014 ರವರೆಗೆ 55 ಲಕ್ಷ ಕೋಟಿ ಸಾಲ ಇತ್ತು. 2014-23 ರ ವರೆಗೆ 169 ಲಕ್ಷ ಕೋಟಿ ಸಾಲ ಆಗಿದೆ. ಆದಾಯ ತೆರಿಗೆ ವಿನಾಯ್ತಿ ನೀಡಿದ್ದಾರೆ. ಆಹಾರ ಪದಾರ್ಥ ದರ ಎಲ್ಲವೂ ಜಾಸ್ತಿ ಆಗಿದ್ದಾವೆ. ತೆರಿಗೆ ವಿನಾಯ್ತಿಯಿಂದ ಬಡ, ಮಧ್ಯಮ ವರ್ಗದವರಿಗೆ ಏನು ಲಾಭ? ಮಹಿಳೆಗೆ ಶಕ್ತಿ ತುಂಬುವ ಕೆಲಸ ಆಗಬೇಕಿತ್ತು. ವಿದ್ಯಾರ್ಥಿಗಳಿಗೆ ಏನು ಸಿಕ್ಕದೆ? ಸಬ್ ಕೆ ಸಾಥ್ ಸಬ್ ಕೆ ವಿಕಾಸ್ ಅಂತಾರೆ. ಉದ್ಯೋಗ ಸೃಷ್ಟಿ ಶೂನ್ಯವಾಗಿದೆ. ಅಪ್ಪರ್ ಭದ್ರ ಯೋಜನೆ ನ್ಯಾಷನಲ್ ಪ್ರಾಜೆಕ್ಟ್ ಗೆ ಆಯ್ಕೆಯಾಗಿದೆ. ಹಿಂದಿನ ಸರ್ಕಾರ ಇದ್ದಾಗಲೇ ಎಲ್ಲವೂ ಕ್ಲಿಯರ್ ಆಗಿತ್ತು ಹೀಗಾಗಿ ಹಣ ನೀಡಿದ್ದಾರೆ. ಇದನ್ನು ಸಂಭ್ರಮಿಸ್ತಾ ಇದ್ದಾರೆ ಅಷ್ಟೆ.

ಟಿ.ಎ.ಶರವಣ, ಜೆಡಿಎಸ್‌ ವಿಧಾನ ಪರಿಷತ್ ಸದಸ್ಯ
ಕೇಂದ್ರ ಸರ್ಕಾರದ ಚುನಾವಣೆ ಕಾಲದ ಬಜೆಟ್ನಲ್ಲಿ ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 5300ಕೋಟಿ ರೂಪಾಯಿ ಬಿಡುಗಡೆ ಮಾಡಿರುವ ಕ್ರಮ ಸ್ವಾಗತಾರ್ಹ ವಾಗಿದೆ. ಆದರೂ ರಾಜ್ಯಕ್ಕೆ ಚುನಾವಣೆ ಕಾಲದಲ್ಲಾದರೂ ಇನ್ನಷ್ಟು ಹೊಸ ಯೋಜನೆಗಳು ಬರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಮೂಲಭೂತ ಸೌಕರ್ಯ, ನಿರುದ್ಯೋಗ ನಿವಾರಣೆ, ನಗರಾಭಿವೃದ್ದಿ ವಿಚಾರದಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಮೀಸಲಿಡಲಾಗಿದೆ ಆದರೂ, ಕರ್ನಾಟಕದ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲದ ಬಜೆಟ್ ಇದಾಗಿದೆ. ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಮಹದಾಯಿ, ಮೇಕೆದಾಟು ಯೋಜನೆಗಳ ವಿಚಾರದಲ್ಲಿ ಬಜೆಟ್ ಯಾವ ಸ್ಪಂದನೆಯನ್ನು ನೀಡಿಲ್ಲ.
ಈ ನಿಟ್ಟಿನಲ್ಲಿ ರಾಜ್ಯದ ಒತ್ತಡಕ್ಕೆ ಕೇಂದ್ರ ಮಣಿದಿಲ್ಲ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳುವ ರೀತಿ ಡಬಲ್ ಇಂಜಿನ್ ಸರಕಾರದ ಸಾಧನೆ , ಸಮನ್ವಯತೆ ಸುಳ್ಳು ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ನಳಿನ್‌ ಕುಮಾರ್‌ ಕಟೀಲ್‌, ರಾಜ್ಯ ಬಿಜೆಪಿ ಅಧ್ಯಕ್ಷ
ಭಾರತವು ಜಗದ್ವಂದ್ಯ ರಾಷ್ಟ್ರವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೇಂದ್ರದ ನೂತನ ಬಜೆಟ್‍ನಲ್ಲಿ ಪ್ರಕಟಿಸಲಾಗಿದೆ. ಇದು ಕರ್ನಾಟಕ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಹೊಂದಿದ ಬಜೆಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೂಲಸೌಕರ್ಯ ಕ್ಷೇತ್ರದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ಅನುದಾನ ನೀಡಿದ್ದು, ಮನೆಮನೆಗೆ ನಳ್ಳಿ ನೀರು (ಹರ್ ಘರ್ ಜಲ್) ಯೋಜನೆಯ ವೇಗವರ್ಧನೆಗೆ ಕಾರಣ ಆಗಲಿದೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳು.

