Site icon Vistara News

Building collapse bangalore | ಅವೆನ್ಯೂ ರೋಡ್‌ನಲ್ಲಿ ಕುಸಿದ 100 ವರ್ಷದ 3 ಅಂತಸ್ತಿನ ಕಟ್ಟಡ

Building collapse bangalore

ಬೆಂಗಳೂರು: ಇಲ್ಲಿನ ಅವೆನ್ಯೂ ರಸ್ತೆಯ ಬೆಳ್ಳಿ ಬಸವ ದೇವಸ್ಥಾನದ ಹತ್ತಿರ ನೂರು ವರ್ಷದ ಮೂರು ಅಂತಸ್ತಿನ ಕಟ್ಟಡ (Building collapse bangalore) ಕುಸಿದು ಬಿದ್ದಿದೆ. ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಕಟ್ಟದ ಕುಸಿದು ಬಿದ್ದಿದೆ ಎನ್ನಲಾಗಿದೆ. ಪ್ಲಾಸ್ಟಿಕ್ ಮತ್ತು ಗಿಫ್ಟ್ ಶಾಪ್‌ಗಳಿದ್ದ ಕಟ್ಟಡ ಇದಾಗಿದ್ದು, ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಕುಸಿದ ಕಟ್ಟಡದಲ್ಲಿ ಮೂರು ಅಂಗಡಿಗಳಿದ್ದು, 20ಕ್ಕೂ ಹೆಚ್ಚು ಮಂದಿ ಕೆಲಸ ನಿರ್ವಹಿಸಿದ್ದರು. ಎಲ್ಲರೂ ಕೆಲಸ ಮುಗಿಸಿ ಮನೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಹೀಗಾಗಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ‌. ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಕಟ್ಟಡ ತೆರವಿಗೆ ನೋಟಿಸ್‌ ನೀಡಿದ್ದ ಬಿಬಿಎಂಪಿ

ಕಟ್ಟಡಕ್ಕೆ ಮಹೇಂದ್ರ ಭಂಡಾರಿ, ಪ್ರತೀಕ್, ಅಶೋಕ್, ಪ್ರೇಮ್ ಚಂದ್ ಪ್ರಕಾಶ್ ಚಾಂದ್ ಎಂಬ ನಾಲ್ವರು ಮಾಲೀಕರು ಇದ್ದಾರೆ. ಕಟ್ಟಡ ತೆರವುಗೊಳಿಸುವಂತೆ ಸುಮಾರು 10 ವರ್ಷಗಳ ಹಿಂದೆ ಕಟ್ಟಡ ಮಾಲೀಕರಿಗೆ ಬಿಬಿಎಂಪಿ ನೋಟಿಸ್‌ ನೀಡಿದೆ. ಆದರೆ, ಕಟ್ಟಡ ಮಾಲೀಕರ ಮನಸ್ತಾಪದಿಂದ ಹಾಗೇ ಉಳಿದಿತ್ತು ಎನ್ನಲಾಗಿದೆ.

ಸ್ಥಳಕ್ಕೆ ಬಿಬಿಎಂಪಿ ಮಾಜಿ ಸದಸ್ಯ ಶಿವಕುಮಾರ್‌ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಶಿಥಿಲಾವಸ್ಥೆಯಲ್ಲಿದ್ದ ನೂರು ವರ್ಷದ ಹಳೇ ಕಟ್ಟಡವೊಂದು ಕುಸಿದು ಬಿದ್ದಿದೆ. ವ್ಯಾಪಾರಸ್ಥರು ವ್ಯಾಪಾರವನ್ನಷ್ಟೇ ಗಮನಹರಿಸಿದರೆ ಸಾಲದು ಕಟ್ಟಡಗಳ ಸುರಕ್ಷತೆ ಕುರಿತು ಮುಂಜಾಗ್ರತಾ ಕ್ರಮ ವಹಿಸಬೇಕು. ಜನಸಂಚಾರದ ವೇಳೆ ಈ ಪ್ರಮಾದವಾಗಿದ್ದರೆ ಸಾವು-ನೋವು ಸಂಭವಿಸುತ್ತಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ‌. ಕಟ್ಟಡದಲ್ಲಿ 30-40 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಇದನ್ನೂ ಓದಿ | Rain News | ರಾಜ್ಯದ ಹಲವೆಡೆ ಮುಂದುವರಿದ ಮಳೆ: ಶಾಲಾ ಕಟ್ಟಡ ಕುಸಿತ, ಆಕಳು-ಕರುಗಳ ಸಾವು

Exit mobile version