ಎಂ.ಟಿ.ಬಿ. ನಾಗರಾಜು, ಪೌರಾಡಳಿತ ಸಚಿವ
ಈ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯದ ಬಯಲು ಸೀಮೆಯ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ₹ 5,300 ಕೋಟಿ ಅನುದಾನ ಪ್ರಕಟಿಸಿರುವ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು.

ಶಶಿಕಲಾ ಅ ಜೊಲ್ಲೆ, ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ
ಎಲ್ಲಾ ವರ್ಗಗಳ ಅಭ್ಯುದಯಕ್ಕೆ ಅಮೃತ ಸಿಂಚನ ನೀಡುವಂತಹ ಬಜೆಟನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದಾರೆ. ಸಪ್ತ ಪ್ರಮುಖಾಂಶಗಳ ಆಧಾರದ ಮೇಲೆ ಇಂದು ಮಂಡಿಸಲಾಗಿರುವ ಕೇಂದ್ರ ಆಯವ್ಯಯ ಎಲ್ಲಾ ವರ್ಗಗಳ ಅಭಿವೃದ್ದಿಗೆ ಪೂರಕವಾಗಿದೆ. ಮಹಿಳೆಯರ ಸಬಲೀಕರಣಕ್ಕೆ ಹಾಗೂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎನ್‌ಡಿಎ ಸರ್ಕಾರ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎನ್ನುವ ಪರಿಕಲ್ಪನೆಯನ್ನ ಮುಂದುವರೆಸಿದ್ದು, ಸರ್ವರ ಅಭಿವೃದ್ದಿಗೆ ಪೂರಕವಾದ ಆಯವ್ಯಯ ಮಂಡಿಸಿದ್ದಾರೆ. ದೇಶದಲ್ಲಿ ಮೂಲಸೌಕರ್ಯಗಳ ಅಭಿವೃದ್ದಿಗೆ 10 ಲಕ್ಷ ಕೋಟಿ, ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ಘೋಷಿಸಿರುವುದು ಸ್ವಾಗತಾರ್ಹ. ಸಾರಿಗೆ ಸಂಪರ್ಕ ಹೆಚ್ಚಳಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಅಭಿವೃದ್ದಿಗೆ ಇನ್ನಷ್ಟು ಪುಷ್ಟಿ ನೀಡಲಿದೆ.

ಕುರುಬೂರು ಶಾಂತಕುಮಾರ್‌, ರೈತ ಮುಖಂಡ
ಬಜೆಟ್ ನಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಹೆಚ್ಚು ಒತ್ತು ನೀಡಿರುವುದು, ಬಡವರಿಗೆ ಒಂದು ವರ್ಷ ಉಚಿತ ಆಹಾರ ವಿತರಣೆ, ಸಿರಿಧಾನ್ಯಗಳ ಉತ್ಪಾದನೆಗೆ ಒತ್ತು ನೀಡಿರುವುದು, ಒಳ್ಳೆಯ ಬೆಳವಣಿಗೆ, ಮಧ್ಯಮ ವರ್ಗಕ್ಕೆ ಸಹಕಾರಿಯಾಗಿದೆ. ಆದರೆ ಕೃಷಿಯಿಂದ ರೈತರ ಮಕ್ಕಳು ವಲಸೆ ಹೋಗುತ್ತಿರುವುದನ್ನು ತಪ್ಪಿಸಲು ಬೇಕಾದ ಯಾವುದೇ ಯೋಜನೆಗಳು ಇಲ್ಲ ,ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಸಿಗುವಂತಹ, ಯೋಜನೆ ಜಾರಿ ಬಗ್ಗೆ ಸ್ಪಷ್ಟ ನಿರ್ಧಾರವೆ ಇಲ್ಲ, ಪ್ರಕಟವಾಗಿಲ್ಲ, ಬಡ್ಡಿ ರಹಿತ ಸಾಲ ನೀಡುವ ಕೃಷಿ ಸಾಲ ನೀತಿಯ ಬಗ್ಗೆಯಾಗಲಿ ಯಾವುದೇ ನಿರ್ಧಾರ ಬಂದಿಲ್ಲ ಕೃಷಿ ಕ್ಷೇತ್ರಕ್ಕೆ ನಿರಾಸದಾಯಕವಾದ ಬಜೆಟ್ ಆಗಿದೆ, ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಬಜೆಟ್ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Exit mobile version